ಡಿಎಂಕೆ ಸರ್ಕಾರ ತೃಪ್ತಿಪಡಿಸಲು ಕಾಂಗ್ರೆಸ್ ರಾಜ್ಯದ ಹಿತವನ್ನು ಬಲಿ ಕೊಟ್ಟಿದೆ: ಸುಧಾಕರ್
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 29: ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ತೃಪ್ತಿಪಡಿಸಲು ರಾಜ್ಯದ ಜನರ ಹಿತವನ್ನು ಕಾಂಗ್ರೆಸ್ ಸರ್ಕಾರ ಬಲಿ ಕೊಟ್ಟಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ ಕಾವೇರಿಯ ರಕ್ಷಣೆ, ರೈತರ ರಕ್ಷಣೆ ಹಾಗೂ ಜನರ ರಕ್ಷಣೆ ಮಾಡಬೇಕಿರುವ ಕಾಂಗ್ರೆಸ್ ಸರ್ಕಾರ, ಆ ಕೆಲಸವನ್ನು ಮಾಡುತ್ತಿಲ್ಲ. ಸರ್ಕಾರದ ಬೇಜವಾಬ್ದಾರಿ ನಡೆಯಿಂದ ಇಡೀ ರಾಜ್ಯ ತತ್ತರಿಸಿದೆ. ಮಂಡ್ಯ, ಮೈಸೂರು, ರಾಮನಗರದ ರೈತರಿಗೆ ಸರ್ಕಾರ ಕೊಡಲಿ ಪೆಟ್ಟು ಕೊಟ್ಟಿದೆ. ರಾಜಧಾನಿ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರಲಿದೆ ಎಂದರು.

ಕಾವೇರಿ ಎನ್ನುವುದು ಭಾವನಾತ್ಮಕ ವಿಚಾರ. ಈ ವಿಚಾರ ಬಂದಾಗ ರಾಜ್ಯದ ಎಲ್ಲರೂ ಒಗ್ಗೂಡುತ್ತಾರೆ. ಕಾವೇರಿಗಾಗಿ ಬಂದ್ ನಡೆಯಲಿದ್ದು, ಇದಕ್ಕೆ ನಾನು ಕೂಡ ಸಹಕಾರ ನೀಡುತ್ತೇನೆ ಎಂದರು.
ದಲಿತ ಸಂಸದರಿಗೆ ರಕ್ಷಣೆ ಇಲ್ಲ
ಸಾಮಾನ್ಯ ಜನರಿಗೆ ರಕ್ಷಣೆ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ, ಒಬ್ಬ ಸಂಸದರಿಗೆ ರಕ್ಷಣೆ ನೀಡಿಲ್ಲ. ದಲಿತ ಸಮುದಾಯಕ್ಕೆ ಸೇರಿದ ಕೋಲಾರ ಸಂಸದ ಮುನಿಸ್ವಾಮಿ ಅವರನ್ನು ಕೊರಳಪಟ್ಟಿ ಹಿಡಿದು ಆಚೆ ತಳ್ಳುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಂಸದರಿಗೆ ಅಪಮಾನ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಕಾಮಗಾರಿ ಮುಗಿಯುತ್ತಾ ಬಂದಿದೆ. ಹೈಟೆಕ್ ಹೂವಿನ ಮಾರುಕಟ್ಟೆಗೆ 100 ಕೋಟಿ ರೂ. ಗೂ ಹೆಚ್ಚು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದು, ಅದನ್ನು ಈ ಸರ್ಕಾರ ರದ್ದು ಮಾಡಿದೆ. ಶಿಡ್ಲಘಟ್ಟದಲ್ಲಿ ಕೂಡ ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ನಮ್ಮ ಸರ್ಕಾರವೇ ಮಾಡಿತ್ತು. ರೈತರಿಗೆ ಪೂರಕವಾಗಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿದರೆ, ಈಗಿನ ಸರ್ಕಾರ ಅದರ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು.

ಹಿಂದೆ ನಮ್ಮ ಸರ್ಕಾರ ಬೆಳೆ ನಷ್ಟಕ್ಕೆ ಪರಿಹಾರವನ್ನು ನೀಡುವುದರ ಜೊತೆಗೆ ಮೊತ್ತವನ್ನು ದುಪ್ಪಟ್ಟು ಮಾಡಿತ್ತು. ಈಗ ಬರ ಬಂದಿರುವ ಸಂದರ್ಭದಲ್ಲಿ ಬೆಳೆ ಪರಿಹಾರ ನೀಡಿಲ್ಲ. ಎಚ್‌ಎನ್ ವ್ಯಾಲಿ, ಕೆ.ಸಿ.ವ್ಯಾಲಿಯಲ್ಲಿ ತೃತೀಯ ಹಂತದ ಶುದ್ಧೀಕರಣ ಘಟಕ ನಿರ್ಮಿಸಲು ಹಿಂದಿನ ಸರ್ಕಾರ ಪ್ರಸ್ತಾಪಿಸಿದ್ದರೂ, ಅದನ್ನು ಈಗಿನ ಸರ್ಕಾರ ಜಾರಿ ಮಾಡಿಲ್ಲ. ಹಾಲು ಒಕ್ಕೂಟದಲ್ಲೂ ರೈತರಿಗೆ ಅನ್ಯಾಯವಾಗಿದೆ ಎಂದರು.
ವಿಶ್ವಕರ್ಮ ಜಯಂತಿಯಲ್ಲಿ ಸುಧಾಕರ್ ಭಾಗಿ
ವಿಶ್ವಕರ್ಮ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಪರಬ್ರಹ್ಮ ಸ್ವರ್ಣ ಖಚಿತ ಪಂಚಲೋಹ ಮೂರ್ತಿಯ ದೃಷ್ಟಿ ಬಿಂಬ ಪ್ರಾಣ ಪ್ರತಿಷ್ಠಾಪನೆ ಮೆರವಣಿಗೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು.
ಬಳಿಕ ಮಾತನಾಡಿದ ಅವರು, ಮಹರ್ಷಿ ವಿಶ್ವಕರ್ಮರನ್ನು ಭೂಲೋಕದಲ್ಲಿ ಎಲ್ಲವನ್ನೂ ಸೃಷ್ಟಿಸಿದ ದೇವರು ಎಂದು ಪೂಜಿಸಲಾಗುತ್ತದೆ. ವಿಶ್ವಕರ್ಮಿಗಳು ಶ್ರಮವನ್ನೇ ನಂಬಿರುವ ಜನಾಂಗವಾಗಿದ್ದು, ಈ ಸಮುದಾಯದಲ್ಲಿ ಅನೇಕ ಬಡವರಿದ್ದಾರೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮುದಾಯವನ್ನು ಮುಂದೆ ತರಲು ಸರ್ಕಾರ ಕ್ರಮ ವಹಿಸಬೇಕು ಎಂದರು.
ಕುಶಲಕರ್ಮಿಗಳ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು 13 ಸಾವಿರ ಕೋಟಿ ರೂಪಾಯಿ ಮೊತ್ತದ ಪಿಎಂ ವಿಶ್ವಕರ್ಮ ಯೋಜನೆಯನ್ನು ನೀಡಿದ್ದಾರೆ. ಈ ಸಮುದಾಯಗಳ ಬಗ್ಗೆ ವಿಶೇಷ ಕಾಳಜಿಯನ್ನು ಬಿಜೆಪಿ ಇಟ್ಟುಕೊಂಡಿದ್ದು, ಇದೇ ಮೊದಲ ಬಾರಿಗೆ ಇಂತಹ ಯೋಜನೆ ತರಲಾಗಿದೆ ಎಂದರು.












Click it and Unblock the Notifications