ಚಿಕ್ಕಬಳ್ಳಾಪುರದಲ್ಲಿ ಕುಡಿಯುವ ನೀರಿಗೆ ಅಭಾವ: ಖಾಸಗಿ ಕೊಳವೆ ಬಾವಿಗಳ ಬಳಕೆ
ಚಿಕ್ಕಬಳ್ಳಾಪುರ, ಅಕ್ಟೋಬರ್ 14: ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಜೊತೆಗೆ ಬೇಸಿಗೆಗೂ ಮುನ್ನವೇ ಜಿಲ್ಲೆಯ ವಿವಿಧ ಕಡೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸದ್ಯ 596 ಸರಕಾರಿ ಬೋರ್ ವೆಲ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಕಳೆದ 2-3 ವರ್ಷ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಎಲ್ಲೂ ಕುಡಿಯುವ ನಿರೀನ ಸಮಸ್ಯೆ ಕಣ್ಮರೆಯಾಗಿತ್ತು. ಆದರೆ, ಈಗ ಮತ್ತೆ ನೀರಿನ ಸಮಸ್ಯೆ ಹಲವು ಕಡೆ ಕಾಡತೊಡಗಿದ್ದು, ಸದ್ಯಕ್ಕೆ ಖಾಸಗಿ ಬೋರ್‌ವೆಲ್ ಗಳ ಮೊರೆ ಹೋಗಿದ್ದು ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗುವ ಸಂಭವ ದಟ್ಟವಾಗಿದೆ.

ಕಳೆದ ಎರಡು ಮೂರು ವರ್ಷಗಳಲ್ಲಿ ಮಿತಿ ಮೀರಿದ ಮಳೆಯ ಕಾರಣ ಜಿಲ್ಲೆಯ ಬಹುತೇಕ ಕೆರೆಗಳು ಜೂನ್, ಜುಲೈ ತಿಂಗಳಲ್ಲೇ ತುಂಬಿ ಕೊಡಿಹೋದದ್ದನ್ನು ಮರೆತಿಲ್ಲ, ಹಾಗಾಗಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ, ಆದರೆ, ಈ ಬಾರಿ ಯಾವುದೇ ಕೆರೆಗೆ ಒಂದು ಅಡಿ ನೀರು ಸಹ ಹರಿದು ಬರದಿರುವುದು ದುರಾದೃಷ್ಟ ಎನ್ನ ಬಹುದು, ಹೀಗಾಗಿ ಮುಂಗಾರು ಮಳೆ ಕೊರತೆ ಯಿಂದಾಗಿ ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಮುಂದಿನ ದಿನಗಳಲ್ಲಿ ಹಿಂಗಾರು ಮಳೆಯಾಗದೇ ಇದ್ದರೆ ಇನ್ನಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಂತೂ ನಿಶ್ಚಿತ. ಕಳೆದ 2-3 ವರ್ಷದಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿಕೊಂಡಿದ್ದವು. ಆದರೆ ಈಗ ಬಹುತೇಕ ಕೆರೆಗಳು ಖಾಲಿಯಾಗಿದ್ದು, ಅಂತರ್ಜಲ ಸಮಸ್ಯೆ ಎದುರಾಗುವ ಲಕ್ಷಣಗಳು ದಟ್ಟವಾಗಿದ್ದು ಇನ್ನಷ್ಟು ಬೋರ್ವೆಲ್ಗಳು ಬತ್ತಿ ಹೋಗುವ ಆತಂಕ ರೈತರನ್ನ ಕಾಡುತ್ತಿದೆ.
ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ?
ಕುಡಿಯುವ ನೀರಿಗೆ ಚಿಕ್ಕಬಳ್ಳಾಪುರ ತಾಲೂಕಿನ 8 ಗ್ರಾಮ, ಬಾಗೇಪಲ್ಲಿ ತಾಲೂಕಿನ 4 ಗ್ರಾಮ, ಚಿಂತಾಮಣಿ ತಾಲೂಕಿನ 6 ಗ್ರಾಮ, ಶಿಡ್ಲಘಟ್ಟ ತಾಲೂಕಿನ 2 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಸದ್ಯಕ್ಕೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಚಿಂತಾಮಣಿ ತಾಲೂಕಿನಲ್ಲಿ 26 ಗ್ರಾಮ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 7 ಗ್ರಾಮ ಶಿಡ್ಲಘಟ್ಟ ತಾಲೂಕಿನಲ್ಲಿ 10 ಗ್ರಾಮ. ಗೌರಿಬಿದನೂರು ತಾಲೂಕಿನ 6 ಗ್ರಾಮ ಹಾಗೂ ಬಾಗೇಪಲ್ಲಿ ತಾಲೂಕಿನ 9 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಲಿದೆ ಎಂದು ಅಂದಾಜಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.
ಶಿಡ್ಲಘಟ್ಟ ನಗರದ 31 ವಾರ್ಡ್‌ಗಳ ಪೈಕಿ 12, 13, 21, 22, 23, 27, 11 ಮತ್ತು 11ನೇ ವಾರ್ಡ್ ಸೇರಿ ಒಟ್ಟು 08 ನೀರಿನ ಸಮಸ್ಯೆಯಿದ್ದ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಗೌರಿಬಿದನೂರಿನಲ್ಲಿ 31 ವಾರ್ಡ್‌ಗಳಿದ್ದು ಇವುಗಳ ಪೈಕಿ ವಾರ್ಡ್ ನಂ. 05, 21, 27ನೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದ್ದು ಖಾಸಗಿ ಬೋರ್‌ವೆಲ್ ಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ.
ಚಿಂತಾಮಣಿ ನಗರದಲ್ಲಿ ವಾರ್ಡ್ ನಂ, 22, 23, 24, 25,26,29,08 ಮತ್ತು 10ನೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಾಗಿದ್ದು, ಖಾಸಗಿ ಬೋವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ 19 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಿದ್ದು 20 ಖಾಸಗಿ ಬೋರ್ ವೆಲ್ ಗಳಿಗೆ ಬಾಡಿಗೆ ನೀಡಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 68,930 ಕುಟುಂಬಗಳಿದ್ದು 36,322 ಕುಟುಂಬಗಳಿಗೆ ಕೊಳಾಯಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಚಿಂತಾಮಣಿಯಲ್ಲಿ ಕಡೆ ಮಾತ್ರ ಕೈಪಂಪ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 596 ಸರಕಾರಿ ಒಡೆತನದ ಬೋರ್ ವೆಲ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿದ್ದು, 20 ಖಾಸಗಿ ಕೊಳವೆಬಾವಿಗಳಿಗೆ ಬಾಡಿಗೆ ನೀಡಿ ನೀರು ಸರಬರಾಜಿಗೆ ಬಳಸಿಕೊಳ್ಳಲಾಗುತ್ತಿದೆ.

ಎಲ್ಲೆಡೆ ನೀರಿನ ಕೊರತೆ
ಚಿಕ್ಕಬಳ್ಳಾಪುರ ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಜಕ್ಕಲಮಡಗು ಮತ್ತು ಬೋರ್ ವೆಲ್ ಗಳಿಂದ ಪ್ರತಿ ನಿತ್ಯ 10 ಎಂಎಲ್ ಡಿ ನೀರು ಬೇಕು. ಸದ್ಯಕ್ಕೆ 8ಎಂಎಲ್‌ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ನ್ನು ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳಾದ ಚಿಂತಾಮಣಿಗೆ ತಾಲೂಕಿನಲ್ಲಿ ಬೊರ್ ವೆಲ್, ಕನಂಪಲ್ಲಿ, ಭಕ್ತರಹಳ್ಳಿ ಕೆರೆ ಮೂಲಗಳಿಂದ ಪ್ರತಿನಿತ್ಯ 12 ಎಂಎಲ್ ಡಿ ನೀರು ಸರಬರಾಜು ಆಗಬೇಕು. ಆದರೆ, ಈಗ ನಿತ್ಯ 8 ಎಂಎಲ್ ಡಿ ನೀರು ಸರಬರಾಜಾಗುತ್ತಿದೆ.
ಗೌರಿಬಿದನೂರಿಗೆ ಬೋರ್ ವೆಲ್‌ಗಳ ಮೂಲಕ 7.50 ಎಂಎಲ್ ಡಿ ನೀರು ಸರಬರಾಜು ಆಗಬೇಕು. ಆದರೆ, ಈಗ 3.5 ಎಂಎಲ್ ಡಿ ನೀರು ಮಾತ್ರ ಸರಬರಾಜಾಗುತ್ತಿದೆ. ಶಿಡ್ಲಘಟ್ಟದಲ್ಲಿ ಬೋರ್ ವೆಲ್‌ಗಳ ಮೂಲಕ 8 ಎಂಎಲ್ ಡಿ ನೀರು ಸರಬರಾಜಾಗಬೇಕು. ಆದರೆ, ನೀರಿನ ಸಮಸ್ಯೆಯಿಂದ ಅಗತ್ಯವಾದಷ್ಟು ನೀರು ಕೊಡಲು ಸಾಧ್ಯವಾಗುತ್ತಿಲ್ಲ.
ಗುಡಿಬಂಡೆ ಪಟ್ಟಣಕ್ಕೆ ನೀರಿನ ಅಭಾವ ಉಂಟಾಗದಂತೆ ಅಮಾನಿ ಬೈರಸಾಗರ ಕೆರೆಯ ನೀರನ್ನು ಶುದ್ಧಿಖರಿಸಿ ಗೃಹ ಬಳಕೆಗೆಂದು ಸರಬರಾಜು ಮಾಡಲಾಗುತ್ತಿದ್ದೂ, ಕುಡಿಯಲು ಬೋರ್ ವೆಲ್ ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಬಾಗೇಪಲ್ಲಿಯಲ್ಲೂ ಹೆಚ್ಚಿನ ಅಭಾವ ಉಂಟಾಗಿಲ್ಲ.
ಮುಂಗಾರು ಕೈಕೊಟ್ಟು ಬಿತ್ತನೆಯಾಗಿದ್ದ ಶೇ. 80 ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ ಹಿಂಗಾರಿನ ಮಳೆ ಬಗ್ಗೆ ಭಾರಿ ನಿರೀಕ್ಷೆಯಿತ್ತು. ಆದರೆ, ಈ ಬಾರಿ ಹಿಂಗಾರು ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಒಂದು ವೇಳೆ ಉತ್ತಮವಾಗಿ ಹಿಂಗಾರು ಮಳೆಯಾದರೆ, ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲವಾದಲ್ಲಿ ನೀರಿನ ಸಮಸ್ಯೆ ತೀವ್ರವಾಗುವುದು ನಿಶ್ಚಿತವಾಗಿದೆ.












Click it and Unblock the Notifications