ಶಿವರಾತ್ರಿಯಂದು ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್‌ಗೆ ಹೋಗುವಿರಾ? ಇದನ್ನು ತಿಳಿಯಿರಿ...
ಚಿಕ್ಕಬಳ್ಳಾಪುರ ಮಾರ್ಚ್ 7: ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿದಲ್ಲಿ ಮಹಾಶಿವರಾತ್ರಿಯ ಆಚರಣೆಯ ತಯಾರಿ ಜೋರಾಗಿದೆ. ಕೊಯಮ್ಮತ್ತೂರಿನ ಈಶ ಫೌಂಡೇಶನ್ ನಲ್ಲಿ ನಡೆಯುವ ಬೃಹತ್ ಮಟ್ಟದ ಆಚರಣೆಯ ಲೈವ್ ಸ್ಟ್ರೀಮ್ ಅನ್ನು ಇಲ್ಲಿ ಪ್ರಸಾರ ಮಾಡಲಾಗುವುದು.
ಚಿಕ್ಕಬಳ್ಳಾಪುರದ ಅವಳಗುರ್ಕಿಯ ಸದ್ಗುರು ಸನ್ನಿಧಿಯಲ್ಲಿ 8 ರಿಂದ (ಶುಕ್ರವಾರ) 10 ನೆೇ (ಭಾನುವಾರ) ತಾರೀಕಿನ ಸಂಜೆಯವರಗೆ ಆಚರಣೆ ನಡೆಯಲಿದೆ. ಅಲಂಕೃತಗೊಂಡಿರುವ ಎತ್ತುಗಳು ಗೋಶಾಲೆಯಲ್ಲಿ ಸಾರ್ವಜನಿಕರಿಗೆ ನೋಡಲು ಲಭ್ಯವಿರುವವು. 8 ಮಾರ್ಚ್ 2024 ಶುಕ್ರವಾರ ಸಂಜೆ 6 ಘಂಟೆಯಿಂದ - ಶನಿವಾರ 9 ಮಾರ್ಚ್ 2024 ಬೆಳಗಿನ ಜಾವ 6 ಘಂಟೆಯ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ತಾರಾಬಳಗದಿಂದ ಕೂಡಿರಲಿರುವ ಕೊಯಮ್ಮತ್ತೂರಿನ ಈಶ ಫೌಂಡೇಶನ್ ನ ಮಹಾಶಿವರಾತ್ರಿಯ ಸಮಾರಂಭಕ್ಕೆ ಉಪರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ ಜಗದೀಪ್ ಧನಕರ್ ಅವರು ಕಳೆತುಂಬಲಿದ್ದು, ವೇದಿಕೆಯಲ್ಲಿ ಖ್ಯಾತ ಕಲಾವಿದರಾದ ಶಂಕರ್ ಮಹದೇವನ್, ಗುರುದಾಸ್ ಮಾನ್, ಪವನ್‌ದೀಪ್ ರಾಜನ್, ರತಿಜಿತ್ ಭಟ್ಟಾಚಾರ್ಯ, ಮಹಾಲಿಂಗಂ, ಮೂರಲಾಲ್ ಮಾರ್ವಾಡ, ರಾಪರ್‌ಗಳಾದ ಬ್ರೋಡಾ ವಿ, ಪ್ಯಾರಡಾಕ್ಸ್, ಎಂಸಿ ಹೇಮ್, ಧಾರಾವಿ ಪ್ರಾಜೆಕ್ಟ್, ಫ್ರೆಂಚ್ ಸಂಗೀತಗಾರರು, ಸೌಂಡ್ಸ್ ಆಫ್ ಈಶ ಮತ್ತು ಈಶ ಸಂಸ್ಕೃತಿಯಿಂದ ಆಕರ್ಷಕ ಪ್ರದರ್ಶನಗಳು ನಡೆಯಲಿವೆ.
