ಹೆಜ್ಜೇನು ದಾಳಿಯಿಂದ ಸಂಸದ ಸುಧಾಕರ್ ಜಸ್ಟ್ ಮಿಸ್, ಎಲ್ಲಿ?
ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರು ಇಂದು ದೊಡ್ಡ ಆಪತ್ತಿನಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತೆರಳಿದಾಗ ಹೆಜ್ಜೇನು ದಾಳಿ ಮಾಡಿದ್ದು, ಸಂಸದ ಸುಧಾಕರ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚೆಗೆ ಭಾರಿ ಮಳೆ ಸುರಿದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಜಕ್ಕಲಮಡುಗು ಜಲಾಶಯ ತುಂಬಿ ಹರಿಯುತ್ತಿದೆ. ಹಾಗಾಗಿ ಸಂಸದ ಸುಧಾಕರ್ ಅವರು ಈ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇನ್ನೇನು ಬಾಗಿನ ಅರ್ಪಿಸಲು ಸಂಸದರು ಬಂದರು ಅನ್ನುವ ಹೊತ್ತಿಗೆ ಹೆಜ್ಜೇನುಗಳು ದಾಳಿ ಮಾಡಿವೆ ಎಂದು ತಿಳಿದುಬಂದಿದೆ.

ಕೂಡಲೇ ಸುಧಾಕರ್ ಅವರು ಹೆಜ್ಜೇನು ದಾಳಿಯಿಂದ ಪಾರಾಗಿದ್ದಾರೆ. ಆದರೆ, ಕಾಯಕ್ರಮಕ್ಕೆ ಹೆಚ್ಚಿನ ಜನ ಸೇರಿದ್ದರಿಂದ ನಗರಸಭಾ ಸದಸ್ಯರು ಸೇರಿ ಹಲವರ ಮೇಲೆ ಹೆಜ್ಜೇನು ಅಟ್ಯಾಕ್ ಮಾಡಿದೆ. ಜೇನು ದಾಳಿಯಿಂದ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.
ಮೊದಲಿಗೆ ಇಂದು ಬೆಳಿಗ್ಗೆ ಈ ಬಾಗಿನ ಅರ್ಪಣೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಕಾರ್ಯಕ್ರಮ ಸಂಜೆಗೆ ಮುಂದೂಡಲಾಗಿತ್ತು. ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಂದ ಸುಧಾಕರ್ ಅವರು ಸಂಜೆ 4 ಗಂಟೆಗೆ ಬಾಗಿನ ಕಾರ್ಯಕ್ರಮಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅದರಂತೆ ಸುಧಾಕರ್ ಬಾಗಿನ ಅರ್ಪಣೆಗೆ ಜಲಾಶಯದ ಸಮೀಪಕ್ಕೆ ಬಂದ ಕೂಡಲೇ ಹೆಜ್ಜೇನು ದಾಳಿ ಮಾಡಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರ್ಚಕರು, ಅಧಿಕಾರಿಗಳು, ಸಂಸದರ ಬೆಂಬಲಿಗರು, ನಗರಸಭಾ ಸದಸ್ಯರು ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು. ಬಳಿಕ ಬಾಗಿನ ಅರ್ಪಣೆ ಕಾರ್ಯಕ್ರಮ ಕ್ಯಾನ್ಸಲ್ ಮಾಡಿ ಸುಧಾಕರ್ ವಾಪಸ್ ಹೊರಟರು ಎಂದು ತಿಳಿದುಬಂದಿದೆ.

ಮೈದುಂಬಿ ಹರಿಯುತ್ತಿದೆ ಜಕ್ಕಲಮಡಗು, ಬೀರಿದೆ ಅವಳಿ ನಗರಗಳ ಜನರ ಮೊಗದಲ್ಲಿ ನಗು ಎಂದು ಸುಧಾಕರ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದಲ್ಲಿರುವ ಜಕ್ಕಲಮಡಗು ಜಲಾಶಯ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸುವ ನೀರಿನ ಸೆಲೆಯಾಗಿದ್ದು, ಕಳೆದ ವರ್ಷ ಮಳೆಯ ಕೊರತೆಯಿಂದ ಜಲಾಶಯ ಕೋಡಿ ಬಿದ್ದಿರಲಿಲ್ಲ ಎಂದಿದ್ದಾರೆ.
ಎರಡು ವರ್ಷಗಳ ಹಿಂದೆ, ಅಂದರೆ, 2022ರ ಜೂನ್ ತಿಂಗಳಲ್ಲೇ ಕೋಡಿಬಿದ್ದು ಎರಡು ನಗರಗಳಲ್ಲಿ ಕಳೆದ ಎರಡು ವರ್ಷದಿಂದ ಯಾವುದೇ ನೀರಿನ ಸಮಸ್ಯೆಯಾಗದಂತ ಪರಿಸ್ಥಿತಿ ಇತ್ತು. ಇದೀಗ ಮತ್ತೊಮ್ಮೆ ಜಲಾಶಯ ತುಂಬಿರುವುದು ಇನ್ನೆರಡು ವರ್ಷಗಳ ನೀರಿನ ಸಮಸ್ಯೆಯನ್ನ ದೂರ ಮಾಡಿದೆ ಎಂದು ಸುಧಾಕರ್ ಹೇಳಿದ್ದಾರೆ.
ಜಕ್ಕಲಮಡು ಜಲಾಶಯ 4390 ದಶಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯ, 51.25 ಚ.ಮೀ. ಶೇಖರಣಾ ವಿಸ್ತಿರ್ಣ ಹೊಂದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ನಗರ ಶೇ.68 ಪಾಲು ಪಡೆದರೆ, ದೊಡ್ಡಬಳ್ಳಾಪುರ ನಗರಕ್ಕೆ ಶೇ.32 ಪಾಲಿದೆ. ಈ ಬಾರಿ ಜಲಾಶಯ ತುಂಬಿ ಹರಿಯಲಿದೆ ಎಂಬ ಜನರ ಆಶಾಭಾವನೆಗೆ ತಕ್ಕಂತೆ ಉತ್ತಮ ಮಳೆಯಾಗಿ ಜಲಾಶಯ ತುಂಬಿರುವುದು ಎರಡು ನಗರಗಳ ಜನತೆಗೆ ಅತ್ಯಂತ ಸಂತಸದ ವಿಷಯವಾಗಿದೆ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications