ಚಿಕ್ಕಬಳ್ಳಾಪುರ: ಸೆಪ್ಟೆಂಬರ್ 12ರಂದು ಉಚಿತ ಸೇವೆಗೆ 5 ಆಂಬುಲೆನ್ಸ್ ಕೊಡುತ್ತಿದ್ದೇನೆ: ಪ್ರದೀಶ್ ಈಶ್ವರ್
ಚಿಕ್ಕಬಳ್ಳಾಪುರ, ಆಗಸ್ಟ್, 29: ನಮ್ಮನ್ನು ಬೆಳೆಸಿದವರನ್ನು ನಾವೆಂದಿಗೂ ಮರೆಯಬಾರದು, ಅಧಿಕಾರ ಯಾರಿಗೂ ಶಾಶ್ವತವಲ್ಲ. ನೀವು ನನ್ನನ್ನ 5, 10, 15, 20 ಹೀಗೆ ಎಷ್ಟು ವರ್ಷ ಗೆಲ್ಲಿಸುತ್ತಿರೋ ಅಷ್ಟು ವರ್ಷ ಶಾಸಕನಾಗಿರುತ್ತೇನೆ. ಹಾಗೂ ನಿಯತ್ತಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ. ಹಾಗೂ ಸೆಪ್ಟೆಂಬರ್ 12ರಂದು ಅಮ್ಮನ ಹುಟ್ಟುಹಬ್ಬದ ಹಿನ್ನೆಲೆ ಅಂದು ಅವರ ಹೆಸರಿನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಡವರಿಗಾಗಿ, ಅಶಕ್ತರಿಗಾಗಿ 5 ಆಂಬ್ಯುಲೆನ್ಸ್‌ಗಳನ್ನು ಉಚಿತವಾಗಿ ಕೊಡುತ್ತಿದ್ದೇನೆ ಎಂದು ಶಾಸಕ ಪ್ರದೀಶ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಕ್ರಾಸ್‌ನಲ್ಲಿರುವ ಶ್ರೀ ಮಂಜುನಾಥೇಶ್ವರ ಸಮುದಾಯ ಭವನದಲ್ಲಿ ಅರೂರು ಗ್ರಾಮ ಪಂಚಾಯತಿ ಹಾಗೂ ಪೆರೇಸಂದ್ರ ಗ್ರಾಮದ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ಸನ್ಮಾನ, ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ, ಹಿರಿಯ ಕಾಂಗ್ರೆಸ್ ಮುಖಂಡರಿಗೆ ಸನ್ಮಾನ ಸಲ್ಲಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಶಾಸಕರಿಗೆ ಗೌರವ ಕೊಡಿ, ಆದರೆ ಯಾರು ನಮ್ಮನ್ನು ಕಂಡು ಭಯಪಡಬೇಡಿ. ಚುನಾವಣೆಗೂ ಮುನ್ನ ನಾವೆಲ್ಲ ಮತ ನೀಡಿ ಎಂದು ನಿಮ್ಮ ಮನೆ ಮನೆಗೂ ಭಿಕ್ಷೆ ಬೇಡಲು ಬಂದವರು. ಗೆದ್ದ ಕೂಡಲೇ ಗಾಂಭೀರ್ಯ ಪ್ರದರ್ಶಿಸಲು ನನಗೆ ಇಷ್ಟವಿಲ್ಲ. ನಾನು ಶಾಸಕ ಎಂಬ ಅಹಂಕಾರ ಎಂದಿಗೂ ಪಡುವುದಿಲ್ಲ ಎಂದರು.
