ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ರಿಗೆ ಕೊವಿಡ್-19 ಸೋಂಕು
ಚೆನ್ನೈ, ಆಗಸ್ಟ್.02: ತಮಿಳುನಾಡಿನ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಅವರ ಆರೋಗ್ಯವು ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಚೆನ್ನೈನ ಅಲ್ವಾರ್ ಪೇಟ್ ನಲ್ಲಿ ಇರುವ ಕಾವೇರಿ ಆಸ್ಪತ್ರೆಯಲ್ಲಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್-19 ಸೋಂಕು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಹೋಮ್ ಐಸೋಲೇಷನ್ ನಲ್ಲಿ ಇರಿಸಿ ಚಿಕಿತ್ಸೆ ನೀಡುವ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ. ಕಾವೇರಿ ಆಸ್ಪತ್ರೆಯ ವೈದ್ಯರ ತಂಡವೇ ಬನ್ವಾರಿ ಲಾಲ್ ಪುರೋಹಿತ್ ಅವರ ಆರೋಗ್ಯದ ತಪಾಸಣೆ ನಡೆಸಲಿದೆ ಎಂದು ತಿಳಿದು ಬಂದಿದೆ.

ರಾಜಭವನದಲ್ಲೇ ಕ್ವಾರೆಂಟೈನ್ ಆಗಿದ್ದ ಪುರೋಹಿತ್:
ಜುಲೈ 23ರಂದು ತಮಿಳುನಾಡು ರಾಜ್ಯಪಾಲರ ಕಚೇರಿ 23 ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು. ಕಳೆದ ವಾರ ತಮಿಳುನಾಡು ರಾಜಭವನದ 84 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಜುಲೈ 29ರಿಂದ ಅವರು ರಾಜಭವನದಲ್ಲಿ ಕ್ವಾರಂಟೈನ್ ನಲ್ಲಿದ್ದರು. ಆದರೆ ಜುಲೈ 29ರಂದು ಮತ್ತೆ ಮೂವರು ಸಿಬ್ಬಂದಿಗೆ ಸೋಂಕು ತಗುಲಿದ್ದು ಖಚಿತವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ರಾಜಭವನದ ಉಳಿದ 38 ಸಿಬ್ಭಂದಿಗಳಿಗೂ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಿಸಲಾಗಿತ್ತು. ಇವರಲ್ಲಿ 35 ಜನರ ವರದಿ ನೆಗೆಟಿವ್ ಬಂದಿತ್ತು. ಸೋಂಕು ತಗುಲಿದ್ದ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.












Click it and Unblock the Notifications