SSLC Result: ಮಾತಿನ ಮಲ್ಲ ಪ್ರದೀಪ್ ಈಶ್ವರ್ V/S ಸುಧಾಕರ್ SSLC ಫೈಟ್
ಚಿಕ್ಕಬಳ್ಳಾಪುರ, ಮೇ 10: 2024ರ ಲೋಕಸಭಾ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ಸದ್ಯ ರಾಜಕೀಯ ಕದನ ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದು, ಇದೀಗ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಕಾದಾಟ ಶುರುವಾಗಿದೆ. ಹಾಲಿ ಶಾಸಕರು ಹಾಗೂ ಮಾಜಿ ಸಚಿವರ ಮಧ್ಯೆ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಫಲಿತಾಂಶ ಫೈಟ್ ಆರಂಭವಾಗಿದೆ.
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿನ್ನೆ ಮೇ 09 ಗುರುವಾರ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ದೊರೆತಿದ್ದರೆ, ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನದಲ್ಲಿದೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 18 ಸ್ಥಾನದಲ್ಲಿದೆ. ಈ ಬಗ್ಗೆ ಇದೀಗ ರಾಜಕೀಯ ಚರ್ಚೆಗಳು ಆರಂಭವಾಗಿದೆ. ಫಲಿತಾಂಶದ ಬಗ್ಗೆ ಒಂದೆಡೆ ಮಾಜಿ ಸಚಿವ ಡಾ.ಕೆ ಸುಧಾಕರ್ ಅಸಮಾಧಾನ ಹೊರಕಿದ್ದರೆ, ಮತ್ತೊಂದೆಡೆ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸೂಪರ್ 60 ಯಶಸ್ವಿಯಾದ ಸಂಭ್ರಮದಲ್ಲಿದ್ದಾರೆ.
ಮಾಜಿ ಸಚಿವ ಡಾ.ಕೆ ಸುಧಾಕರ್ ಅಸಮಾಧಾನ
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ಬಗ್ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು, 'ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಮತ್ತು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕೈಗೊಂಡಿದ್ದ ಕ್ರಮಗಳಿಂದಾಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿತ್ತು.

ಆದರೆ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯದ ಪರಿಣಾಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 18ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಚಿಂತಾಜನಕ ಬೆಳವಣಿಗೆಯಾಗಿದ್ದು, ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನ ಬಲಪಡಿಸುವತ್ತ ಗಮನ ಹರಿಸಬೇಕು' ಎಂದು ಆಗ್ರಹಿಸಿದ್ದಾರೆ.
ಸೂಪರ್ 60 ಯಶಸ್ಸಿನ ಸಂಭ್ರಮದಲ್ಲಿ ಶಾಕಸ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶುರು ಮಾಡಿದ ಸೂಪರ್ 60 ಶೈಕ್ಷಣಿಕ ಕಾರ್ಯಕ್ರಮ ಯಶಸ್ವಿಯಾಗಿದೆ. ಸರ್ಕಾರಿ ಶಾಲೆ ಮತ್ತು ಸರ್ಕಾರಿ ಏಡೆಡ್ ಶಾಲೆಗಳಿಂದ ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸೂಪರ್ 60ನಲ್ಲಿ ತರಬೇತಿ ನೀಡಲಾಗಿತ್ತು. ಅದರಲ್ಲಿ ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಸಹ ನೀಡಲಾಗಿತ್ತು. ಈ ಕಾರ್ಯಕ್ರಮ ಈ ಬಾರಿ ಯಶಸ್ಸು ಕಂಡಿದ್ದು, ಸೂಪರ್ 60ಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಲ್ಲೂ ಬಹುತೇಕ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಾಸ್ ಉತ್ತೀರ್ಣರಾಗಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಈ ಖುಷಿಯನ್ನು ಸಂಭ್ರಮಿಸಿದ್ದಾರೆ. ಚಿಕ್ಕಬಳ್ಳಾಪುರದ ಜೂನಿಯರ್ ಕಾಲೇಜು ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹೂವಿನ ಸುರಿಮಳೆ ಸುರಿಸಿ ಅಭಿನಂದಿಸಿದ್ದಾರೆ.












Click it and Unblock the Notifications