ಆಲೂಗಡ್ಡೆ ಬೆಲೆ ದಿಢೀರ್ ಕುಸಿತ: ಸಂಕಷ್ಟದಲ್ಲಿ ಚಿಕ್ಕಬಳ್ಳಾಪುರ ರೈತರು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯನ್ನು ಪ್ರಮುಖ ತೋಟಗಾರಿಕಾ ಬೆಳೆಯನ್ನಾಗಿ ಬೆಳೆಯುತ್ತಾರೆ. ಆದರೆ ಕಣ್ಣೆದುರೇ ಉತ್ತಮ ಬೆಳೆ ಇದ್ದರೂ, ಬೇಡಿಕೆ ಇಲ್ಲದ ಕಾರಣದಿಂದ ಮಾರಾಟ ಮಾಡಲಾಗದೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಕಣ್ಣೀರಿಡುವಂತಾಗಿದೆ.
ಚಿಕ್ಕಬಳ್ಳಾಪುರ, ಮಾರ್ಚ್ 6: ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯವನ್ನು ಕಾಡಿದ್ದ ಮಾಂಡೋಸ್ ಚಂಡಮಾರುತದ ಪರಿಣಾಮ ಆಲೂಗಡ್ಡೆ ಬೆಳೆಗಾರರ ಹೊರೆಯನ್ನು ಹೆಚ್ಚಿಸಿತ್ತು. ಮಾಂಡೋಸ್ ಚಂಡಮಾರುತಕ್ಕೂ ಮುನ್ನ ಬಿತ್ತನೆ ಮಾಡಿದ ಆಲೂಗಡ್ಡೆ ಬಿತ್ತನೆ ಬೀಜ ಸಂಪೂರ್ಣ ಕೊಳೆತು ಹೋಗಿ ಕೈಸುಟ್ಟುಕೊಂಡಿದ್ದರು.
ಇದೀಗ ರೈತರು ಮಗದೊಮ್ಮೆ ಬಿತ್ತನೆ ಮಾಡಿ ಬೆಳೆಯನ್ನು ಬೆಳೆದು ಕೊಯ್ಲಿಗೆ ಸಿದ್ಧವಾಗಿರುವ ಸಮಯದಲ್ಲೇ ಬೆಲೆ ಕುಸಿತವು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಹವಾಮಾನ ವೈಪರಿತ್ಯದಿಂದ ಬೆಳೆಗೆ ರೋಗಗಳು ಬರದಂತೆ ಕಾಲಕಾಲಕ್ಕೆ ಔಷಧಿಗಳನ್ನು ಸಿಂಪಡಿಸಿ, ರಾತ್ರಿ- ಹಗಲೆನ್ನದೆ ನಿದ್ದೆಗೆಟ್ಟು, ಮೂರು ತಿಂಗಳ ಕಾಲ ಬೆವರು ಹರಿಸಿ ಬೆಳೆದ ಆಲೂಗಡ್ಡೆಯ ಬೆಲೆ ಕುಸಿತವಾಗಿರುವುದು ರೈತರಿಗೆ ದಿಕ್ಕು ತೋಚದಂತಾಗಿದೆ.