ಮುಂದಿನ ತಿಂಗಳು ಸೆಪ್ಟೆಂಬರ್ 12ರಂದು ನನ್ನ ಅಮ್ಮನ ಹುಟ್ಟಿದ ದಿನ. ಹೀಗಾಗಿ ಅವರ ಹೆಸರಿನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಡವರಿಗಾಗಿ, ಅಶಕ್ತರಿಗಾಗಿ 5 ಆಂಬ್ಯುಲೆನ್ಸ್‌ಗಳನ್ನು ಉಚಿತವಾಗಿ ಕೊಡುತ್ತಿದ್ದೇನೆ. ಪೆರೇಸಂದ್ರದಲ್ಲೂ ಒಂದು ಆಂಬುಲೆನ್ಸ್ ದಿನದ 24 ಗಂಟೆಯೂ ಉಚಿತ ಸೇವೆ ನೀಡಲಿದ್ದು, ತೀವ್ರ ನಿಗಾ ಘಟಕದ ಬೆಡ್‌ಗಳ ಅವಶ್ಯಕತೆ ಇರುವವರಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನನ್ನ ಕ್ಷೇತ್ರದ ಜನತೆಗಾಗಿ ಒಂದೊಂದು ಬೆಡ್ ಕಾಯ್ದಿರಿಸುವಂತೆ 5 ಆಸ್ಪತ್ರೆಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದೇನೆ ಎಂದರು.
ಕಣ್ಣ ಮುಂದೆ ಅದೇಷ್ಟೋ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಕೊಡುವುದು ನನ್ನ ಮೊದಲ ಅದ್ಯತೆ. ಪೆರೇಸಂದ್ರ ಭಾಗಕ್ಕೆ ಹೆಚ್ಚಿನ ಅನುದಾನ ತಂದು ಮಂಡಿಕಲ್ ಹೋಬಳಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇನೆ. ಪೆರೇಸಂದ್ರ ಗ್ರಾಮದಲ್ಲಿ ಹುಟ್ಟಿ ಈ ಭಾಗದ ಜನತೆಯ ಸಮಸ್ಯೆಗಳನ್ನು ಪರಿಹಾರ ಮಾಡಿ ಈ ಭಾಗವನ್ನು ಅಭಿವೃದ್ಧಿ ಮಾಡುವುದೇ ನನ್ನ ಮಹದಾಸೆ ಎಂದರು.
ಪೆರೇಸಂದ್ರ ಗ್ರಾಮ ನಿರ್ಮಾಣವಾಗಿ 652 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ 60 ವರ್ಷ ದಾಟಿದ ಪ್ರತಿಯೊಬ್ಬರಿಗೂ ಪಾದಪೂಜೆ ಮಾಡುವ ಮಹದಾಸೆ ಹೊಂದಿದ್ದು, ವಿಶೇಷ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು. ಗ್ರಾಮದ ಇತಿಹಾಸವನ್ನು ಸಾರುವ ಕಲ್ಲು ರಾಯಪ್ಪನ ಕೆರೆ ಪಕ್ಕದಲ್ಲಿದ್ದು, ಹಿರಿಯರ ತೋಟದಲ್ಲಿರುವ ಈ ಕಲ್ಲನ್ನು ಯಾರು ಗುರುತಿಸಿಲ್ಲ. ಹಾಗಾಗಿ ಪುರಾತತ್ವ ಇಲಾಖೆಯ ಸಹಕಾರ ಪಡೆದು ಈ ಐಹಾಸಿಕ ಇತಿಹಾಸ ಸಾರುವ ಕಲ್ಲಿರುವ ಜಾಗವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಲಾಗುವುದೆಂದು ಘೋಷಿಸಿದರು
3000 ಜನಸಂಖ್ಯೆ ಹೊಂದಿರುವ ಪೆರೇಸಂದ್ರ ಗ್ರಾಮದ ಜನತೆಗೆ ಕಳೆದ 10 ವರ್ಷಗಳಿಂದ ಒಂದು ಸ್ಮಶಾನ ಕೊಡಲು ಸಾಧ್ಯವಾಗಿಲ್ಲ ಎಂದ ಮೇಲೆ ಅದ್ಯಾವ ಪುರುಷಾರ್ಥಕ್ಕಾಗಿ ನಾವು ಚುನಾವಣೆಯಲ್ಲಿ ಆಯ್ಕೆ ಯಾಗಬೇಕು ಎಂದು ಪರೋಕ್ಷವಾಗಿ ಡಾ.ಕೆ.ಸುಧಾಕರ್ ಅವರನ್ನು ಪ್ರಶ್ನಿಸಿದರು.
