ರೈಟ್... ರೈಟ್..... ಈ ಊರಲ್ಲಿ ಫುಟ್ಬೋರ್ಡ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ.... ಸಾರಿಗೆ ಸಚಿವರೇ ಇತ್ತ ನೋಡಿ....
ಬೊಮ್ಮಗಾನಹಳ್ಳಿ ಜನವರಿ 24: ರಾಜ್ಯ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರಿಗೆ ಉಚಿತ ಬಸ್ಸಿನ ಪ್ರಯಾಣದ ವ್ಯವಸ್ಥೆ ಕಲ್ಪಿಸಿದೆ. ಇನ್ನೊಂದೆಡೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಜನರ ಒತ್ತಡದಿಂದ ಬಸ್ ಹತ್ತಲಾಗದೆ ಅತ್ತ ಶಾಲಾ-ಕಾಲೇಜಿಗೆ ಹೋಗದೆ ಹೋದರು ಇತ್ತ ಸಕಾಲಕ್ಕೆ ಮನೆಗೆ ವಾಪಸ್ಸು ಬರಲಾಗದ ಪರಿಸ್ಥಿತಿ ಜಿಲ್ಲೆಯ ಗಡಿಭಾಗದ ಗುಡಿಬಂಡೆ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಗುಡಿಬಂಡೆ ತಾಲೂಕಿನ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳು ಪ್ರತಿ ದಿನ ಪೆರೇಸಂದ್ರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣದ ವಿವಿಧ ಶಾಲೆ, ಕಾಲೇಜು ಹಾಗೂ ಪ್ರಾಥಮಿಕ ಶಾಲೆಗೆ ಆಗಮಿಸುತ್ತಿದ್ದು, ಇವರಿಗೆ ಸರಿಯಾದ ವಾಹನ ಸೌಕರ್ಯ ಇಲ್ಲದ ಕಾರಣ ಈ ಮಾರ್ಗದಲ್ಲಿ ಓಡಾಡುವ ಸೀಮಿತ ಬಸ್‌ಗಳಲ್ಲಿ ಅಪಾಯ ಎದುರಿಸಿ ಓಡಾಡುವ ಪರಿಸ್ಥಿತಿ ಇದೆ.

ಸರಕಾರಿ ಸಾರಿಗೆ ಮೇಲೆ ಹೆಚ್ಚಿನ ಅವಲಂಭನೆ?
ಹೌದು ಶಾಶ್ವತ ನದಿ ನಾಲೆಗಳಾಗಲಿ, ನಿರುದ್ಯೋಗವನ್ನು ನೀವಾರಿಸುವ ಕೈಗಾರಿಕೆಗಳನ್ನಾಗಲಿ ಹೊಂದಿರದ ಪ್ರತಿಯೊಂದಕ್ಕೂ ಕಾರಣದಿಂದ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗುಡಿಬಂಡೆ ತಾಲೂಕಿನಲ್ಲಿ ಉದ್ಯೋಗವನ್ನು ಅರಸಿ ಜಿಲ್ಲಾ ಕೇಂದ್ರಕ್ಕೆ ಪ್ರತಿ ನಿತ್ಯ ಸಾವಿರಾರು ಜನ ತೆರಳುತ್ತಾರೆ.
ತಾಲೂಕು ಕೇಂದ್ರಕ್ಕೆ ಕೆಲವೊಮ್ಮೆ ಬಸ್‌ಗಳು ಸರಿಯಾದ ಸಮಯಕ್ಕೆ ಬಂದರೆ, ಇನ್ನೂ ಕೆಲವು ಸಂದರ್ಭದಲ್ಲಿ ಸಮಯ ತಪ್ಪಿ ಬರುವುದರಿಂದ ಶಾಲೆ-ಕಾಲೇಜಿಗೆ ತಡವಾಗಿ ತಲುಪಬೇಕಾಗುತ್ತದೆ. ಈ ಭಾಗದಲ್ಲಿ ಅತಿ ಕಡಿಮೆ ಬಸ್ ಸಂಚಾರ ಇರುವುದರಿಂದ ಲಭ್ಯವಿರುವ ಬಸ್‌ನಲ್ಲಿಯೇ ಹೋಗಬೇಕಾಗಿದೆ. ಪ್ರತಿ ದಿನ ಬಸ್‌ನಲ್ಲಿ ರಶ್ ಇರುವುದರಿಂದ ಕಾಲಿಡಲು ಜಾಗ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬಾಗಿಲಲ್ಲಿ ಜೋತು ಬಿದ್ದು ಶಾಲೆ, ಕಾಲೇಜಿಗೆ ಹೋಗಿ ಬರಬೇಕಿದೆ.

