ಚಿಮುಲ್, ಕೋಚಿಮುಲ್ ಆಯ್ಕೆ ಯಾವುದು? ಕಾಂಗ್ರೆಸ್ ಪಾರುಪತ್ಯದಿಂದ ಜಂಜಾಟಕ್ಕೆ ಸಿಗುತ್ತಾ ಮುಕ್ತಿ?
ಚಿಕ್ಕಬಳ್ಳಾಪುರ, ಜೂನ್ 07: ಕೋಚಿಮುಲ್‌ನಿಂದ ಚಿಮುಲ್ ಬೇರ್ಪಟ್ಟು ಬರೋಬ್ಬರಿ 10 ತಿಂಗಳಾಯ್ತು. ಎಲ್ಲವೂ ಸರಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಹೊಸ ಆಡಳಿತ ಮಂಡಳಿ ರಚನೆಯಾಗಿ ಸ್ವತಂತ್ರವಾಗಿ ಆಡಳಿತ ನಡೆಯಬೇಕಿತ್ತು. ಆದರೆ ರಾಜಕೀಯ ಸಂಘರ್ಷದಲ್ಲಿ ಬೇಯುತ್ತಿರುವ ಚಿಮುಲ್ ಭವಿಷ್ಯ ಈಗ ಕಾಂಗ್ರೆಸ್ ಜನಪ್ರತಿನಿಧಿಗಳ ಕೈ ಸೇರಿದೆ. ಹೀಗಾಗಿ ವಿಭಜನೆಯಾಗಿರುವ ಚಿಮುಲ್ ಹಾಗೇ ಉಳಿಯುತ್ತೋ ಇಲ್ಲವೋ ಎಂಬುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹಾಲು ಒಕ್ಕೂಟ ವಿಭಜನೆ ಸಂಬಂಧ ಹಾಲಿ ಕೋಚಿಮುಲ್ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ 10 ತಿಂಗಳಿನಿಂದ ಜಿಲ್ಲಾಧಿಕಾರಿಯವರೆ ಆಡಳಿತಾಧಿಕಾರಿಯಾಗಿ ಮುಂದುವರಿದಿದ್ದಾರೆ. ಆಡಳಿತ ಮಂಡಳಿ ರಚನೆ ಇನ್ನೂ ಕಗ್ಗಂಟಾಗೇ ಉಳಿದಿದೆ. ಹಾಲು ಒಕ್ಕೂಟದ ವಿಚಾರದಲ್ಲಿ ದಾಳಕ್ಕೆ ಪ್ರತಿದಾಳಗಳು ಉರುಳುತ್ತಲೇ ಇವೆ. ಈಗಲೂ ನಿರ್ದೇಶಕ ಸ್ಥಾನಗಳಿಗಾಗಿ ಕಾನೂನು ಹೋರಾಟ ಮುಂದುವರೆದಿದ್ದು ತೀರ್ಪಿಗಾಗಿ ಆದೇಶ ಕಾಯ್ದಿರಿಸಲಾಗಿದೆ.

ರಾಜಕೀಯ ಘಾಟು
ಸಚಿವ ಡಾ.ಕೆ.ಸುಧಾಕರ್ ಅವರ ಒತ್ತಾಸೆಯಂತೆ ಕೋಚಿಮುಲ್ ವಿಭಜನೆಯಾಗಿದ್ದು ಬಹಿರಂಗ ಸತ್ಯ. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವಿರೋಧದ ನಡುವೆಯೂ ಕೋಚಿಮುಲ್ ವಿಭಜನೆಯಾಗಿತ್ತು. ಆನಂತರ ಹಾಲಿ ನಿರ್ದೇಶಕರ ಸ್ಥಾನಗಳನ್ನು ರದ್ದುಗೊಳಿಸಿ ಹೊಸ ಆಡಳಿತ ಮಂಡಳಿ ರಚಿಸಿ ಎಂಬ ಪ್ರಸ್ತಾಪವೇ ಕಾನೂನು ಕಹೋರಾಟಕ್ಕೆ ಕಾರಣವಾಗಿತ್ತು. ಎರಡು ಬಣಗಳ ಜಗಳದಲ್ಲಿ ಚಿಮುಲ್ ಗೆ ಇನ್ನೂ ಸ್ವತಂತ್ರ ಮಂಡಳಿ ದೊರೆತಿಲ್ಲ. ಈಗಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆಯುತ್ತಿದೆ.
ಕಾನೂನು ಹೋರಾಟ ಏಕೆ ?
2019 ಮೇ 13ರಂದು ಕೋಚಿಮುಲ್‌ಗೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಗೆ ಜಿಲ್ಲೆಯ 6 ಮಂದಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 7 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಕೋಲಾರ ಹಾಲು ಒಕ್ಕೂಟದ ಹೊಸ ಆಡಳಿತ ಮಂಡಳಿಯು 2019 ಮೇ.13 ರಿಂದ ಆಸ್ತಿತ್ವಕ್ಕೆ ಬಂದಿದ್ದು, 2014 ಮೇ12ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಚಿಮುಲ್ ಬೇರ್ಪಟ್ಟ ನಂತರ ಉದ್ದೇಶ ಪೂರ್ವಕವಾಗಿ ಹಾಲಿ ನಿರ್ದೇಶಕರ ಸ್ಥಾನಕ್ಕೆ ಕುತ್ತು ತರಲಾಗಿದೆ. ಹೀಗಾಗಿ ಇದನ್ನು ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಇಳಿಯಲಾಗಿದೆ ಎಂದು ಕಾಂಗ್ರೆಸ್ ಪರ ನಿರ್ದೇಶಕರು ಆರೋಪಿಸಿದರು.
ಸದ್ಯ ನಿಯಮದ ಪ್ರಕಾರ ಜಿಲ್ಲೆಯ ಒಕ್ಕೂಟದ ನಿರ್ದೇಶಕರ ಅವಧಿ ಅಲ್ಪಾಯುಷಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸುವ ಆಡಳಿತ ಮಂಡಳಿ ನಿರ್ದೇಶಕರು ಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆ ಆಗುವವರೆಗೆ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾಗಿ ಮುಂದುವರಿಯಲು ಸರಕಾರ ಸೂಚಿಸಿದೆ. ಹೀಗಾಗಿ ಹಾಲಿ ನಿರ್ದೇಶಕರು ಇದ್ದೂ ಇಲ್ಲದಂತೆ ಇರಬೇಕಾಗುತ್ತದೆ. ಹೀಗಾಗಿ ಹಲವು ತಿಂಗಳಿಂದ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್ ನಿರ್ಧಾರವೇನು?
ಚಿಕ್ಕಬಳ್ಳಾಪುರ ವಿಧಾಸನಭಾ ಕ್ಷೇತ್ರಕ್ಕೆ ಈಗ ಕಾಂಗ್ರೆಸ್ ಪಕ್ಷದ ಪ್ರದೀಪ್ ಈಶ್ವರ್ ಶಾಸಕರಾಗಿದ್ದಾರೆ. ಚಿಮುಲ್ ವಿಭಜನೆ ಮಾಡಲು ಮುಂದಾಳತ್ವ ವಹಿಸಿದ್ಧ ಡಾ.ಕೆ.ಸುಧಾಕರ್ ಈಗ ಮಾಜಿ ಶಾಸಕರಾಗಿದ್ದಾರೆ. ಈಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆಧಿಪತ್ಯ ಮುಂದುವರೆದಿದ್ದು ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಅವರಿಗೆ ಸಚಿವ ಸ್ಥಾನ ದೊರೆತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವು ಸಹ ದೊರೆತಿದ್ದು, ಮುಂದಿನ ದಿನಗಳಲ್ಲಿ ಚಿಮುಲ್ ಭವಿಷ್ಯ ಡಾ.ಎಂ.ಸಿ.ಸುಧಾಕರ್ ಅವರ ನಿರ್ಧಾರದ ಮೇಲೆ ನಿಲ್ಲಲಿದೆ.
ಚಿಮುಲ್ ಸ್ಥಾಪನೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದರು. ನಿರೀಕ್ಷಿತ ಹಾಲಿನ ಉತ್ಪಾದನೆಯಿಲ್ಲದೆ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಪರ ನಿರ್ದೇಶಕರ ವಾದ. ಹಾಲಿನ ಉತ್ಪಾದನೆ ಕಡಿಮೆ ಇರುವ ಎಲ್ಲ ಒಕ್ಕೂಟಗಳು ನಷ್ಟದಲ್ಲಿವೆ. ಹೀಗಾಗಿ ವಿಭಜನೆಗಿಂತ ಒಂದೇ ಒಕ್ಕೂಟ ಮಾಡಿ ರೈತರಿಗೆ ಹೆಚ್ಚಿನ ದರ ಒದಗಿಸುವ ಉದ್ದೇಶ ಕಾಂಗ್ರೆಸ್ ನಿರ್ದೇಶಕರಿಗೆ ಇದೆ.
ವಿರೋಧಿ ಬಣ ಹೇಳೋದೇನು?
