Bengaluru Suburban Rail: ಚಿಕ್ಕಬಳ್ಳಾಪುರಕ್ಕೆ ಉಪನಗರ ರೈಲು ಸೇವೆ, ಇಲ್ಲಿದೆ ಅಪ್ಡೇಟ್
ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ (BSRP) ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ಜಿಲ್ಲೆಗೆ ಈ ಉಪ ನಗರ ರೈಲ್ವೆ ಸೇರಿದಂತೆ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಸಂಬಂಧ ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಇದರಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಕೂಡ ಭಾಗಿಯಾಗಿದ್ದರು.
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ (ಕೆ-ರೈಡ್), ನೈರುತ್ಯ ರೈಲ್ವೆ ವಲಯ (ಎಸ್‌ಡಬ್ಲ್ಯುಆರ್), ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್), ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಪ್ರಾತ್ಯಕ್ಷಿಕೆ ಮೂಲಕ ಕಾಮಗಾರಿಗಳ ಪ್ರಗತಿ ಬಗ್ಗೆ ವಿವರಣೆ ನೀಡಲಾಯಿತು.

ಸಬ್ ಅರ್ಬನ್ ರೈಲು ಯೋಜನೆಯನ್ನು ನಗರದ ಸುತ್ತಮುತ್ತಲಿನ ಪಟ್ಟಣಗಳಾದ ತುಮಕೂರು, ಕುಣಿಗಲ್, ಮಾಗಡಿ, ರಾಮನಗರ, ಆನೇಕಲ್, ಬಂಗಾರಪೇಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ವಿಸ್ತರಣೆ ಮಾಡಬೇಕು. ಬೆಂಗಳೂರು ನಗರದಿಂದ ಸುತ್ತಮುತ್ತಲ ಪಟ್ಟಣಕ್ಕೆ ಸಂಚಾರ ನಡೆಸಲು ಇರುವ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿತ್ತು.
ಕೇಂದ್ರ ಸರ್ಕಾರವು ಪ್ರಸಕ್ತ 2025-26ನೇ ಸಾಲಿನ ಬಜೆಟ್‌ನಲ್ಲೂ ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳಿಗೆ ಒಂದಷ್ಟು ಹಣ ಮೀಸಲಿಟ್ಟಿತ್ತು. ಇದಕ್ಕಾಗಿ ಒಟ್ಟು ₹7,564 ಕೋಟಿ ಮೀಸಲಿಟ್ಟಿದ್ದು, ಇದರಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ 350 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಸುಮಾರು 7,564 ಕೋಟಿ ಮೀಸಲಿಟ್ಟ ಹಣದಿಂದ ರಾಜ್ಯದಲ್ಲಿ ವಿವಿಧ ರೈಲ್ವೆ ಯೋಜನೆಗಳು, ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನೂ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗುವ ಬೆಂಗಳೂರು ಉಪನಗರ ರೈಲು ಯೋಜನೆಗಳಿಗೆ ಇದರಲ್ಲಿ 350 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯು ನಗರದ ಮೂಲಸೌಕರ್ಯದಲ್ಲಿ ಪರಿವರ್ತನೆ ತರುತ್ತದೆ. ಇದು ಬೆಂಗಳೂರಿನ ಕ್ರಿಯಾಶೀಲ ಜನರಿಗೆ ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣವನ್ನು ಖಚಿತಪಡಿಸುತ್ತದೆ. ಇದು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಬೆಂಗಳೂರು ಉಪನಗರ ರೈಲು ಯೋಜನೆಯ ಜಾಲ ಒಟ್ಟು 148 ಕಿಲೋಮೀಟರ್‌ವರೆಗೆ ವಿಸ್ತರಿಸಿದೆ. ಕನಕ, ಸಂಪಿಗೆ, ಪಾರಿಜಾತ ಮತ್ತು ಮಲ್ಲಿಗೆ ಎಂದು ನಾಲ್ಕು ಹಂತಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅನುದಾನದ ಹಂಚಿಕೆಯಲ್ಲಿ ಈ ಯೋಜನೆ ನಿರ್ಮಾಣವಾಗುತ್ತಿದೆ. ತೀವ್ರ ನಿಧಾನಗತಿಯಲ್ಲಿ ಸಾಗುತ್ತಿದ್ದ ಉಪನಗರ ರೈಲ್ವೆ ಯೋಜನೆಗಳು ವೇಗ ಪಡೆಯುವ ಸಾಧ್ಯತೆ ಇದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೂ ಭಾರಿ ಅನುಕೂಲವಾಗಲಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲನೇ ಹಂತದ ಕಾಮಗಾರಿಗಳು ಚುರುಕಾಗಿದೆ. ಇದರ ಮುಂದುವರೆದ ಭಾಗವಾಗಿ ಎರಡನೇ ಹಂತದಲ್ಲಿ ಚಿಕ್ಕಬಳ್ಳಾಪುರ, ಕುಣಿಗಲ್, ಡಾಬಸ್ ಪೇಟೆ, ಹೆಜ್ಜಾಲ ಮುಂತಾದ ಬೆಂಗಳೂರಿನ ಹೊರವಲಯಗಳಿಗೂ ಈ ರೈಲು ಸಂಚಾರವನ್ನು ವಿಸ್ತರಿಸಲು ಯೋಜನೆ ರೂಪಿಸಿ ಅನುಮತಿಗಾಗಿ ಕೇಂದ್ರ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜಧಾನಿ ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಪ್ರಯಾಣಿಸುವವರಿಗಾಗಿ ಸಂಪರ್ಕವನ್ನು ಸರಳಗೊಳಿಸಿ, ದಟ್ಟಣೆ ಕಡಿಮೆ ಮಾಡಿ, ರಸ್ತೆ ಮಾರ್ಗದ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶ ಎಂದು ಹೇಳಲಾಗುತ್ತಿದೆ.












Click it and Unblock the Notifications