ಶೀಘ್ರದಲ್ಲೇ ನಿಮ್ಮನ್ನೆಲ್ಲ ಭೇಟಿಯಾಗುತ್ತೇನೆ, ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ: ಶಶಿಕಲಾ
ಚೆನ್ನೈ, ಫೆಬ್ರವರಿ 8: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಾಲ್ಕು ವರ್ಷದ ಬಳಿಕ ಮತ್ತೆ ತಮಿಳುನಾಡಿಗೆ ಮರಳಿರುವುದು ಅಲ್ಲಿನ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಜೈಲು ಶಿಕ್ಷೆ ಅನುಭವಿಸಿದ ಬಳಿಕ ತಮಿಳುನಾಡಿಗೆ ವಾಪಸಾಗಿರುವ ಶಶಿಕಲಾ, ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕಲಾ, 'ನಿಮ್ಮನ್ನು ಶೀಘ್ರವೇ ಭೇಟಿಯಾಗಲಿದ್ದೇನೆ; ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸಲಿದ್ದೇನೆ' ಎಂದು ತಿಳಿಸಿದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ಅವರಿಗೆ ತಮಿಳುನಾಡಿನಲ್ಲಿ ಬೆಂಬಲಿಗರಿಂದ ಭವ್ಯ ಸ್ವಾಗತ ದೊರಕಿತು. ಎಐಎಡಿಎಂಕೆಯಿಂದ ಉಚ್ಚಾಟನೆಯಾಗಿದ್ದರೂ ತಮ್ಮ ಗೆಳತಿಯಾಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಕ್ಷದೊಂದಿಗಿನ ನಂಟನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದರು.

'ಎಐಎಡಿಎಂಕೆ ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಫೀನಿಕ್ಸ್ ರೀತಿ ಎದ್ದುಬಂದಿದೆ. ಎಲ್ಲರೂ ಜತೆಗೂಡಿ ಕೆಲಸ ಮಾಡಿ ನಮ್ಮ ಸಾಮಾನ್ಯ ವೈರಿಯನ್ನು ಬಗ್ಗುಬಡಿಯುವುದನ್ನು ಬಯಸುತ್ತೇನೆ' ಎಂದರು.
'ನಾನು ಎಂದಿಗೂ ದಬ್ಬಾಳಿಕೆಗೆ ಶರಣಾಗುವುದಿಲ್ಲ. ಎಐಎಡಿಎಂಕೆಯ ಬಾವುಟ ಬಳಸಿದ್ದಕ್ಕಾಗಿ ನನ್ನ ವಿರುದ್ಧ ದೂರು ದಾಖಲಿಸಿರುವುದು ಪಕ್ಷದ ನಾಯಕರ ಭಯವನ್ನು ತೋರಿಸುತ್ತದೆ. ಪಕ್ಷದ ಕಾರ್ಯಕರ್ತರಿಗಾಗಿ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ತಮಿಳು ನೀತಿ ಮತ್ತು ನಾನು ತೆಗೆದುಕೊಳ್ಳುವ ತತ್ವಗಳಿಗೆ ಬದ್ಧನಾಗಿರುತ್ತೇನೆ' ಎಂದು ತಿಳಿಸಿದರು.












Click it and Unblock the Notifications