ಅಭಿವೃದ್ಧಿ ದೃಷ್ಟಿಯಿಂದ ಚಿಮುಲ್ ಇದ್ದರೆ ಒಳ್ಳೆಯದು. ಹಾಲಿನ ಉತ್ಪಾದನೆಗೆ ಪ್ರೋತ್ಸಾಹ ಕೊಟ್ಟು ಉದ್ಯಮ ಬೆಳೆಸಿದರೆ ಎಲ್ಲರಿಗೂ ಆದಾಯ ಸಿಗಲಿದೆ. ಅಲ್ಲದೆ, ಜಿಲ್ಲೆಯಾಗಿ 15 ವರ್ಷ ವಾದರೂ ಪ್ರತ್ಯೇಕ ಒಕ್ಕೂಟ ಇಲ್ಲದಿ ರುವುದು ಸರಿಯಲ್ಲ ಎಂಬುದು ಮತ್ತೊಂದು ಬಣದ ವಾದ. ಸದ್ಯಕ್ಕೆ ನಡೆಯುತ್ತಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕು ಹಾಲು ಉತ್ಪಾದಕರಿಗೆ ಒಳಿತಾದರೆ ಒಳ್ಳೆಯದು. ಮತ್ತೆ ಏನಾದರೂ ಸ್ವಹಿತಾಸಕ್ತಿ, ರಾಜಕೀಯಕ್ಕೆ ಪ್ರತ್ಯೇಕ ಒಕ್ಕೂಟ ಸಿಕ್ಕಿಕೊಂಡರೆ ಜಿಲ್ಲೆಯ ಹಾಲು ಉತ್ಪಾದಕರ ಗೋಳನ್ನು ದೇವರೇ ಕೇಳಬೇಕು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿತ್ಯ 5ಲಕ್ಷ 10ಸಾವಿರ ಲೀ ಹಾಲು ಉತ್ಪಾದನೆಯಾಗುತ್ತಿದೆ. ಜಿಲ್ಲೆಯಾದ್ಯಂತ 810 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು 3 ಲಕ್ಷ ಪ್ಯಾಕೆಟ್ ಹಾಲು ಹಾಗೂ 2.5 ಲಕ್ಷ ಗುಡ್‌ಲೈಫ್ ಹಾಲು ಮಾರಾಟವಾಗುತ್ತಿದೆ ಎಂಬ ಮಾಹಿತಿ ಇದೆ.
ರಾಜಕೀಯ ಸ್ವಾರ್ಥಕ್ಕಾಗಿ ಎಲ್ಲ ನಿರ್ದೇಶಕರ ಅಭಿಪ್ರಾಯ ಆಲಿಸದೆ ಪ್ರತ್ಯೇಕ ಒಕ್ಕೂಟ ಮಾಡಿದ್ದು ತಪ್ಪು, ಡಾ. ಎಂ.ಸಿ. ಸುಧಾಕ ಅವರಿಗೆ ಒಕ್ಕೂಟವನ್ನು ಸಮೃದ್ಧವಾಗಿ ಕಟ್ಟುವ ಒತ್ತಾಸೆಯಿದೆ. ಇದರ ಬಗ್ಗೆ ಹೊಸ ಸರಕಾರದ ಜತೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೋಚಿಮುಲ್ ನಿರ್ದೇಶಕ ಅಶ್ವತ್ಥ ನಾರಾಯಣ ಬಾಬು ಹೇಳಿದ್ದಾರೆ.
ಹಾವೇರಿಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಸ್ವತಂತ್ರ ಆಡಳಿತ ಮಂಡಳಿ ರಚನೆಗೆ ಅವಕಾಶ ನೀಡಲಾಗಿತ್ತು. ಆದರೆ ಚಿಮುಲ್ ವಿಚಾರದಲ್ಲಿ ಸದ್ಯ ಇರುವ ನಿರ್ದೇಶಕರನ್ನು ವಜಾ ಮಾಡಿ ಪ್ರತ್ಯೇಕ ಚುನಾವಣೆ ನಡೆಸುವಂತೆ ಆದೇಶ ಮಾಡಿ ಸ್ವಾರ್ಥ ರಾಜಕೀಯ ಮಾಡಿದರು. ಈ ಸಂಬಂಧ ನಮ್ಮ ನೂತನ ಜನಪ್ರತಿನಿಧಿಗಳು ವೈಜ್ಞಾನಿಕ ಅಂಶಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಹೇಳಿದ್ದಾರೆ.












Click it and Unblock the Notifications