ಕಾವೇರಿ ಮಂಡಳಿ ರಚನೆಗೆ ಕೇಂದ್ರಕ್ಕೆ ಒತ್ತಾಯ, ನಿರ್ಣಯ ಕೈಗೊಂಡ ತಮಿಳುನಾಡು
ಚೆನ್ನೈ, ಮಾರ್ಚ್ 15: ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ಮೇಲುಸ್ತುವಾರಿ ಸಮಿತಿ ರಚನೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇಂದು ನಿರ್ಣಯ ಕೈಗೊಳ್ಳಲಾಯಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮೊನ್ನೆ ನೀಡಿರುವ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಹೇಳಿದೆ ಎಂದು ತಮಿಳುನಾಡು ವಾದಿಸುತ್ತಿದೆ. ಆದರೆ ಹಾಗೇನೂ ಸ್ಪಷ್ಟವಾಗಿ ಹೇಳಿಲ್ಲ ಎಂಬುವುದು ಕೇಂದ್ರದ ವಾದ. ಈ ಮೂಲಕ ಮಂಡಳಿ ಮತ್ತು ಸಮಿತಿ ರಚನೆಗೆ ಕೇಂದ್ರ ಹಿಂದೇಟು ಹಾಕುತ್ತಿದೆ.
ಇದೀಗ ಇಂದು ನಡೆದ ಕಾವೇರಿ ವಿಶೇಷ ಅಧಿವೇಶನದಲ್ಲಿ ತಮಿಳುನಾಡು ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಂಡಿದೆ. "ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್, ಕಾವೇರಿ ನೀರು ಪಡೆಯಲು ಎಲ್ಲಾ ಪಕ್ಷಗಳ ನಾಯಕರು ಒಂದಾಗುವ ಕಾಲ ಬಂದಿದೆ. ಕೇಂದ್ರ ಸರಕಾರ ತನಗೆ ಬೇಕಾದಂತೆ ಸುಪ್ರಿಂ ಕೋರ್ಟ್ ಆದೇಶವನ್ನು ಬಳಸಿಕೊಳ್ಳುತ್ತಿದೆ ," ಎಂದು ಕಿಡಿಕಾರಿದರು.

ಅಡಕತ್ತರಿಯಲ್ಲಿ ಕೇಂದ್ರ
ಒಂದೆಡೆ ತಮಿಳುನಾಡು ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ಮೇಲುಸ್ತುವಾರಿ ಸಮಿತಿ ರಚನೆಗೆ ಪಟ್ಟು ಹಿಡಿದಿದ್ದರೆ ಕರ್ನಾಟಕ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಸರ್ವಪಕ್ಷ ಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದರು.
ಹೀಗಿರುವಾಗ ಒಂದೊಮ್ಮೆ ಕೇಂದ್ರ ಮಂಡಳಿ ಮತ್ತು ಸಮಿತಿ ರಚಿಸಿದರೆ ಕರ್ನಾಟಕದ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಸದ್ಯದಲ್ಲೇ ಚುನಾವಣೆ ಬರಲಿರುವುದರಿಂದ ಮಂಡಳಿ ಮತ್ತು ಸಮಿತಿ ರಚಿಸಿ ಕನ್ನಡಿಗರ ವಿರೋಧ ಕಟ್ಟಿಕೊಳ್ಳಲು ಕೇಂದ್ರ ಸರಕಾರ ಸಿದ್ಧವಿಲ್ಲ.
ಈ ಎಲ್ಲಾ ಕಾರಣಗಳಿಂದ ಕಾವೇರಿ ಕೇಂದ್ರ ಸರಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.












Click it and Unblock the Notifications