ಅವಿವಾಹಿತ ಮಹಿಳಾ ಟೆಕ್ಕಿ, ತಾಯಿ ಆತ್ಮಹತ್ಯೆ
ಚೆನ್ನೈ, ಅ.11: ಅವಿವಾಹಿತ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಆಕೆಯ ತಾಯಿ ಇಬ್ಬರೂ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಇಲ್ಲಿನ ಪಲ್ಲಿಕರಣೈನಲ್ಲಿ ಗುರುವಾರ ನಡೆದಿದೆ.
ಮೃತಪಟ್ಟವರನ್ನು 29 ವರ್ಷದ ಟೆಕ್ಕಿ ಎನ್ ಪ್ರತಿಭಾ ಮತ್ತು ಆಕೆಯ ತಾಯಿ 58 ವರ್ಷದ ಗಜಲಕ್ಷ್ಮಿ ಎಂದು ಗುರುತಿಸಲಾಗಿದೆ. ಮಗಳಿಗೆ ಎಷ್ಟು ಸಂಬಂಧಗಳನ್ನು ನೋಡಿದರೂ ಯಾವುದೂ ಮದುವೆಯಲ್ಲಿ ಊರ್ಜಿತವಾಗಲಿಲ್ಲ.
ಗಂಡು ಕಡೆಯವರು ಒಂದಲ್ಲ ಒಂದು ಕ್ಷುಲ್ಲಕ ಕಾರಣ ನೀಡಿ ಸಂಬಂಧ ಬೇಡವೆನ್ನುತ್ತಿದ್ದಾರೆ ಎಂದು ಜುಗುಪ್ಸೆಗೊಂಡು ಗಜಲಕ್ಷ್ಮಿ ತಮ್ಮ ಮಗಳ ಜತೆ ಒಟ್ಟಿಗೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ.
ಪ್ರತಿಭಾ, ನಗರದ ಹೊರವಲಯದಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಟೆಕ್ಕಿಯಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದ ಪ್ರತಿಭಾ ತಂದೆ ನಾರಾಯಣ್ (62) ನಾಲ್ಕು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದರು.
ಅದಾದ ನಂತರ ಮತ್ತೊಂದು ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಸಂಸಾರವನ್ನು ಸರಿದೂಗಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಭೋಜನಕ್ಕೆಂದು ನಾರಾಯಣ್ ಮನೆಗೆ ಬಂದಾಗ ಅಮ್ಮ-ಮಗಳು ಸತ್ತಿರುವುದು ಕಂಡುಬಂದಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ. ಮಹಜರು ನಡೆಸಿದ್ದಾರೆ.