ಚಿಕ್ಕಬಳ್ಳಾಪುರ: ಅಕ್ಟೋಬರ್ 25ರವರೆಗೂ ಕಾಲುಬಾಯಿ ಜ್ವರದ ಲಸಿಕೆ ಅಭಿಯಾನ
ಚಿಕ್ಕಬಳ್ಳಾಪುರ, ಅಕ್ಟೋಬರ್, 06: ಜಾನುವಾರುಗಳ ಪಾಲಿಗೆ ಮಹಾಮಾರಿಯಾಗಿದ್ದ ಕಾಲುಬಾಯಿ ಜ್ವರಬಾಧೆ ನಿಯಂತ್ರಣಕ್ಕೆ ಪಶುಸಂಗೋಪನಾ ಇಲಾಖೆ ಸಕಲ ಸಿದ್ಧತೆಯೊಂದಿಗೆ ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಲಸಿಕೆ ನೀಡಲು ಮುಂದಾಗಿರುವುದರಿಂದ ಹೈನೋದ್ಯಮ ಅವಲಂಬಿತ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಹೈನುಗಾರಿಕೆಯೇ ಜೀವನಾಧಾರ. ಅದರಲ್ಲೂ ಪ್ರತಿ ಮಳೆಗಾಲದಲ್ಲೂ ಕಾಡುವ ಕಾಲುಬಾಯಿ ಜ್ವರಕ್ಕೆ ದುಬಾರಿ ಲಸಿಕೆಯೊಂದೇ ಪರಿಹಾರ. ಸದ್ಯ ಜಿಲ್ಲೆಯಲ್ಲಿ ಅಗತ್ಯ ಇರುವಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಿದ್ದು, ಸಮರೋಪಾದಿಯಲ್ಲಿ ಅಭಿಯಾನ ನಡೆಯುತ್ತಿದೆ.

ಅತಿ ದುಬಾರಿಯಾಗಿರುವ ಈ ಲಸಿಕೆ ಪೂರೈಕೆ ಮಳೆಗಾಲದಲ್ಲಿ ಆಗುವುದೇ ಕಷ್ಟ. ಮಳೆಗಾಲದಲ್ಲಿ ಹಸುಗಳನ್ನು ಹೆಚ್ಚಾಗಿ ಕಾಡುವ ಕಾಯಿಲೆ ಕಾಲುಬಾಯಿ ಜ್ವರ, ರೈತರು ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಯಾಮಾರಿದರೂ ಹಸುಗಳನ್ನು ಬಿಟ್ಟೂ ಬಿಡದೆ ಈ ರೋಗ ಕಾಡಲಿದೆ. ಹೀಗಾಗಿ ಎಲ್ಲ ರೈತರು ಸಕಾಲಕ್ಕೆ ಚುಚ್ಚುಮದ್ದನ್ನು ಕೊಡಿಸುವ ಮೂಲಕ ಹಸುಗಳನ್ನು ರಕ್ಷಣೆ ಮಾಡಬಹುದು.
ಪ್ರತಿ 6ರಿಂದ 8 ತಿಂಗಳಿಗೊಮ್ಮೆ ಕಾಲುಬಾಯಿ ಜ್ವರದ ಲಸಿಕೆ ಹಾಕಬೇಕು. ಆದರೆ ಈ ದುಬಾರಿ ಲಸಿಕೆ ವರ್ಷಕ್ಕೆ ಒಂದು ಬಾರಿ ಸಿಗುವುದೇ ಕಷ್ಟ. ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಈ ತಿಂಗಳ ಅಂದರೆ ಅಕ್ಟೋಬರ್ 25ರವರೆಗೂ ಲಸಿಕಾ ಅಭಿಯಾನ ನಡೆಯಲಿದೆ.
ಪೂರ್ಣ ಪ್ರಮಾಣದ ಲಸಿಕೆಯಾದರೆ ಮಾತ್ರ ಕಾಲು ಬಾಯಿ ಜ್ವರವನ್ನು ನಿಯಂತ್ರಿಸಬಹುದು. ಸದ್ಯಕ್ಕೆ ಜಿಲ್ಲೆಯಲ್ಲಿ 2.40 ಲಕ್ಷ ಜಾನುವಾರುಗಳಿದ್ದು, ಅಷ್ಟಕ್ಕೂ ಲಸಿಕೆ ಲಭ್ಯವಿದೆ. ಕಳೆದ ವರ್ಷ 1.84 ಲಕ್ಷ ಜಾನುವಾರಿಗೆ ಲಸಿಕೆ ಹಾಕಲಾಗಿತ್ತು. ಈ ಬಾರಿ 1.90 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಏನಿದು ಕಾಲುಬಾಯಿ ಜ್ವರ?
ಇದು ಒಂದು ವೈರಸ್ ಕಾಯಿಲೆ. ಗಾಳಿಯ ಮೂಲಕ ಹರಡಲಿವೆ. ಬಹುಬೇಗ ಒಂದರಿಂದ ಮತ್ತೊಂದಕ್ಕೆ ಸೋಂಕು ಹರಡಲಿದೆ. ಹಸುಗಳ ಬಾಯಿ ಮತ್ತು ಕಾಲಿನ ಗೊರಸಿನಲ್ಲಿಈ ಗೊರಸು ಕಾಣಿಸಿಕೊಳ್ಳಲಿದೆ. ಇದನ್ನು ಹೀಗಾಗಿ ಕಾಲುಬಾಯಿ ಜ್ವರ ಎಂದು ಕರೆಯಲಾಗುತ್ತದೆ. ಬಾಯಿಯಲ್ಲಿ ಜೊಲ್ಲಿನಿಂದ ಈ ವೈರಸ್ ಬೇಗ ಹರಡಲಿದೆ.
ಈ ಜೊಲ್ಲು ಸುಮಾರು 5 ಕಿಲೋ ಮೀಟರ್‌ವರೆಗೂ ಹರಡುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಬಿಸಿಲಿದ್ದರೆ ವೈರಸ್ ನಾಶವಾಗಲಿದೆ. ಈ ಜ್ವರ ಕಾಣಿಸಿಕೊಂಡರೆ ಹಾಲು ಉತ್ಪಾದನೆ ಕಡಿಮೆಯಾಗಲಿದ್ದು, ಹಸುಗಳು ಸೊರಗಿಬಿಡುತ್ತವೆ. ಮುಂಚೆಯೇ ಮುಂಜಾಗ್ರತೆ ವಹಿಸಿ ಈ ಕಾಯಿಲೆ ಬಾರದಂತೆ ತಡೆಯುವುದೇ ಉತ್ತಮ. ಇದಕ್ಕೆ ಲಸಿಕೆಯೊಂದೇ ರಾಮಬಾಣ,
ಮೊದಲನೆಯದಾಗಿ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಬೇಕು. ಕಾಲುಬಾಯಿ ಜ್ವರ ಬಂದರೆ ಸೋಡಾ ನೀರಿನಲ್ಲಿ ಬಾಯಿ ಮತ್ತು ಕಾಲನ್ನು ತೊಳೆಯಬೇಕು. ಇಲ್ಲವಾದಲ್ಲಿ ಜೇನುತುಪ್ಪ, ಆಹಿಣ ಮಿಶ್ರಣ ಮಾಡಿ ಹಚ್ಚಬೇಕು. ಪೊಟ್ಯಾಷಿಯಂ ಪರ್ಮಾಂಗನೇಟ್‌ನ್ನು ಬಳಸಿ ತೊಳೆಯುವುದರಿಂದ ವೈರಸ್ ಬೇಗ ನಾಶವಾಗಲಿದೆ.
ಜೊತೆಗೆ ಜ್ವರ ಕಡಿಮೆ ಮಾಡಲು ಆಂಟಿಬಯೋಟಿಕ್ ಮಾತ್ರೆ ಮತ್ತು ಇಂಜೆಕ್ಷನ್‌ಗಳನ್ನು ಕೊಡಬೇಕು. ಜ್ವರ ಬಂದ 5 ದಿನಗಳವರೆಗೆ ಹಸುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ರೈತರು ಯಾವ ವದಂತಿಗೂ ಕಿವಿಗೊಡದೆ ಲಸಿಕೆಗಳನ್ನು ತಪ್ಪದೇ ಹಾಕಿಸಿದರೆ, ಈ ಕಾಲುಬಾಯಿ ಜ್ವರವನ್ನು ತಡೆಯಬಹುದು.
ಸರ್ಕಾರವೇ ಪೂರೈಸುತ್ತದೆ ಲಸಿಕೆ
ದೊಡ್ಡ ಹಸುಗಳಿಗಿಂತ 1 ವರ್ಷದೊಳಗಿನ ಕರುಗಳು ಕಾಲುಬಾಯಿ ಜ್ವರಕ್ಕೆ ಬೇಗ ತುತ್ತಾಗುತ್ತವೆ. 6 ತಿಂಗಳ ನಂತರವಷ್ಟೇ ಕಾಲು ಬಾಯಿ ಜ್ವರದ ಲಸಿಕೆ ಹಾಕಲಾಗುತ್ತಿದೆ. ಸರ್ಕಾರವೇ ಈ ಚುಚ್ಚುಮದ್ದನ್ನು ಪೂರೈಸಬೇಕು. ಖಾಸಗಿಯಾಗಿ ಈ ಚುಚ್ಚುಮದ್ದು ಸಿಗುವುದಿಲ್ಲ. ಮತ್ತು ಪಶು ಸಂಗೋಪನಾ ಇಲಾಖೆ ಮತ್ತು ಕೆಎಂಎಫ್ ಸಹಯೋಗದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ.
ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಮುಂಜಾಗ್ರತಾ ಕ್ರಮದ ಲಸಿಕೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಉಭಯ ರೋಗಗಳಿಗೂ ಒಂದೇ ಲಸಿಕೆ ನೀಡುವ ನಿಟ್ಟಿನಲ್ಲಿ ಕೆಎಂಎಫ್ ಚಿಂತನೆ ನಡೆಸುತ್ತಿದೆ. ಕಾಲುಬಾಯಿ ಮತ್ತು ಗಳಲೇ ಉಭಯ ರೋಗಗಳ ತಡೆಗೆ ಹೊಸದಾಗಿ ಪ್ರಯೋಗಿಸಲು ಉದ್ದೇಶಿಸಿರುವ ಲಸಿಕೆ ಹೆಸರು ಬಯೋ ವ್ಯಾಕ್. ಇದನ್ನು ರಾಸುಗಳೀಗೆ ನೀಡುವ ನಿಟ್ಟಿನಲ್ಲಿ ಕೆಎಂಎಫ್ ಉನ್ನತ ಅಧಿಕಾರಿಗಳು ಮತ್ತು ತಜ್ಞ ವೈದ್ಯರು ವಿಜ್ಞಾನಿಗಳ ಜತೆ ಚರ್ಚಿಸುತ್ತಿದ್ದಾರೆ.
ಇದಕ್ಕೆ ವಿಜ್ಞಾನಿಗಳು ಹಸಿರು ನಿಶಾನೆ ನೀಡಿದ್ದೇ ಆದರೆ ಎರಡೆರಡು ಬಾರಿ ಮುಂಜಾಗ್ರತಾ ಕ್ರಮದ ಲಸಿಕೆ ನೀಡುವ ತಾಪತ್ರಯ ತಪ್ಪಲಿದೆ. ಕಾರ್ಯಕ್ರಮದ ಪ್ರಾರಂಭದ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ರೈತರಿಗೆ ಅರಿವು ಮೂಡಿಸಲಾಗುವುದು ಎಂದು ಮಂಡಿಕಲ್ ಪಶು ಆಸ್ಪತ್ರೆಯ ಪಶು ತಜ್ಞ ಡಾ.ಮಂಜುನಾಥ್ ತಿಳಿಸಿದ್ದಾರೆ.
ರೈತರು ಈ ಕಾಯಿಲೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಲುಬಾಯಿ ಜ್ವರ ಬಂದರೆ ಭಾರಿ ಕಷ್ಟ. ಬಹುಬೇಗ ಎಲ್ಲಕ್ಕೂ ಹರಡುತ್ತದೆ. ಹೀಗಾಗಿ ಸರ್ಕಾರ ನಿಗದಿತ ಸಮಯಕ್ಕೆ ಲಸಿಕೆಯನ್ನು ಕೊಟ್ಟರೆ ಉತ್ತಮ. ಇಲ್ಲವಾದಲ್ಲಿ ರೈತರಿಗೆ ಸಾಕಷ್ಟು ನಷ್ಟವಾಗಲಿದೆ ಎಂದು ರೈತರಾದ ಬ್ರಾಹ್ಮಣರಹಳ್ಳಿ ರಾಮಚಂದ್ರ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಲುಬಾಯಿ ಜ್ವರದ ಲಕ್ಷಣಗಳು ಏನೇನು?
1. 3-4 ದಿನ ಸಿಕ್ಕಾಪಟ್ಟೆ ಜ್ವರ ಇರಲಿದೆ..
2. ದಿನದ ನಂತರ ಬಾಯಿ ಹುಣ್ಣಾಗುತ್ತದೆ.
3. ಮೇವು ತಿನ್ನಲು ಸಾಧ್ಯವಾಗುವುದಿಲ್ಲ
4. ಬಾಯಿಯಲ್ಲಿ ಜೊಲ್ಲು ಸುರಿಸುತ್ತವೆ.
5. ಕಾಲು ಕುಂಟುತ್ತಾ ನಡೆಯುತ್ತವೆ
6. ಕಾಲಿನ ಗೊರಸು ಸಹ ಕಿತ್ತು ಹೋಗಲಿದೆ.
ಜಿಲ್ಲೆಗೆ ಅಗತ್ಯವಿರುವ ಅಷ್ಟೂ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಪೂರೈಕೆಯಾಗಿದೆ. ಶೇಕಡಾ 100ರಷ್ಟು ಗುರಿ ಸಾಧನೆಯೊಂದಿಗೆ ಸಮರೋಪಾದಿಯಲ್ಲಿ ಜಿಲ್ಲೆಯ 8 ತಾಲೂಕುಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ರಕ್ಷಣೆ ಮಾಡಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆಯನ್ನು ಕೊಡಿಸಬೇಕು ಎಂದು ಚಿಕ್ಕಬಳ್ಳಾಪುರ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಾದ ಡಾ.ರವಿ ಅವರು ಸಲಹೆ ನೀಡಿದ್ದಾರೆ.












Click it and Unblock the Notifications