Yettinahole Project: ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಿ- ಕೆ.ಸುಧಾಕರ್ ಒತ್ತಾಯ
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 5: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳೂ ಸೇರಿದಂತೆ ವಿವಿಧ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಉದ್ದೇಶಿಸಿ ಜಾರಿ ಮಾಡಿರುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರೆತ್ತುವ ಕಾರ್ಯಕ್ಕೆ ನಾಳೆ ಚಾಲನೆ ದೊರೆಯುತ್ತಿರುವುದು ಸ್ವಾಗತಾರ್ಹ ಎಂದು ಸಂಸದ ಡಾ.ಕೆ.ಸುಧಾಕರ್ ಅವರು ಅಭಿಪ್ರಾಯಪಟ್ಟರು.
ಅವರು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಈ ಯೋಜನೆಯ ಮೊದಲ ಹಂತದ ನೀರೆತ್ತುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡುತ್ತಿದೆ. ಈ ಯೋಜನೆಯ ನಮ್ಮ ಭಾಗದ ಕಾಮಗಾರಿಯನ್ನು 2026 ರ ವೇಳೆಗಾದರೂ ಆದ್ಯತೆಯ ಮೇಲೆ ಪೂರ್ಣಗೊಳಿಸಿ ಪ್ರಮುಖ ಫಲಾನುಭವಿ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀಡಬೇಕು. ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರ ಕೃಷ್ಣಾ ನದಿ ಪಾತ್ರದ ನೀರನ್ನು ಹರಿಸುವ ನಿಟ್ಟಿನಲ್ಲಿ ಆಂಧ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ರಾಜ್ಯದಿಂದ ನಿಯೋಗ ಕರೆದುಕೊಂಡು ಹೋಗಲು ಸರ್ಕಾರ ಸಿದ್ದವಿದ್ದಲ್ಲಿ ಸಹಕರಿಸಲು ಸಿದ್ದ ಎಂದರು.
ನಾರಾಯಣಪುರ ಜಲಾಶಯದಿಂದ ಆಂಧ್ರಕ್ಕೆ 10 ಟಿಎಂಸಿ ನೀರನ್ನು ಕೊಟ್ಟು ಆಂಧ್ರದ ಕೃಷ್ಣಾ ನದಿ ಪಾತ್ರದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ತರಲು ಸಾಧ್ಯವಿದೆ. ಈ ವಿನಿಮಯದ ಕಾರ್ಯಕ್ಕೆ ಸರ್ಕಾರ ಮುಂದಾದಲ್ಲಿ ಕೇವಲ ಆರು ತಿಂಗಳಿಂದ ವರ್ಷದೊಳಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಲು ಸಾಧ್ಯವಾಗಲಿದೆ. ಈ ವಿಷಯದಲ್ಲಿ ರಾಜ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಗಂಭೀರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಅಭಿಯಾನದ ರೂಪದಲ್ಲಿ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದರು.
ಒಂದು ಹೆಕ್ಟೇರ್ ದ್ರಾಕ್ಷಿ ಬೆಳೆಗೆ 14 ಸಾವಿರ ಬೆಳೆ ವಿಮೆ ಮಾಡಿಸಿದರೆ ಬೆಳೆ ನಷ್ಟವಾದಲ್ಲಿ 2.80 ಲಕ್ಷ ಬೆಳೆ ಪರಿಹಾರ ರೈತರಿಗೆ ಸಿಗಲಿದೆ. ಅದೇ ರೀತಿ ಕೃಷಿ ಬೆಳೆಗಳಿಗೆ 500-600 ರೂ.ಗಳ ಒಳಗೆ ಬೆಳೆ ವಿಮೆ ಇರುತ್ತದೆ ಆದರೆ ಬೆಳೆ ಪರಿಹಾರ ತೃಪ್ತಿದಾಯಕವಾಗಿರುತ್ತದೆ ಎಂದರು.
ಇಂತಹ ಮಹತ್ವಾಕಾಂಕ್ಷಿ ಉಪಯುಕ್ತ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ರೈತರ ಭಾಗವಹಿಸುವಿಕೆಯನ್ನು ಹೆಚ್ಚು ಮಾಡಲು ಅರಿವು ಕಾರ್ಯಕ್ರಮಗಳನ್ನು ಅಭಿಯಾನದ ರೀತಿ ಮಾಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಇಲಾಖೆಗಳ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳನ್ನು ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಅನುಷ್ಠಾನಗೊಳಿಸಬಹುದು, ಕೈಗೊಳ್ಳಬಹುದು, ಎಷ್ಟು ಅನುದಾನ ಬೇಕು, ಎಲ್ಲ ವಿವರವುಳ್ಳ ಪ್ರಸ್ತಾವನೆಯನ್ನು ನೀಡುವಂತೆ ಹಾಗೂ ಕೃಷಿ ಮತ್ತು ತೋಟಗಾರಿಕಾ ಬೆಳೆಗಳನ್ನು ಬಹುದಿನಗಳವರೆಗೆ ದಾಸ್ತಾನು ಮಾಡಿ ರೈತರಿಗೆ ಅನುಕೂಲವಾಗಲು ಒಂದು ಸರ್ಕಾರಿ (ಶೀತಲ ಕೇಂದ್ರ) ಕೋಲ್ಡ್ ಸ್ಟೊರೇಜ್ ಕೇಂದ್ರ ನಿರ್ಮಿಸಲು ಪ್ರಸ್ತಾವನೆ ನೀಡಲು ಸೂಚನೆ ನೀಡಿದರು.
ನಿವೇಶನ ರಹಿತರ ಪಟ್ಟಿ ಮಾಡಿ: ಈ ವರ್ಷ ವಸತಿ ರಹಿತರಿಗೆ ವಸತಿ ಸೌಲಭ್ಯ ಒದಗಿಸಲು 3 ಕೋಟಿ ಮನೆಗಳನ್ನು ಮಂಜೂರು ಮಾಡುವುದಾಗಿ ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ. ಇದರಿಂದ ಜಿಲ್ಲೆಯ ವಸತಿರಹಿತರಿಗೂ ಅನುಕೂಲವಾಗಲಿದ್ದು, ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಿ ಮನೆಯನ್ನೂ ನಿರ್ಮಿಸಿಕೊಡಲಾಗುವುದು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಜನ ನಿವೇಶನ ರಹಿತರಿದ್ದಾರೆ, ಎಷ್ಟು ಜನ ವಸತಿ ರಹಿತರಿದ್ದಾರೆ, ಸಮೀಕ್ಷೆ ಮಾಡಿ ಪಟ್ಟಿ ನೀಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದರು. ಈಗಾಗಲೇ ನಿವೇಶನ ರಹಿತರಿಗೆ ಹಂಚಿಕೆ ಮಾಡಿರುವ ಹಕ್ಕುಪತ್ರಗಳನ್ನು ವಾಪಸ್ಸು ನೀಡುವಂತೆ ಯಾರನ್ನು ಕೇಳಬಾರದು. ಜೊತೆಗೆ ವಸತಿ ಉದ್ದೇಶಕ್ಕೆ ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ನಿವೇಶನಗಳಾಗಿ ವಿಂಗಡಿಸಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಯನ್ನು ಮೆಡಿಕಲ್ ಕಾಲೇಜಿಗೆ ವರ್ಗಾಯಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅರೂರು ಬಳಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶೈಕ್ಷಣಿಕ ತರಗತಿಗಳು ಈಗಾಗಲೇ ನಡೆಯುತ್ತಿವೆ. ಅವರ ಕಲಿಕೆಗೆ ಪೂರಕವಾಗಿ ಹಾಗೂ ಈ ಭಾಗದ ಸಾರ್ವಜನಿಕರಿಗೆ ಪೂರಕವಾಗುವಂತೆ ಜಿಲ್ಲಾ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಲು ಕ್ರಮವಹಿಸಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ 50 ಹಾಸಿಗೆಗಳ ಸಾಮಥ್ರ್ಯದ ಜಿಲ್ಲಾ ಆಯುಷ್ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮವಹಿಸಬೇಕು. ಅದನ್ನು 30 ಹಾಸಿಗೆಗಳ ಸಾಮಥ್ರ್ಯಕ್ಕೆ ಇಳಿಸುವ ಪ್ರಸ್ತಾಪವನ್ನು ಕೈ ಬಿಡಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೂ ಪತ್ರ ಬರೆಯುವುದಾಗಿ ಸಂಸದರು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 14 ಲಕ್ಷ ಜನಸಂಖ್ಯೆಯಿದ್ದು, 4.40 ಲಕ್ಷ ಜನರು ಆರೋಗ್ಯ ಭಾರತ ಆಯುಷ್ಮಾನ್ ಕರ್ನಾಟಕ (ABARK)) ಯೋಜನೆಯಡಿ ನೋಂದಣಿಯಾಗಿದ್ದಾರೆ. ಇನ್ನುಳಿದ ಜನರನ್ನು ಈ ವ್ಯಾಪ್ತಿಯಡಿ ನೋಂದಣಿ ಆಗಲು ವಿಶೇಷ ಅಭಿಯಾನ ಕೈಗೊಳ್ಳಬೇಕು. ಬಡವರು, ರೈತರಿಗೆ ಈ ಯೋಜನೆ ಸದುಪಯೋಗ ಆಗಲಿದೆ. ಈ ಕುರಿತು ಸಾರ್ವಜನಿಕರನ್ನು ಪ್ರೇರೆಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಪುರಸ್ಕೃತ ಯೋಜನೆಯ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ, ಲೋಕಾರ್ಪಣೆ ಮಾಡುವಾಗ, ಶಂಕು ಸ್ಥಾಪನೆ ಕಾರ್ಯಕ್ರಮಗಳನ್ನು ಕೈಗೊಳ್ಳುವ ಒಂದು ವಾರ ಮುಂಚಿತವಾಗಿ ನನ್ನ ಗಮನಕ್ಕೆ ತರಲು ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ದಿಶಾ ಸಮಿತಿ ಸದಸ್ಯರಾದ ಶಿವಪ್ಪ, ಗಣೇಶ ರೆಡ್ಡಿ, ಲಲಿತಮ್ಮ, ಮಮತಾ, ಶಿವಕುಮಾರ್, ಬಿ.ವಿ.ಕೃಷ್ಣ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications