ಚಿಕ್ಕಬಳ್ಳಾಪುರ ಗ್ರಾಪಂ ಉಪಚುನಾವಣೆ ವೇಳಾಪಟ್ಟಿ ಪ್ರಕಟ- ನ.23ರಂದು ಮತದಾನ, 26ಕ್ಕೆ ಫಲಿತಾಂಶ
ಚಿಕ್ಕಬಳ್ಳಾಪುರ ಅಕ್ಟೋಬರ್ 20: ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕಾರಣಗಳಿಂದಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದ್ದು, ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿ ಪ್ರಕಟಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯ 10 ಗ್ರಾಪಂ ಸದಸ್ಯರ ಸ್ಥಾನಗಳಿಗೆ ನ.23ರಂದು ಮತದಾನ ನಡೆಯಲಿದ್ದು, ನ.26ರಂದು ಮತ ಎಣಿಕೆ ಮಾಡಿ, ಫಲಿತಾಂಶ ಘೋಷಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ರಾಜೀನಾಮೆ, ಸದಸ್ಯರ ನಿಧನ ಸೇರಿ ನಾನಾ ಕಾರಣಗಳಿಂದ ವಿವಿಧ ಗ್ರಾಪಂಗಳಲ್ಲಿ ಹಲವು ತಿಂಗಳಿಂದಲೂ ಸದಸ್ಯತ್ವ ಸ್ಥಾನ ಖಾಲಿ ಇದ್ದು, ಈಗ ಅಯ್ಕೆಗೆ ಚುನಾವಣೆ ಘೋಷಿಸಲಾಗಿದೆ. ಇದರಿಂದ ಆಯಾ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮುಖಂಡರು ರಾಜಕೀಯ ಪಕ್ಷಗಳ ಪರೋಕ್ಷ ಬೆಂಬಲದೊಂದಿಗೆ ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಲಿದ್ದಾರೆ.
ಚುನಾವಣಾ ಪ್ರಕ್ರಿಯೆ:-
ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಆಯೋಗವು ಘೋಷಿಸಿದ್ದು ನ.6ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ನ.12 ಉಮೇದುವಾರಿಕೆ ಸಲ್ಲಿಕೆಗೆ ಕೊನೇ ದಿನ, ಪರಿಶೀಲನೆಗೆ ನ.13, ನಾಮಪತ್ರ ಹಿಂಪಡೆಯಲು ನ.15 ಅವಕಾಶವಿದ್ದು, ನ.23ರಂದು ಮತದಾನ (ಬೆಳಗ್ಗೆ 7ರಿಂದ ಸಂಜೆ 5 ರವರೆಗೆ) ನಡೆಯಲಿದೆ. ನ.26ರಂದು ಮತ ಎಣಿಕೆ (ಬೆಳಗ್ಗೆ 8ರಿಂದ) ನಡೆದು ಫಲಿತಾಂಶ ಘೋಷಣೆಯಾಗಲಿದೆ.
ಚುನಾವಣೆ ಘೋಷಣೆಯಾಗಿರುವ ಗ್ರಾಮ ಪಂಚಾಯಿತಿಗಳು:-
ಚಿಕ್ಕಬಳ್ಳಾಪುರ ತಾಲೂಕಿನ ಆರೂರು, ದೊಡ್ಡಮರಳಿ ಗ್ರಾಮ ಪಂಚಾಯತಿ, ಮಂಚೇನಹಳ್ಳಿ ತಾಲೂಕಿನ ಗೌಡಗೆರೆ ಪಂಚಾಯತಿ, ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯ ಗ್ರಾಮ ಪಂಚಾಯ್ತಿ, ಶಿಡ್ಲಘಟ್ಟ ತಾಲೂಕಿನ ವೈ ಹುಣಸೇನಹಳ್ಳಿ, ಅನೂರು, ಬಟ್ಲಹಳ್ಳಿ ಗ್ರಾಮ ಪಂಚಾಯತಿ, ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ, ಹಿರೇಕಟ್ಟಿಗೆನಹಳ್ಳಿ, ಕೋಟಗಲ್, ಪೆರಮಾಚನಹಳ್ಳಿಗ್ರಾಮ ಪಂಚಾಯತಿ ಗಳಿಗೆ ಚುನಾವಣೆ ಘೋಷಣೆಯಾಗಿದೆ.
ವಿಧಾನ ಪರಿಷತ್‌ನ ಒಂದು ಸ್ಥಾನ, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಕರ್ನಾಟಕದಲ್ಲಿ ಮತ್ತೊಂದು ಉಪ ಚುನಾವಣೆ ಘೋಷಣೆಯಾಗಿದೆ. ರಾಜ್ಯ ಚುನಾವಣಾ ಆಯೋಗ 195 ತಾಲೂಕುಗಳ, 531 ಗ್ರಾಮ ಪಂಚಾಯಿತಿಗಳ 641 ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದೆ. ನವೆಂಬರ್ 23ರಂದು ಮತದಾನ ನಡೆಯಲಿದ್ದು, ನವೆಂಬರ್ 26ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯ ಚುನಾವಣಾ ಆಯೋಗದ ಆದೇಶ ದಿನಾಂಕ 19.03.2015ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ NOTA ಅವಕಾಶ ಇರುವುದಿಲ್ಲ.
ಈ ಕುರಿತು ಪ್ರಕಾಶ್. ಎಸ್. ಮರಬಳ್ಳಿ, ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಎ ಅನ್ವಯ ಮತ್ತು 308ಎಬಿ ರನ್ವಯ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ ಎಂದು ತಿಳಿಸಿದ್ದಾರೆ.












Click it and Unblock the Notifications