Nandi Hills: ಪ್ರವಾಸಿಗರೇ ಗಮನಿಸಿ; ಮೇ 10ರಂದು ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ; ಕಾರಣವೇನು?
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಪಕ್ಷಗಳು ರಾಜ್ಯದಲ್ಲಿ ಈಗಾಗಲೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಮತದಾರರ ಆಶೀರ್ವಾದಕ್ಕೆ ಮುಂದಾಗಿದ್ದಾರೆ.
ಒಂದು ಕಡೆ ರಾಜ್ಯದಲ್ಲಿ ಚುನಾವಣೆ ರಂಗೇರುತ್ತಿದ್ದು, ಮತ್ತೊಂದೆಡೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೇಸಿಗೆಯ ರಜೆಯಲ್ಲಿದ್ದಾರೆ. ಇನ್ನು ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಮೇ 10ರಂದು ವೇತನ ಸಹಿತ ಕಡ್ಡಾಯ ರಜೆ ಘೋಷಿಸಲಾಗಿದೆ.

ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಮತದಾನದ ಶೇಕಡಾವಾರು ಹೆಚ್ಚಿಸಲು ಚುನಾವಣಾ ಆಯೋಗ ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧಿಸಲು ಸೂಚನೆ ನೀಡಿದೆ.
ಕರ್ನಾಟಕ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಮೇ 10ರಂದು ಕರ್ನಾಟಕದ ಮತದಾರರು ಹೊಸ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಹೊಂದಿರುತ್ತಾರೆ.
ಇದೇ ವೇಳೆ ಮೇ 10ರಂದು ಕಡ್ಡಾಯ ರಜೆ ಇರುವ ಕಾರಣ ನೀವೇದರೂ ಬೆಂಗಳೂರು ಮಹಾನಗರದ ಪಕ್ಕದಲ್ಲೇ ಇರುವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಟ್ರಿಪ್ ಹೋಗಬೇಕು ಎಂದು ಯೋಜಿಸಿದ್ದರೆ, ಅದನ್ನು ಮುಂದೂಡಬೇಕಾಗುತ್ತದೆ. ಏಕೆಂದರೆ ಅಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿರುವ ಬುಧವಾರ, ಮೇ 10ರಂದು ವಿಶ್ವವಿಖ್ಯಾತ ನಂದಿ ಗಿರಿಧಾಮದ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮೇ 10ರಂದು ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಪ್ರವೇಶ ನಿಬಂಧಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಚುನಾವಣಾ ದಿನ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂಬ ದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿ ಬೆಟ್ಟದ ಪ್ರವೇಶಕ್ಕೆ ಮೇ 10ರಂದು ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬುಧವಾರ, ಮೇ 10ರ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಆದೇಶ ಪ್ರಕಟಿಸಿದ್ದಾರೆ.

ಪ್ರತಿ ಬಾರಿಯೂ ಚುನಾವಣೆಯ ದಿನ ರಜೆ ಇರುತ್ತದೆ. ಈ ವೇಳೆ ಮತದಾನದ ಹಕ್ಕು ಚಲಾಯಿಸುವುದನ್ನು ತಪ್ಪಿಸಿ ಸಮೀಪದ ಪ್ರವಾಸಿ ಸ್ಥಳಗಳಿಗೆ ಹೋಗುತ್ತಿದ್ದರು. ಇದರಿಂದ ಶೇಕಡಾವಾರು ಮತದಾನದ ಮೇಲೆ ಪರಿಣಾಮ ಬೀರುತ್ತಿತ್ತು. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗಿತ್ತು. ಇದನ್ನು ತಪ್ಪಿಸಲು ಬೆಂಗಳೂರಿಗೆ ಸಮೀಪವಿರುವ ನಂದಿ ಬೆಟ್ಟ ಪ್ರವೇಶ ನಿಷೇಧಿಸಲಾಗಿದೆ.
ಜೋಗ್ ಫಾಲ್ಸ್‌ಗೂ ಪ್ರವೇಶ ನಿರ್ಬಂಧ
ಇದಕ್ಕೂ ಮುನ್ನ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯುವ ದಿನದಂದು ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಯನ್ನು ನಿಷೇಧಿಸಲಾಗಿತ್ತು.
ಮತದಾರರು ಮತದಾನ ಹಕ್ಕು ಚಲಾಯಿಸುವುದನ್ನು ಬಿಟ್ಟು ಪ್ರವಾಸಿ ತಾಣಗಳಿಗೆ ಮೋಜು-ಮಸ್ತಿ ಮಾಡಲು ಬರುತ್ತಾರೆ. ಮತದಾನ ಹೆಚ್ಚಿಸುವ ಉದ್ದೇಶದಿಂದ ಮೇ 10ರಂದು ಜೋಗ ಜಲಪಾತ ವೀಕ್ಷಣೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ನಿರ್ಬಂಧ ಹೇರಿದ್ದರು.
ಮತದಾನ ದಿನದಂದು ಪ್ರವಾಸಿ ತಾಣಗಳನ್ನು ಬಂದ್ ಮಾಡದಿದ್ದರೆ, ಬರುವ ಪ್ರವಾಸಿಗರಿಗಾಗಿ ನಿರ್ವಹಣಾ ಪ್ರಾಧಿಕಾರ ಸಿಬ್ಬಂದಿ ಕರ್ತವ್ಯಪಾಲನೆ ಮಾಡಬೇಕಾಗುತ್ತದೆ. ಇವರೂ ಮತದಾನದಿಂದ ವಂಚಿತರಾಗುತ್ತಾರೆ. ಇದಕ್ಕೆ ಪೂರಕವಾಗಿ ಸ್ಥಳೀಯ ವ್ಯಾಪಾರಸ್ಥರು, ಛಾಯಚಿತ್ರಗಾರರು, ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೋಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಮತದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಜೋಗ ಜಲಪಾತ ಮಾತ್ರವಲ್ಲದೆ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ವೀಕ್ಷಣೆಗೂ ನಿಷೇಧವಿರಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಕ್ರೆಬೈಲು ಆನೆ ಬಿಡಾರದಲ್ಲಿಯೂ ಪ್ರವೇಶ ನಿಷೇಧ ಹೇರುವ ಸಾಧ್ಯತೆ ಇದೆ.












Click it and Unblock the Notifications