ವ್ಯಾಪಾರಸ್ಥರು ಖರೀದಿಗೆ ಆಸಕ್ತಿ ತೋರದ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ. ಕಣ್ಣೆದುರೇ ಉತ್ತಮ ಬೆಳೆ ಇದ್ದರೂ, ಬೇಡಿಕೆ ಇಲ್ಲದ ಕಾರಣದಿಂದ ಮಾರಾಟ ಮಾಡಲಾಗದೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಕಣ್ಣೀರಿಡುವಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯನ್ನು ಪ್ರಮುಖ ತೋಟಗಾರಿಕಾ ಬೆಳೆಯನ್ನಾಗಿ ಬೆಳೆಯುವುದುಂಟು. ಆಲೂಗಡ್ಡೆ ಬೆಳೆಯನ್ನು ವರ್ಷದಲ್ಲಿ ಎರಡು ಬಾರಿ ಬೆಳೆದು ಮಾರಾಟ ಮಾಡಿ ಒಂದಿಷ್ಟು ಆದಾಯ ಗಳಿಸುತ್ತಾರೆ. ಆದರೆ, ಫೆಬ್ರವರಿ ತಿಂಗಳಿನಿಂದ ಪ್ರಸ್ತುತ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವುದು ಆಲೂಗಡ್ಡೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಕುಪ್ರಿ, ಜ್ಯೋತಿ, ಚಂಬಲ್ ಸೇರಿದಂತೆ ವಿವಿಧ ಬಗೆಯ ತಳಿಗಳನ್ನು ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. 2022ರ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿದ ಬೇಸಿಗೆ ಆಲೂಗಡ್ಡೆ ಬೆಳೆ ಈಗ ಕೊಯ್ಲು ಬಹುತೇಕ ಕಡೆ ಆರಂಭಗೊಂಡಿದೆ. ಆಲೂಗಡ್ಡೆ ಬೆಳೆದ ಸಣ್ಣ, ಅತೀ ಸಣ್ಣ ಹಾಗೂ ದೊಡ್ಡ ರೈತರು ಕೂಲಿ ಆಳುಗಳಿಂದ ಬೆಳೆಯನ್ನು ಕೊಯ್ಲು ಮಾಡಿಸಿ, ರಾಶಿ ಹಾಕಿ ಮಾರುಕಟ್ಟೆಗೆ ಸಾಗಿಸುವ ಕಾರ್ಯದಲ್ಲಿ ತೊಡಗುವ ಸಮಯದಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಿದೆ.

ಆಲೂಗಡ್ಡೆಗೆ ಬೆಲೆ ಮತ್ತು ಬೇಡಿಕೆ ಹೆಚ್ಚಿದ್ದರೆ ಜಮೀನಿನ ಬಳಿ ಹುಡಿಕಿಕೊಂಡು ಬರುವ ವ್ಯಾಪಾರಸ್ಥರು ಮುಂಗಡವಾಗಿ ಹಣ ಪಾವತಿಸುವುದುಂಟು ಆದರೆ ಬೇಡಿಕೆ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಾಗಲಿ, ತೋಟಗಳ ಕಡೆಯಾಗಲಿ ವ್ಯಾಪಾರಸ್ಥರು ಸುಳಿಯುತ್ತಿಲ್ಲ.
ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಹಾಗೂ ಎಲ್ಲೆಡೆ ಕೊಯ್ಲು ಸಮಯ ಶುರುವಾಗಿದ್ದು ಹೆಚ್ಚು ದಿನ ಭೂಮಿಯಲ್ಲಿ ಬಿಟ್ಟರೆ ಕೊಳೆಯುವ ಅಥವಾ ಮೊಳಕೆ ಹೊಡೆಯುವ ಆತಂಕದಿಂದ ಬಿತ್ತನೆ ಮಾಡಿ ಮೂರು ತಿಂಗಳು ಕಳೆಯುವ ಅಸುಪಾಸಿನಲ್ಲಿರುವ ರೈತರೆಲ್ಲ ದಿನದಿಂದ ದಿನಕ್ಕೆ ಕೊಯ್ಲು ಪ್ರಮಾಣ ಹೆಚ್ಚುತ್ತಿರುವುದು ಸಹ ಬೆಲೆ ದಿಢೀರ್ ಕುಸಿತಕ್ಕೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಿಂದ ಇದೇ ಸೀಸನ್‍ನಲ್ಲಿ ಬೆಳೆಯುತ್ತಿರುವ ರೈತರಿಗೆ ಆಲೂಗಡ್ಡೆ ಬೆಲೆಯಲ್ಲಿ ಕೈ ಕೊಡುತ್ತಿದೆ. ಒಂದು ತಿಂಗಳ ಹಿಂದೆಯಷ್ಟೇ ಸ್ಥಳೀಯ ಮಾರುಕಟ್ಟೆಯಲ್ಲಿ 50 ಕೆ.ಜಿ ಚೀಲದ ಗುಣಮಟ್ಟದ ಆಲೂಗಡ್ಡೆ ಮೂಟೆಗೆ 1,000 ರೂಪಾಯಿಂದ 1,400 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು.
ಹಿಂದಿನ ವಾರ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಒಂದು ಚೀಲ ಆಲೂಗಡ್ಡೆ ಮೂಟೆ 500 ರೂನಿಂದ 850 ರೂ.ವರೆಗೆ ಮಾರಾಟವಾಗಿತ್ತು. ಆದರೆ, ಶುಕ್ರವಾರ ಹಾಗೂ ಶನಿವಾರ ಮಾರುಕಟ್ಟೆಯಲ್ಲಿ 300 ರಿಂದ 600 ಕ್ಕೆ ಕುಸಿದಿದೆ. ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಊಹಿಸಲಾರದ ರೀತಿಯಲ್ಲಿ ಕುಸಿಯುತ್ತಿರುವುದರಿಂದ ಬೆಳೆಗಾರರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಿಸಿದೆ.
ಜಿಲ್ಲೆಯ ರೈತರು ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಾರೆ. ಬೆಳೆ ಮಾರಾಟಕ್ಕೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಗಳಿಗೆ ಹಾಗೂ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ.
ಚಿಕ್ಕಬಳ್ಳಾಪುರ ಮತ್ತು ಯಶವಂತಪುರ ಮಾರುಕಟ್ಟೆಗಳಿಗೆ ಬೆಂಗಳೂರು ಗ್ರಾಮಾಂತರ ಹಾಗೂ ನೆರೆಯ ಜಿಲ್ಲೆಗಳಿಂದ ರೈತರು ಆಲೂಗಡ್ಡೆ ತಂದು ಮಾರಾಟ ಮಾಡುತ್ತಾರೆ. ಇತ್ತೀಚಿಗೆ ಮಾರುಕಟ್ಟೆಗೆ ಆಲೂಗಡ್ಡೆ ಬರುವಿಕೆ ಪ್ರಮಾಣ ಹೆಚ್ಚಳ ಕಂಡಿರುವುದರಿಂದ ಬೆಲೆಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿದೆ ಎನ್ನುವುದು ಆಲೂಗಡ್ಡೆ ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಚಿಕ್ಕಬಳ್ಳಾಪುರದ ಸುತ್ತಮುತ್ತಲಿನ ರೈತರಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕುಸಿತದಿಂದ ದೂರದ ಬೆಂಗಳೂರಿಗೆ ಆಲೂಗಡ್ಡೆ ಮಾರಲು ಹೊರಟರೆ, ದುಪ್ಪಟ್ಟು ಖರ್ಚಾಗುತ್ತದೆ. ಬೆಂಗಳೂರಿನಲ್ಲಿ ಒಂದೆರಡು ದಿನವಾದರೂ ತಂಗಬೇಕು. ಹೊರ ರಾಜ್ಯ ಮತ್ತು ಜಿಲ್ಲೆಗಳ ಆಲೂಗಡ್ಡೆ ಬೆಳೆಗಾರರ ಜೊತೆ ಪೈಪೋಟಿ ನಡೆಸಬೇಕು. ವ್ಯಾಪಾರಸ್ಥರಲ್ಲಿ ಚೌಕಾಶಿ, ಮನವೊಲಿಕೆ, ನಿದ್ದೆ ಕೆಡಬೇಕು, ಊಟ ಹಾಗೂ ಕೊಯ್ಲು ಮಾಡಲು ಕೂಲಿ ಕಾರ್ಮಿಕರಿಗೆ ದುಬಾರಿ ಕೂಲಿ, ಸಾಗಾಟ ವೆಚ್ಚದ ಜೊತೆಗೆ ಇನ್ನಿತರೆ ಹೆಚ್ಚುವರಿ ಖರ್ಚುಗಳು ರೈತರಿಗೆ ಹೆಚ್ಚಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದರೂ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಒಂದು ಶೀಥಲ ಘಟಕವಿದ್ದು, ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಶೀಥಲ ಘಟಕದ ಪ್ರಯೋಜನ ದೊರೆಯುತ್ತಿದ್ದು, ದಿಢೀರ್ ಬೆಲೆ ಕುಸಿತದಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಲು ತಾಲೂಕಿಗೊಂದು ಕೋಲ್ಡ್ ಸ್ಟೋರೇಜ್‌ಗಳನ್ನು ಸರ್ಕಾರ ತೆರೆದರೆ ಸಾವಿರಾರು ರೈತರಿಗೆ ನೆರವಾಗುತ್ತದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.











Click it and Unblock the Notifications