ನಿರ್ಮಾಣವಾಗದ ಬಸ್ ಡಿಪೋ :
ತಾಲೂಕು ಕೇಂದ್ರದಲ್ಲಿ 10 ವರ್ಷಗಳ ಹಿಂದೆ ಡಿಪೋ ನಿರ್ಮಾಣಕ್ಕೆ ಎಂದು 10 ಎಕರೆ ಜಾಗ ಇಲಾಖೆಗೆ ಹಸ್ತಾಂತರ ಮಾಡಿದ್ದು ಇದುವರೆಗೂ ಸಾರಿಗೆ ಡಿಪೋ ನಿರ್ಮಾಣ ಮಾಡದಿರುವುದರಿಂದ ಬೇರೆ ಡಿಪೋಗಳ ಬಸ್ ಗಳನ್ನು ಅವಲಂಬಿಸಬೇಕಾಗಿದ್ದು ಪ್ರತಿನಿತ್ಯ ಪರದಾಡುವಂತಾಗಿದೆ.
ಹೆಚ್ಚುವರಿ ಬಸ್ ಬಿಡಲು ಆಗ್ರಹ :
ಅಪಾಯಕಾರಿಯಾಗಿ ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಗುಡಿಬಂಡೆ ಪಟ್ಟಣಕ್ಕೆ ಬಸ್ ಓಡಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎಂಬುದು ಹಲವರ ಅಭಿಪ್ರಾಯ.

ಗುಡಿಬಂಡೆ ಮಾರ್ಗವಾಗಿ ಸಂಚರಿಸುತ್ತಿದ್ದ ತುಮಕೂರು- ಪುಟ್ಟಪರ್ತಿ, ಬೆಂಗಳೂರು ಗುಡಿಬಂಡೆ ಹಿಂದೂಪುರ 4 ಅನುಸೂಚಿತ ಬಸ್ಸುಗಳು ಕೇವಲ ಬೆಂಗಳೂರು ಬಾಗೇಪಲ್ಲಿ ಮಾರ್ಗವಾಗಿ ಸಂಚರಿಸುತ್ತಿವೆ. ಹೀಗಾಗಿ ಬೆಳಗ್ಗೆ ಸರಿಯಾದ ವೇಳೆಗೆ ಬಸ್ ನಿಲುಗಡೆ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದರೂ ಬಸ್ ತುಂಬಿದೆ ಎಂದು ನಿಲ್ಲಿಸದೆ ಹೋಗುವುದು, ಸಿಕ್ಕರೂ ನಿಂತುಕೊಂಡೆ ಒದ್ದಾಡುವುದು ವಿದ್ಯಾರ್ಥಿಗಳ ದಿನನಿತ್ಯದ ಕಾಯಕವಾಗಿ ಬಿಟ್ಟಿದೆ.
ಅಧಿಕಾರಿಗಳು ಕೆಲ ಬಸ್ ಮಾರ್ಗಗಳನ್ನು ತಮಗೆ ಇಷ್ಟ ಬಂದಂತೆ ವೇಳೆಯನ್ನು ಬದಲಾಯಿಸಿ, ಅನುಸೂಚಿತ ಮಾರ್ಗಗಳನ್ನು ರದ್ದುಪಡಿಸಿ, ಹೆಚ್ಚು ಆದಾಯ ಬರುವ ಕಡೆ ನಿಯೋಜನೆ ಮಾಡಿಕೊಳ್ಳುತ್ತಾರೆ, ನಿಗದಿತ ಸಮಯಕ್ಕೆ ಬರುವುದಿಲ್ಲ, ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ, ಸಿಗುವ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಪ್ರಾಣದ ಹಂಗು ತೊರೆದು ಫುಟ್ಬೋರ್ಡ್ ನಲ್ಲಿ ಸಂಚಾರ ಮಾಡುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ.ಕೂಡಲೇ ಅಧಿಕಾರಿಗಳು ಗುಡಿಬಂಡೆ ತಾಲೂಕಿಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಡಿಎಸ್ಎಸ್ ಜಿಲ್ಲಾ ಮುಖಂಡರು ಹಾಗೂ ಬಸ್ ಡಿಪೋ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ವಿ. ಗಂಗಪ್ಪ ಹೇಳಿದರು.
ಕೆಲ ವಿದ್ಯಾರ್ಥಿಗಳು ಶಿಸ್ತು ಹಾಗೂ ಸಂಚಾರ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ ಮಾಡುತ್ತಾರೆ, ಇದರಿಂದ ಹೀಗಾಗೀರ ಬಹುದು, ಚಾಲಕರು ಹಾಗೂ ನಿರ್ವಾಹಕರಿಗೆ ಇನ್ನೊಮ್ಮೆ ಹೀಗಾಗದಂತೆ ಸೂಚನೆ ನೀಡಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ಹಿಮವರ್ಧನ್ ನಾಯ್ಡು ಹೇಳಿದರು.












Click it and Unblock the Notifications