ಕರುಣಾನಿಧಿ ಆರೋಗ್ಯ ಮತ್ತಷ್ಟು ಚಿಂತಾಜನಕ
ಚೆನ್ನೈ, ಆಗಸ್ಟ್ 7: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಇನ್ನಷ್ಟು ಚಿಂತಾಜನಕವಾಗಿದೆ.
ಕಳೆದ ಕೆಲವು ಗಂಟೆಗಳಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಕಾವೇರಿ ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ.
ಕರುಣಾನಿಧಿ ಅವರ ಪ್ರಮುಖ ಅಂಗಗಳ ಕಾರ್ಯಾಚರಣೆ ತೀವ್ರವಾಗಿ ಹದಗೆಟ್ಟಿದೆ ಎಂದು ಹೇಳಿಕೆ ತಿಳಿಸಿದೆ.

ಕಾವೇರಿ ಆಸ್ಪತ್ರೆ ಹೊರಭಾಗದಲ್ಲಿ ಕರುಣಾನಿಧಿ ಅವರ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿದೆ.
'ತಲೈವಾ ಎದ್ದು ಬಾ' ಎಂಬ ಘೋಷಣೆಗಳನ್ನು ಜನರು ಕೂಗುತ್ತಿದ್ದಾರೆ. ಕರುಣಾನಿಧಿ ಅವರ ಭಾವಚಿತ್ರಗಳನ್ನು ಹಿಡಿದಿರುವ ಜನರನ್ನು ನಿಯಂತ್ರಿಸಲು ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ಆಸ್ಪತ್ರೆ, ಕರುಣಾನಿಧಿ ನಿವಾಸ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಡಿಎಂಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ತಡೆಯಲು ಪೊಲೀಸರು ಈಗಲೇ ಹರಸಾಹಸ ಪಡುತ್ತಿದ್ದಾರೆ.
ಚೆನ್ನೈ ನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಎಲ್ಲೆಡೆ ಕರುಣಾನಿಧಿ ಅವರ ಫೋಟೊಗಳನ್ನು ಹಿಡಿದ ಜನರು ಅವರು ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications