ತಮಿಳುನಾಡು ಸಿಎಂ ಟೀಕಿಸಿ ಕಾರ್ಟೂನ್ ಬರೆದಿದ್ದ ಬಾಲಾಗೆ ಜಾಮೀನು
ಚೆನ್ನೈ, ನವೆಂಬರ್ 06: ವ್ಯಂಗ್ಯಚಿತ್ರಕಾರ ಜಿ.ಬಾಲಾ ಅವರಿಗೆ ತಿರುನಲ್ವೇಲಿಯ ಜೆಎಂಸಿ -1 ನ್ಯಾಯಾಲಯವು ಸೋಮವಾರ (ನವೆಂಬರ್ 06) ದಂದು ಜಾಮೀನು ಮಂಜೂರು ಮಾಡಿದೆ.
ಸರ್ಕಾರದ ಕಾರ್ಯವೈಖರಿ ಟೀಕಿಸಿ ವ್ಯಂಗ್ಯಚಿತ್ರ ಬರೆದು. ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದ ವ್ಯಂಗ್ಯಚಿತ್ರಕಾರ ಜಿ.ಬಾಲಾರನ್ನು ಭಾನುವಾರ ಬಂಧಿಸಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬವೊಂದು ಅಕ್ಟೋಬರ್ 23ರಂದು ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಕುಟುಂಬವನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸರ್ಕಾರ ಕಾರ್ಯವೈಖರಿ ಟೀಕಿಸಿದ್ದ ಜಿ.ಬಾಲಾ, ವ್ಯಂಗ್ಯಚಿತ್ರವನ್ನು ಬಿಡಿಸಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು.
ಬಾಲಾ ಅವರು ವ್ಯಂಗ್ಯಚಿತ್ರದಲ್ಲಿ, ಸಿಎಂ ಪಳನಿಸ್ವಾಮಿ, ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಮತ್ತು ಜಿಲ್ಲಾ ಪೊಲೀಸ್ ಆಯುಕ್ತ ಕಪಿಲ್ ಕುಮಾರ್ ರನ್ನು ಬೆತ್ತಲೆಗೊಳಿಸಿ, ನೋಟುಗಳಲ್ಲಿ ಅವರ ಮಾನ ಮುಚುವಂತೆ ಚಿತ್ರಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಾವಿರಾರು ಬಾರಿ ಶೇರ್ ಆಗಿತ್ತು. ರಾಜಕೀಯ ವಿಡಂಬನೆಯ ಕಾರ್ಟೂನ್ಗಳನ್ನು ಬಾಲಾ ಅವರು ತಮ್ಮ ಫೇಸ್ ಬುಕ್ ವಾಲ್ನಲ್ಲಿ ಪ್ರಕಟಿಸುವುದು ಸಾಮಾನ್ಯ ಸಂಗತಿ.
ಆದರೆ, ಸಿಎಂ ಬಗ್ಗೆ ಬರೆದ ಈ ಕಾರ್ಟೂನ್ ಜಿಲ್ಲಾಧಿಕಾರಿ ಹಾಗೂ ಮುಖ್ಯಕಾರ್ಯದರ್ಶಿ ಗಮನಕ್ಕೆ ಬಂದಿದ್ದಲ್ಲದೆ, ಡಿಜಿಪಿ ಆದೇಶದ ಮೇರೆಗೆ ಬಾಲಾ ಅವರನ್ನು ಪೊಲೀಸರು ಬಂಧಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರಕ್ಕೆ ಅಡ್ಡಿ ಪಡಿಸಿದ ಸರ್ಕಾರದ ಈ ನಡೆಯನ್ನು ಖಂಡಿಸಲಾಗಿದೆ.












Click it and Unblock the Notifications