ನಿಷೇಧಾಜ್ಞೆ ನಡುವೆ ಚಿಕ್ಕಬಳ್ಳಾಪುರದಲ್ಲಿ RRR ಸಿನಿಮಾ ಇವೆಂಟ್: ಸಿಎಂ ಮುಖ್ಯ ಅತಿಥಿ!
ಬೆಂಗಳೂರು, ಮಾ. 15: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ನಿಷೇಧಾಜ್ಞೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಉಲ್ಲಂಘನೆ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ತೀರ್ಪಿಗೂ ಮುನ್ನ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಹುತೇಕ ಕರ್ನಾಟಕದಾದ್ಯಂತ ಮಾ. 20ರ ವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ.
ಆದರೆ, ಮಾ. 19 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಆಗಲಗುರ್ಕಿಯಲ್ಲಿ RRR ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು ಐದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಇಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಈಗಾಗಲೇ ಸಿನಿಮಾ ರಂಗದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಯಾಗಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನಟ- ನಟಿಯರು ಭಾಗವಹಿಸಲಿದ್ದಾರೆ.

RRR ಸಿನಿಮಾದಲ್ಲಿ ನಟನೆ ಮಾಡಿರುವ ನಟರಾದ ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಸೇರಿದಂತೆ ತೆಲುಗು ಸಿನಿಮಾ ರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಎಂದರೆ ಮುಖ್ಯ ಅತಿಥಿಯಾಗಿ ಬಸವರಾಜ ಬೊಮ್ಮಾಯಿ ಸಹ RRR ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಹಿಜಾಬ್ ವಿವಾದ ಭುಗಿಲೆದ್ದ ಸೂಕ್ಷ್ಮ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಕೂಡ ಒಂದು. ಹೀಗಾಗಿ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ. ಮಾ. 15 ರಿಂದ 20 ರ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಅಲ್ಲಿನ ಜಿಲ್ಲಾಧಿಕಾರಿ ಲತಾ ಅವರು ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಸಭೆ ಸಮಾರಂಭ ಮಾಡುವಂತಿಲ್ಲ. ಐದು ಮಂದಿಗೂ ಅಧಿಕ ಮಂದಿ ಒಂದಡೆ ಸೇರವಂತಿಲ್ಲ. ಒಂದು ವೇಳೆ ಸೇರಿದಂತೆ ಅಂತವರ ವಿರುದ್ಧ ಕಾನೂನು ಪ್ರಕಾರ ಕೇಸು ದಾಖಲಿಸಲಾಗುತ್ತದೆ. ಬಹುಮುಖ್ಯವಾಗಿ ಈ ಸಮಾರಂಭಕ್ಕೆ ಅವಕಾಶವೇ ಮಾಡಿಕೊಡಲ್ಲ. ಹೀಗಾಗಿ RRR ಸಿನಿಮಾ ಫ್ರೀ ರಿಲೀಸ್ ಇವೆಂಟ್ ನಡೆಯುವುದರ ಬಗ್ಗೆ ದೊಡ್ಡ ಗೊಂದಲ ಏರ್ಪಟ್ಟಿದೆ. ನಿಷೇಧಾಜ್ಞೆ ನಡುವೆಯೂ ಕಾರ್ಯಕ್ರಮ ಆಯೋಜಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರೆ, ಸರ್ಕಾರದ ಆದೇಶವನ್ನು ಅವರೇ ಉಲ್ಲಂಘನೆ ಮಾಡಿದಂತಾಗುತ್ತದೆ.

ಪೊಲೀಸ್ ಇಲಾಖೆಯಲ್ಲಿ ಗೊಂದಲ:
RRR ಸಿನಿಮಾ ನಿರ್ಮಾಣದಷ್ಟೇ ಅದರ ಪ್ರಚಾರಕ್ಕೆ ಅಷ್ಟು ಮೊತ್ತ ವೆಚ್ಚ ಮಾಡಲಾಗುತ್ತದೆ. ಈಗಾಗಲೇ ಚಿಕ್ಕಬಳ್ಳಾಪುರದ ಆಗಲಗುರ್ಕಿಯಲ್ಲಿ RRR ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ನಿಷೇಧಾಜ್ಞೆ ನಡುವೆಯೂ ಕಾರ್ಯಕ್ರಮ ನಡೆಸಲು ಅನುಮತಿ ನೀಡುತ್ತಾರಾ ? ಅಥವಾ ನಿಷೇಧಾಜ್ಞೆಯನ್ನು ವಾಪಸು ಪಡೆಯುತ್ತಾರಾ? ಎಂಬ ಗೊಂದಲ ಏರ್ಪಟ್ಟಿದೆ.












Click it and Unblock the Notifications