ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಭರ್ಜರಿ ಪ್ರಚಾರ: ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ಚಿಕ್ಕಬಳ್ಳಾಪುರ, ಮೇ 06: ಕಾಂಗ್ರೆಸ್ ನವರು ಯಾರನ್ನೂ ನಿಷೇಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ರಾಜ್ಯದ ಜನತೆಯೆ ಕಾಂಗ್ರೆಸ್ ಅನ್ನು ಬಹಿಷ್ಕಾರ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲೇವಡಿ ಮಾಡಿದರು.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಸುಧಾಕರ್ ಪ್ರಚಾರ ನಡೆಸಿದ್ದು, ಈ ವೇಳೆ ಅವರ ಅಭಿಮಾನಿಯೊಬ್ಬ ರಕ್ತದಲ್ಲಿ ಪತ್ರ ಬರೆದು ತಂದು ಸಚಿವರಿಗೆ ನೀಡಿದರು. ಇದನ್ನು ಕಂಡು ವಿಚಿಲಿತರಾದ ಸಚಿವರು, ಯುವಕರ ಅಭ್ಯುದಯಕ್ಕಾಗಿ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿಸುವುದಾಗಿ ಹೇಳುವ ಜೊತೆಗೆ ಇಂತಹ ಸಾಹಸಕ್ಕೆ ಯಾರೂ ಮುಂದಾಗದಂತೆ ಮನವಿ ಮಾಡಿದರು.

ಬಳಿಕ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶ ದ್ರೋಹಿ ಸಂಘಟನೆಗಳೊಂದಿಗೆ ದೇಶ ಭಕ್ತ ಸಂಘಟನೆ ಭಜರಂಗದಳ ಸೇರಿಸುವ ಮೂಲಕ ಅಪಚಾರ ಎಸಗಿರುವ ಕಾಂಗ್ರೆಸ್ ನ್ನು ರಾಜ್ಯದ ಜನರೇ ಈ ಚುನಾವಣೆಯಲ್ಲಿ ಬಹಿಷ್ಕಾರ ಮಾಡಲಿದ್ದಾರೆ ಎಂದು ಹೇಳಿದರು.
ಭಾರತ ಹಿಂದೂ ದೇಶ, ಇಂತಹ ದೇಶದಲ್ಲಿ ಹಿಂದು ಸಂಘಟನೆಯನ್ನು ನಿಷೇದಿಸಿರುವ ಕಾಂಗ್ರೆಸ್ ಅನ್ನು ನಿಷೇಧ ಮಾಡಲು ಪಣ ತೊಡಿ, ಪ್ರತಿ ಗ್ರಾಮದಲ್ಲಿಯೂ ಆಂಜನೇಯನ ದೇವಾಲಯವಿದೆ. ರಾಮನ ಬಂಟನ ಸಂಘಟನೆಯನ್ನು ನಿಷೇಧ ಮಾಡಲು ನಾಚಿಕೆಯಾಗಲ್ಲವೇ, ಹನುಮ ಜನಿಸಿದ ನಾಡು ಕರ್ನಾಟಕ, ಅಂಜನಾದ್ರಿ ಬೆಟ್ಟದಲ್ಲಿ ಜನಿಸಿದವರು ಆಂಜನೇಯ, ಆ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಭೂಮಿ ಪೂಜೆ ಮಾಡಿದೆ ಎಂದರು.

ದೇಶ ದ್ರೋಹಿ ಸಂಘಟನೆ ಪಿಎಫ್‌ಐ, ಹಿಂಸಾತ್ಮಕ ಸಂಘಟನೆಯನ್ನು ಬಿಜೆಪಿ ನಿಷೇಸಿದರೆ, ನಮ್ಮ ಪರಂಪರೆ ಉಳಿಸುವ ಕೆಲಸವನ್ನು ಮಾಡುತ್ತಿರುವ ಸಂಘಟನೆ ನಿಷೇಧಿಸಿರುವ ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಭಜರಂಗದಳ ದೇಶ ರಕ್ಷಣೆ ಮಾಡುವ ಸಂಘಟನೆ, ಇದನ್ನು ಕಾಂಗ್ರೆಸ್ ನಿಷೇಧಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದೆ. ಅದೇ ಕಾಂಗ್ರೆಸ್ ಈ ಹಿಂದೆ ನ್ಯಾಯಾಲಯದಲ್ಲಿ ರಾಮ ಮಂದಿರ ನಿರ್ಮಾಣ ಬೇಡ ಎಂದು ಹೇಳಿತ್ತು, ರಾಮ ಇದ್ದಾನ ಇಲ್ಲವಾ ಗೊತ್ತಿಲ್ಲ ಎಂದು ಹೇಳಿತ್ತು. ಇಂತಹ ಭಾವನೆ ಇಟ್ಟಿಕೊಂಡಿರುವ ಕಾಂಗ್ರೆಸ್ ಇಂದು ಭಜರಂಗದಳ ನಿಷೇಧಿಸುವುದಾಗಿ ಹೇಳಿದೆ. ಇದು ಅತ್ಯಂತ ಖಂಡನಾರ್ಹ ಎಂದರು.
ಕಳೆದ ಹದಿನೈದು ದಿನದಿಂದ ಬರುತ್ತಿರುವವರು ಅಂಗೈಯಲ್ಲೇ ಸ್ವರ್ಗ ತೋರಿಸುತ್ತಿದ್ದಾರೆ, ಪಾದಯಾತ್ರೆ ಯಾವ ಘನ ಕಾರ್ಯ ಮಾಡಲು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ಕೋವಿಡ್ ವೇಳೆ ಮನೆಯಲ್ಲಿದ್ದು, ಈಗ ಮನೆ ಮನೆಗೆ ಬಂದು ಮತ ಕೇಳುತ್ತಿರುವುದು ಸ್ವಾರ್ಥ ರಾಜಕಾರಣಕ್ಕೆ ಎಂದು ಎದುರಾಳಿಗಳಿಗೆ ತಿರುಗೇಟು ನೀಡಿದರು.
ಶಿಕ್ಷಣದ ಮೂಲಕ ಸೇವೆ ಎನ್ನುತ್ತಿರುವವರು ಮತ್ತೊಬ್ಬರು, ಪಿಯುಸಿ ಮಾಡಿ ಮೇಸ್ಟ್ರಾಗಲು ಸಾಧ್ಯವಿಲ್ಲ, ಬಡವರ ಬಗ್ಗೆ ಕಾಳಜಿ ಇದ್ದಿದ್ದರೆ ಹಳ್ಳಿಯಲ್ಲಿ ಶಾಲೆ ಮಾಡಬೇಕಿತ್ತು. ನಿನ್ನ ಹೊಟ್ಟೆ ಪಾಡಿಗಾಗಿ ಬೆಂಗಳೂರಿನಲ್ಲಿ ಸಂಸ್ಥೆ ಮಾಡಿ, ಬಡವರ ಮಕ್ಕಳಿಂದ ಹಣ ಲಪಟಾಯಿಸುತ್ತಿರುವ ನೀನು ಉದ್ಯಮಿ, ಸೇವಕನಲ್ಲ ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, ತರ್ಕ ಬದ್ಧವಾದ ಯೋಜನೆಗಳನ್ನು ಕಳೆದ ಹತ್ತು ವರ್ಷದಿಂದ ಅನುಷ್ಠಾನ ಮಾಡಲಾಗಿದೆ, ಬಂಡಲ್ ಗ್ಯಾರೆಂಟೆ ನಂಬಬೇಡಿ, ಅದು ಗ್ಯಾರೆಂಟಿ ಅಲ್ಲ, ಗೋರಂಟಿ, ಕಾಂಗ್ರೆಸ್ ಸರ್ಕಾರವೂ ಬರಲ್ಲ, ಬಂದಿರುವ ಕಡೆ ಅವರ ಗ್ಯಾರೆಂಟಿಯೂ ಇಲ್ಲ, ಬಿಜೆಪಿ ಪ್ರಣಾಳಿಕೆಯಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ, ಪ್ರತಿನಿತ್ಯ ಅರ್ಧ ಲೀಟರ್ ಹಾಲು ನೀಡಲಾಗುವುದು, ಮಹಿಳೆಯರಿಗೆ ಮೂರು ಸಿಲಿಂಡರ್ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಕಳೆದ ಹತ್ತು ವರ್ಷದಲ್ಲಿ ಕ್ಷೇತ್ರದಾದ್ಯಂತ ಗುಣಮಟ್ಟದ ರಸ್ತೆಗಳನ್ನು ಮಾಡಲಾಗಿದೆ. ಮನೆಗಳನ್ನು ನಿರ್ಮಿಸಿಕೊಡಲಾಗಿದೆ, ಶುದ್ಧ ನೀರಿನ ಘಟಕಗಳನ್ನು ಮಾಡಲಾಗಿದೆ. ಡಬಲ್ ಎಂಜಿನ್ ಸರ್ಕಾರವನ್ನು ರಾಜ್ಯದ ಜನತೆ ಮತ್ತೆ ಬಯಸುತ್ತಿದ್ದಾರೆ, ಹಾಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಕ್ಷೇತ್ರದ ಜನರು ಮತ್ತೊಂದು ಅವಧಿಗೆ ರಾಜ್ಯದ ಜನರ ಸೇವೆ ಮಾಡಲು ಅವಕಾಶ ನೀಡಬೇಕು, ಹತ್ತು ವರ್ಷಗಳ ರಿಪೋರ್ಟ್- ಕಾರ್ಡು ಹಿಡಿದು ನಿಮ್ಮ ಮುಂದೆ ಬಂದಿದ್ದೇನೆ, ಕಾಂಗ್ರೆಸ್ ನವರಂತೆ ಬೋಗಸ್ ಗ್ಯಾರೆಂಟಿ ಕಾರ್ಡು ಹಿಡಿದು ಬಂದಿಲ್ಲ, ವೈದ್ಯಕೀಯ ಕಾಲೇಜು ತರುವ ಭರವಸೆ ನೀಡಿದ್ದೆ, ಅದರಂತೆ ತರಲಾಗಿದೆ, ಅದೇ ರೀತಿಯಲ್ಲಿ ಎಲ್ಲವನ್ನೂ ಮಾಡುವುದಾಗಿ ಸುಧಾಕರ್ ಭರವಸೆ ನೀಡಿದರು.












Click it and Unblock the Notifications