ದಲಿತ ಕುಟುಂಬಗಳಿಗೆ ಸ್ಮಶಾನ ಇರಲಿಲ್ಲ. ನಾನು ಗೆದ್ದ ನಂತರ ತಹಶೀಲ್ದಾರ್ ಅವರೊಂದಿಗೆ ತೆರಳಿ ಸುಮಾರು 1.5 ಹೆಕ್ಟೇರ್ ಜಮೀನು ಗುರುತಿಸಿ, ಜಿಲ್ಲಾ ಮಟ್ಟದ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಸರ್ಕಾರದ ಗಮನಕ್ಕೂ ತಂದು ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡಲು ಪ್ರಯತ್ನ ಪಡುತ್ತಿದ್ದರೆ, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಸಹಿ ಹಾಕಲು ಅವರು ಹೇಳಬೇಕು ಇವರು ಹೇಳಬೇಕು ಎಂದು ಸಬೂಬು ಹೇಳುತ್ತಿದ್ದಾರೆ.
ಮುಂದಿನ ಎರಡೂವರೆ ವರ್ಷಗಳ ನಂತರ ನೀವು ನಾನು ಹೇಳಿದಂತೆ ಕೇಳಬೇಕಾಗುತ್ತದೆ. ನಮ್ಮದೇ ನಾಯಕರು ಅಧಿಕಾರಕ್ಕೆ ಬರುತ್ತಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಗುಡುಗಿದರು.
ಸಾರ್ವಜನಿಕರು ವಾಹನ ಚಲಾಯಿಸುವಾಗ ಮದ್ಯಪಾನ ಮಾಡಿ ಯಾರು ವಾಹನ ಚಲಾಯಿಸಬೇಡಿ. ಏನಾದರು ಅನಾಹುತವಾದರೆ ಹೆಂಡತಿ, ಮಕ್ಕಳು ಬೀದಿಪಲಾಗುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಹೇಳುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಯ ಕರ್ತವ್ಯವನ್ನು ಅಭಿನಂದಿಸಿದರು. ನನ್ನ ಕ್ಷೇತ್ರದ ಜನ ಒಗ್ಗಟ್ಟಿನಿಂದ ಸುಖವಾಗಿ ನೆಮ್ಮದಿಯ ಜೀವನ ನಡೆಸಿ, ಯಾರು ಸಹ ಕೋರ್ಟ್ ಕಚೇರಿ ಎಂದು ಅಲಿಯಬೇಡಿ ಎಂದು ಬುದ್ಧಿವಾದ ಹೇಳಿದರು.
ಅರೂರು ಗ್ರಾಮ ಪಂಚಾಯತ್ ಹಾಗೂ ಪೆರೇಸಂದ್ರ ಗ್ರಾಮದ ಹಲವು ಮುಖಂಡರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಅರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಹಾಗೂ ಸ್ಥಳೀಯ ನಾಯಕರಿಗೆ ಸನ್ಮಾನ ಮಾಡಲಾಯಿತು.
ಜನಸ್ಪಂದನ ಕಾರ್ಯಕ್ರಮದಲ್ಲಿ ಅರೂರು ಗ್ರಾ.ಪಂ. ವ್ಯಾಪ್ತಿಯ ನೂರಾರು ಗ್ರಾಮಸ್ಥರು ಅಹವಾಲುಗಳನ್ನು ಸಲ್ಲಿಸಿದರು. ಈ ವೇಳೆ ತಾಲೂಕು ಆಡಳಿತದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಜನರ ದೂರುಗಳನ್ನು ಸ್ವೀಕರಿಸಿ ನೆರವೇರಿಸುವ ಭರವಸೆ ನೀಡಿದರು.
ಜನಸಂದನಾ ಕಾರ್ಯಕ್ರಮಕ್ಕೂ ಮುನ್ನ ಪೆರೇಸಂದ್ರ ಗ್ರಾಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.












Click it and Unblock the Notifications