ಚಿಕ್ಕಬಳ್ಳಾಪುರ ಬಿಟ್ಟು ಹೋಗಲ್ಲ ಎಂದ ಎಂ. ವೀರಪ್ಪ ಮೊಯ್ಲಿ: ನಾನು ಪ್ರಬಲ ಆಕಾಂಕ್ಷಿ ಎಂದ ರಕ್ಷಾ ರಾಮಯ್ಯ
ಚಿಕ್ಕಬಳ್ಳಾಪುರ ಡಿಸೆಂಬರ್ 14: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಹೊರಗೆ ದೂಡಿದರೂ ನಾನು ಬೇರೆಲ್ಲೂ ಹೋಗಲ್ಲ. ನನ್ನನ್ನು 2 ಬಾರಿ ಆರಿಸಿ ಕಳಿಸಿರುವ ನಿಮ್ಮನ್ನು ಬಿಟ್ಟು ಬೇರೆಲ್ಲೂ ಹೋಗಲ್ಲ. ಇದೇ ಕ್ಷೇತ್ರದಲ್ಲೇ ಇರುತ್ತೇನೆ ಎಂದು ಕೇಂದ್ರ ಮಾಜಿ ಸಚಿವ ವೀರಪ್ಪಮೊಯ್ಲಿ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಕಾಂಗ್ರೆಸ್ ಜಿಲ್ಲಾ ಸಮಿತಿ ಸಭೆಯಲ್ಲಿ ಇತ್ತೀಚಿಗೆ ಮಾತನಾಡಿದ ಅವರು, ಚಿಕ್ಕಮಗಳೂರು, ಮಂಗಳೂರಿನಿಂದ ಕೆಲವರು ನನ್ನನ್ನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ಕೊಟ್ಟಿದ್ದಾರೆ. ಆದರೆ ನಾನು ಚಿಕ್ಕಬಳ್ಳಾಪುರದಿಂದ ಬೇರೆ ಕಡೆ ಹೋಗಲ್ಲ. ನಾನು ಕಳೆದ ಬಾರಿ ಸೋತರೂ ಕ್ಷೇತ್ರದಾದ್ಯಂತ ಓಡಾಡಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ ಎಂದರು. ಜನವರಿ ಕೊನೆ ವಾರದಲ್ಲಿ ಬೃಹತ್ ಜಿಲ್ಲಾ ಸಮ್ಮೇಳನ ಮಾಡಬೇಕಿದೆ. ಅದಕ್ಕೂ ಮೊದಲು ಎಲ್ಲ ವಿಭಾಗಗಳ ಸಭೆಗಳನ್ನು ನಡೆಸಿ ಸಂಘಟಿಸಬೇಕಿದೆ ಎಂದು ಹೇಳಿದರು.

ಕಿಸಾನ್ ಕಾಂಗ್ರೆಸ್ ಘಟಕಕ್ಕೆ 50 ಸಾವಿರ:
ಹಿರಿಯ ಮುಖಂಡ ಯಲುವಳ್ಳಿ ರಮೇಶ್ ಮಾತನಾಡಿ, ಕಿಸಾನ್ ಕಾಂಗ್ರೆಸ್ ಘಟಕದ ನೆರವಿಗಾಗಿ ನಾನು 50 ಸಾವಿರ ರೂ. ಕೊಡುತ್ತೇನೆ ಎಂದು ತಿಳಿಸಿದರು. ಮಾಜಿ ಶಾಸಕ ಎಂ. ಶಿವಾನಂದ್ ಮಾತನಾಡಿ, ಇತ್ತೀಚೆಗೆ ಲೋಕಸಭೆ ಉಸ್ತುವಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಪ್ಪಮೊಯ್ಲಿ ಅವರಿಗೆ ಶೇ.95ಕ್ಕಿಂತ ಹೆಚ್ಚು ಮಂದಿ ಟಿಕೆಟ್ ನೀಡುವಂತೆ ಒತ್ತಾ ಯಿಸಿದ್ದಾರೆ. ಹೀಗಾಗಿ ಅವರಿಗೇ 100ಕ್ಕೆ 1000 ಪಟ್ಟು ಟಿಕೆಟ್ ಸಿಗಲಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣಪ್ಪ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪ್ರಶಾಂತ್ ಸಾಗರ್ ಮಾತನಾಡಿ ದರು. ಮಾಜಿ ಶಾಸಕ ಎಸ್. ಎಂ.ಮುನಿಯಪ್ಪ, ಮುಖಂಡರಾದ ಮಮತಾ ಮೂರ್ತಿ, ಸುರೇಶ್, ಜಗದೀಶ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಮತ್ತೊಂದೆಡೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲೆಡೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮದುವೆ, ಪಕ್ಷದ ಕಾರ್ಯಕ್ರಮ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜಾತಿ ಬಲ ಹಾಗೂ ಪಕ್ಷದ ಮುಖಂಡರ ಬೆಂಬಲ ಪಡೆಯಲು ಯುವ ನಾಯಕರ ಪಡೆಯನ್ನು ಕಟ್ಟಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯ ಹೇಳಿದರು.
ಇತ್ತೀಚಿಗೆ ಚಿಕ್ಕಬಳ್ಳಾಪುರ ನಗರದ ನದಿ ದಡದ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಬದ್ದತೆಯಿಂದ ತೊಡಗಿಸಿಕೊಂಡಿದ್ದೇನೆ. ಈಗಾಗಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧ ತಾಲೂಕಿಗಳಲ್ಲಿ ಪ್ರವಾಸವನ್ನು ಹಮ್ಮಿಕೊಂಡು ಕಾರ್ಯಕರ್ತರ ಹಾಗೂ ಮುಖಂಡರುಗಳೊಂದಿಗೆ ಚರ್ಚಿಸಿದ್ದೇನೆ. ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ವಿವಿಧ ತಾಲೂಕಿನ ಕಾಂಗ್ರೆಸ್ ಎಸಕರು ಸಹ ಸಹಮತ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಪಕ್ಷದ ವರಿಷ್ಠರ ಗಮನಕ್ಕೆ ಈಗಾಗಲೇ ನಾನು ಆಕಾಂಕ್ಷಿಯಾಗಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಯುವಕರಿಗೆ ಅವಕಾಶ ನೀಡುತ್ತಾರೆಂಬ ಆಶಾಭಾವನೆ ಇದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿದ್ದು, ಪಕ್ಷ ಗೆಲುವಿಗೆ ಶ್ರಮಿಸುತ್ತೇನೆ. ಪಕ್ಷದ ಸಿದ್ಧಾಂತ ಹಾಗೂ ನಿರ್ಧಾರಕ್ಕೆ ತಲೆಬಾಗುತ್ತೇನೆ ಎಂದರು.
ಈ ಬಗ್ಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯ ಮಾತನಾಡಿ, 'ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಕಾಂಗ್ರೆಸ್ ಸರಕಾರ ಸಫಲವಾಗಿದೆ. ವಿರೋಧ ಪಕ್ಷಗಳವರು ವಿನಾಕಾರಣ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಸರಕಾರ ಆಡಳಿತ ನಡೆಸಲಿದೆ' ಎಂದರು.












Click it and Unblock the Notifications