Krishna Byre Gowda: ಕುಮಾರಸ್ವಾಮಿಗೆ ಕೈ ಮುಗಿಯುತ್ತೇನೆ ಇಷ್ಟು ಮಾಡಲಿ ಸಾಕು- ಕೃಷ್ಣ ಬೈರೇಗೌಡ
ಚಿಕ್ಕಮಗಳೂರು ಆಗಸ್ಟ್ 5: ಮುಡಾ ಹಗರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಚಿಕ್ಕಮಗಳೂರು ನೆರೆ ವೀಕ್ಷಣೆ ಪ್ರವಾಸಕ್ಕೆ ತೆರಳಿದ್ದ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ನೆರೆ ವೀಕ್ಷಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ -ಜೆಡಿಎಸ್ ಒಟ್ಟಾಗಿ ಆಪರೇಷನ್ ಮಾಡಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಬೀಳಿಸೋ ಪುರುಷಾರ್ಧಕ್ಕ ಜನ ಇವರನ್ನ ಆಯ್ಕೆ ಮಾಡಿ ಕಳಿಸಿರೋದು. ಸರ್ಕಾರ ಬೀಳಿಸೋದ್ನೆ ಇವರು ರಾಜ್ಯದ ಅಭಿವೃದ್ಧಿ ಅಂತ ತಿಳಿದಿರುವ ಹಾಗಿದೆ. ಸರ್ಕಾರ ಬೀಳಿಸೋದು ಇರಲಿ, ಕೇಂದ್ರದಿಂದ ಯಾವೆಲ್ಲಾ ಯೋಜನೆಯನ್ನ ಇವರು ರಾಜ್ಯಕ್ಕೆ ತಂದಿದ್ದಾರೆ? ಇವರಿಂದ ರಾಜ್ಯಕ್ಕೆ ಕೊಡುಗೆ ಏನು? ಮೊದಲು ತಿಳಿಸಲಿ' ಎಂದು ಹೆಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಸಿಡಿದಿದ್ದಾರೆ.

'ಆಪರೇಷನ್ ಕಮಲ ಮಾಡುವುದೇ ದೊಡ್ಡ ಕೊಡುಗೆನಾ? ಇವರ ವೈಫಲ್ಯ ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯುವ ಯತ್ನ ನಡೆದಿದೆ. ಕುಮಾರಸ್ವಾಮಿಯವರು ನಮ್ಮ ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಸಾಕು ನಾನು ಅವರ ಕೈಮುಗಿಯುತ್ತೇನೆ' ಎಂದು ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಕೃಷ್ಣ ಬೈರೇಗೌಡ ಸವಾಲು ಹಾಕಿದ್ದಾರೆ.
ಇದೇ ವೇಳೆ ಡಿಸೆಂಬರ್ ವೇಳೆಗೆ ಸರ್ಕಾರ ಬಿದ್ದು ಹೋಗುತ್ತೆ ಎಂಬ ಹೆಚ್ಡಿಕೆ ಹೇಳಿಕೆಗೆ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಏನಾದ್ರು ಮಾಡಿ ಸರ್ಕಾರ ಉರುಳಿಸಬೇಕು ಅಂತಿದೆ. ಅವರ ಪ್ರಯತ್ನ ಜನರಿಂದ ಆಯ್ಕೆಯಾಗಿರೋ ಕರ್ನಾಟಕದ ಸರ್ಕಾರವನ್ನು ಉರುಳಿಸಬೇಕು ಅನ್ನೋದು. ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಂತ್ರಿಯಾಗಿದ್ದಾರೆ. ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಸ್ವಾಮಿ...?

ಕಾಂಗ್ರೆಸ್ ಸರ್ಕಾರವನ್ನು ಬೀಳಿಸಬೇಕೆಂಬುದು ಒಂದೇನಾ ನಿಮ್ಮ ಕೊಡುಗೆ? ಸರ್ಕಾರವನ್ನು ಬೀಳಿಸುವುದಕ್ಕೆ ಎತ್ತುವುದಕ್ಕೆ ವೋಟ್ ಹಾಕಿರುವ ಜನರಿದ್ದಾರೆ. ನೀವೆಲ್ಲಾ ಸೇರಿ ಸೆಂಟ್ರಲ್ ನಲ್ಲಿ ಸರ್ಕಾರ ರಚನೆ ಮಾಡಿದ್ದೀರಲ್ಲಾ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು..? ಆಪರೇಷನ್ ಮಾಡಿ ಕರ್ನಾಟಕದಲ್ಲಿ ಸರ್ಕಾರ ಬೀಳಿಸಿದರೆ ಕರ್ನಾಟಕಕ್ಕೆ ಅದೇ ಕೊಡುಗೆನಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮೇಕೆದಾಟು ಯೋಜನೆಗೆ ಕೇಂದ್ರದಿಂದ ಒಂದು ಪರ್ಮಿಷನ್ ಕೊಡಿಸಿ. ನಾನು ಕಾಂಗ್ರೆಸ್ಸಿಗನಾಗಿ ಕೈಮುಗಿದು ನಿಮಗೆ ಧನ್ಯವಾದ ತಿಳಿಸುತ್ತೇನೆ. ಭದ್ರಾ ಮೇಲ್ದಂಡೆ, ಕಳಸ ಬಂಡೂರಿ ಯೋಜನೆಯನ್ನ ಕೇಂದ್ರ ಸರ್ಕಾರ ಕೆಳಗೆ ಹಾಕಿಕೊಂಡು ಕೂತಿದೆ. ಇದನ್ನ ಮಾಡಿದರೆ ನೀವು ಕೇಂದ್ರದಲ್ಲಿ ಮಂತ್ರಿಯಾಗಿದ್ದಕ್ಕೆ ಸಾರ್ಥಕವಾಗುತ್ತೆ. ಆ ಕಡೆ ಪ್ರಲ್ಹಾದ್ ಜೋಶಿ ಈ ಕಡೆ ಕುಮಾರಸ್ವಾಮಿ ಇಬ್ಬರದ್ದು ಕಾಂಗ್ರೆಸ್ ಸರ್ಕಾರ ಬೀಳಿಸುವ ಸ್ಕೆಚ್. ಸರ್ಕಾರ ಬೆಳೆಸಿದರೆ ಕರ್ನಾಟಕಕ್ಕೆ ಏನು ಸಿಕ್ತು? ನೀವು ಇವತ್ತು ಮಂತ್ರಿಯಾಗಿರೋದು ಸರ್ಕಾರ ರಚನೆ ಆಗಿರೋದು ಬರಿ ದ್ವೇಷ ಸಾಧನೆ ಮಾಡೋದಕ್ಕಾ? ಸರ್ಕಾರ ಬೀಳುಸ್ತೀವಿ...ಬೀಳುಸ್ತೀವಿ ಅನ್ನೋದು ಯಾವ ಪುರುಷಾರ್ಥ? ಅದಕ್ಕಾಗಿ ಜನ ನಿಮ್ಮನ್ನ ಡೆಲ್ಲಿಗೆ ಕಳಿಸಿರೋದಾ ಅಂತ ಯೋಚನೆ ಮಾಡಿ ಎಂದು ಕೃಷ್ಣ ಬೈರೇಗೌಡ ಗುಡುಗಿದ್ದಾರೆ.
ಕೇಂದ್ರ ಬಿಜೆಪಿಯಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿ ಹಾಕುವುದಕ್ಕೆ ಇವೆಲ್ಲ ಗಿಮಿಕ್ ಮಾಡ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.












Click it and Unblock the Notifications