ಚಿಕ್ಕಬಳ್ಳಾಪುರದ ಕರವನಹಳ್ಳಿ ಬಳಿ 12 ಅಡಿಗಳ ಆದಿಯೋಗಿ ಮೂರ್ತಿಯನ್ನು ಈಶಾ ಫೌಂಡೇಷನ್ ನಿರ್ಮಿಸಿದೆ. 112 ಅಡಿ ಎತ್ತರದ ಈ ಮೂರ್ತಿಯೂ ಸಂಪೂರ್ಣ ಉಕ್ಕಿನಿಂದ ನಿರ್ಮಾಣವಾಗಿದೆ. ಹಿಂದೂಗಳ ಪವಿತ್ರ ಹಬ್ಬವಾದ ಮಹಾಶಿವರಾತ್ರಿ ಹಬ್ಬವನ್ನು ಚಿಕ್ಕಬಳ್ಳಾಪುರದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿ ಭಕ್ತರು, ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ನೈವೇದ್ಯಗಳನ್ನು ಅರ್ಪಿಸುವ ಜೊತೆಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ. ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಕೈವಾರ, ಇಶಾ ಕೇಂದ್ರ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಶಿವ-ಪಾರ್ವತಿ, ಈಶ್ವರ ಹಾಗೂ ಇನ್ನಿತರ ದೇವಾಲಯಗಳನ್ನು ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಈಗಾಗಲೇ ದೇವಾಲಗಳ ಆವರಣದಲ್ಲಿ ಹಾಗೂ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ನಂದೀಶ್ವರನಿಗೆ ವಿಶೇಷ ಪೂಜೆಗಳು ನಡೆಯಲಿವೆ. ಭೋಗನಂದೀಶ್ವರನಿಗೆ ಏಕವಾರ ಅಭಿಷೇಕ, ಕ್ಷೀರಾಭಿಷೇಕ, ತುಪ್ಪಾಭಿಷೇಕ, ಗಂಧಾಬಿಷೇಕ, ಪುಷ್ಪಾಭಿಷೇಕ ನಡೆಯಲಿದೆ. ಹಾಗೆಯೇ ದೇವಾಲಯದ ಆವರಣದಲ್ಲಿ ಮಹಿಳೆಯರು ದೀಪಗಳನ್ನು ಬೆಳಗಿ ಹರಿಕೆ ತೀರಿಸಿಕೊಳ್ಳುತ್ತಾರೆ.
ಬೆಂಗಳೂರು, ದೊಡ್ಡಬಳ್ಳಾಪುರ, ಕೋಲಾರ ಸೇರಿದಂತೆ ಜಿಲ್ಲೆ ಹಾಗೂ ಪಕ್ಕದ ಆಂಧ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅಲ್ಲದೆ, ಸಾಲಾಗಿ ನಿಂತು ಭೋಗನಂದೀಶ್ವರನ ದರ್ಶನವನ್ನು ಪಡೆಯಲು ಬೇಕಾದ ವ್ಯವಸ್ಥೆಯನ್ನು ಈಗಾಗಲೆ ಮಾಡಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುವ ಕಾರಣ, ಇದನ್ನು ನಿಭಾಯಿಸಲು ಪೊಲೀಸ್, ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ನಂದಿಯಿಂದ ಚಿಕ್ಕಬಳ್ಳಾಪುರ ರಸ್ತೆಯ ಅರ್ಧ ಕಿಲೋ ಮೀಟರ್ ದೂರದಲ್ಲಿ ಹಾಗೂ ಹೆದ್ದಾರಿ ಕಡೆ ಅರ್ಧ ಕಿ. ಮೀ. ದೂರದಲ್ಲಿ ಪ್ರತ್ಯೇಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಶಿವರಾತ್ರಿ ಸಂಭ್ರಮ ಹೇಗಿದೆ?
ಮಾರ್ಚ್ 8ರಂದು ದೇವಾಲಯದಲ್ಲಿ ವಿವಿಧ ಕಲಾ ತಂಡಗಳಿಂದ ಭಜನೆ, ಸಂಗೀತ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಂದಿ ದೇವಾಲಯದ ಆಡಳಿತ ಮಂಡಳಿಯಿಂದ ಪ್ರಸಾದ ವಿನಿಯೋಗವೂ ನಡೆಯಲಿದೆ.
ದೇವಾಲಯ ಸೇವಾ ಸಮಿತಿ ಹಾಗೂ ಭಕ್ತಾಗಳಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹಮ್ಮಿಕೊಂಡಿದ್ದ ಉತ್ಸವದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ಪೂಜೆ, ಅಭಿಷೇಕ, ಗಣಪತಿ ಪೂಜೆ, ಮಹಾಗಣಪತಿ ಪುರಸರ ನವಗ್ರಹ ಹೋಮ, ಸುದರ್ಶನ ಹೋಮ, ಮಹಾಪೂರ್ಣಾಹುತಿ ಅಲಂಕಾರ ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರು, ಮಕ್ಕಳು, ಕುಟುಂಬ ಸಮೇತರಾಗಿ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications