'ಹೊಸ ಬಗೆಯ ಪ್ರತಿಭಟನೆ' ಮಾಡುವ ಧಮ್ಕಿ ಹಾಕಿದ ಶಶಿಕಲಾ!

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 11 : ಒಂದೆಡೆ ರಾಜ್ಯಪಾಲ ವಿದ್ಯಾಸಾಗರ್ ಅವರ ಮುಂದೂಡುವ ತಂತ್ರಗಾರಿಕೆ, ಮತ್ತೊಂದೆಡೆ ಕೈಕೊಟ್ಟು ಪನ್ನೀರ್ ಸೆಲ್ವಂ ಬಳಿ ಓಡಿಹೋಗುತ್ತಿರುವ ಶಾಸಕರಿಂದ ಕಂಗೆಟ್ಟಿರುವ ಶಶಿಕಲಾ ನಟರಾಜನ್ ಅವರು 'ಹೊಸ ಬಗೆಯ ಪ್ರತಿಭಟನೆ' ನಡೆಸುವ ಬೆದರಿಕೆ ಒಡ್ಡಿದ್ದಾರೆ.

ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರ ಸಮಾಧಿಯ ಮುಂದೆ ನಲವತ್ತು ನಿಮಿಷ ಮೌನವಾಗಿ ಕಳೆಯುವ ಮುನ್ನ ಇಂಥದೊಂದು ವಿದ್ಯಮಾನ ನಡೆಯುತ್ತದೆಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ಜಯಲಲಿತಾ ಅವರೊಂದಿಗೆ ನಡೆಸಿದ 'ಆತ್ಮ' ಸಂಭಾಷಣೆಯಿಂದ ಎಚ್ಚೆತ್ತುಕೊಂಡಿರುವ ಸೆಲ್ವಂ, ಶಶಿಕಲಾ ಕನಸಿನ ಹಾದಿಗೆ ಮುಳ್ಳಾಗಿ ಕಾಡುತ್ತಿದ್ದಾರೆ.

ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡದೇಹೋದರೆ ಏನು ಮಾಡಬೇಕೋ ಅದನ್ನು ಮಾಡೇಮಾಡುತ್ತೇವೆ ಎಂದು ಪರೋಕ್ಷವಾಗಿ ರಾಜ್ಯಪಾಲರಿಗೆ ಧಮ್ಮಿ ಹಾಕಿದ್ದು, ರಾಜಭವನದ ಎದಿರು ಪ್ರತಿಭಟನೆ ನಡೆಸುವುದಾಗಿ ಶಶಿಕಲಾ ವಿದ್ಯಾಸಾಗರ ರಾವ್ ಅವರಿಗೆ ಸವಾಲು ಹಾಕಿದ್ದಾರೆ. [ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]

New and different kind of protest : Sasikala threatens

ಆದರೆ, ಬೇರೆಯದೇ ಲೆಕ್ಕಾಚಾರದಲ್ಲಿ ಮುಳುಗಿರುವ ರಾಜ್ಯಪಾಲರಾದ ವಿದ್ಯಾಸಾಗರ್ ಅವರ ಕಾದು ನೋಡುವ ತಂತ್ರ ಶಶಿಕಲಾರನ್ನು ಕಂಗೆಡಿಸಿಬಿಟ್ಟಿದೆ. ಹಲವಾರು ಹಿರಿಯ ಶಾಸಕರು, ಸಂಸದರು ಶಶಿಕಲಾರನ್ನು ಗೋಲ್ಡನ್ ಬೇ ರೆಸಾರ್ಟಿನಲ್ಲಿಯೇ ಬಿಟ್ಟು ಸೆಲ್ವಂ ಪಕ್ಷ ಸೇರಿಕೊಂಡಿದ್ದು ನುಂಗಲಾಗದ ತುತ್ತಾಗಿದೆ.

ಇನ್ನೊಂದು ಮೂಲದ ಪ್ರಕಾರ, ಕೇಳಿಬರುತ್ತಿರುವ ಸುದ್ದಿಯೇನೆಂದರೆ, ಕೈಹಿಡಿಯಬೇಕಾಗಿದ್ದ ಕೆಲ ಹಿರಿಯ ಶಾಸಕರು, ಸಂಸದರು ನಿಷ್ಠೆ ಬದಲಿಸಿದ್ದರಿಂದ ಮುಖ್ಯಮಂತ್ರಿಯಾಗುವ ಆಶಯವನ್ನೇ ಶಶಿಕಲಾ ಅವರು ಕೈಬಿಟ್ಟಿದ್ದಾರೆ ಎಂಬುದು. ಇದು ನಿಜವೇ ಆಗಿದ್ದಲ್ಲಿ, ಪನ್ನೀರ್ ಸೆಲ್ವಂ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುವುದು ಖಂಡಿತ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಹೊರಬೀಳಲಿರುವುದು ಶಶಿಕಲಾಗೆ ಬಿಡಿಸಲಾಗದ ಸಂಕೋಲೆಯಾಗಿ ಪರಿಣಮಿಸಿದೆ. ಮಂಗಳವಾರದ ಹೊತ್ತಿಗೆ ತೀರ್ಪು ಹೊರಬಿದ್ದು ಆರೋಪ ಸಾಬೀತಾದರೆ ಪೋಯೆಸ್ ಗಾರ್ಡನ್ ತೊರೆದು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲು ಸೇರುವುದು ಗ್ಯಾರಂಟಿ. [ಅಮ್ಮಾ ಜೈಲಿಗೆ ಕಳುಹಿಸಿದ ಕುಡ್ಲದ ನ್ಯಾ.ಕುನ್ಹಾ]

ಒಂದು ವೇಳೆ ಖುಲಾಸೆಯಾದರೂ ಪನ್ನೀರ್ ಸೆಲ್ವಂ ಅವರಿಂದ ಪ್ರತಿರೋಧ ಎದುರಿಸುವುದೂ ತಪ್ಪಿದ್ದಲ್ಲ. ಜಯಲಲಿತಾ ಸಾವಿನ ನಂತರ ತಾವೇ ಪ್ರಬಲ ನಾಯಕಿ ಎಂದು ಬಿಂಬಿಸಿಕೊಳ್ಳುತ್ತಿರುವ ಶಶಿಕಲಾಗೆ ತಮಿಳು ಚಿತ್ರರಂಗದಿಂದಲೂ ಅಂತಹ ಬೆಂಬಲ ವ್ಯಕ್ತವಾಗಿಲ್ಲ. ರಾಜಕಾರಣಿ, ಚಿತ್ರರಂಗದ ಪ್ರತಿನಿಧಿ ಶರತ್ ಕುಮಾರ್ ಅವರು ಕೂಡ ಪನ್ನೀರ್ ಅವರಿಗೇ ಬೆಂಬಲ ಸೂಚಿಸಿದ್ದಾರೆ.

ಇದೆಲ್ಲದರ ತೂಕ ಒಂದಾದರೆ, ರಜನಿಕಾಂತ್ ಅವರು ರಾಜಕೀಯಕ್ಕೆ ಧುಮುಕಲಿರುವುದರ ತೂಕವೇ ಮತ್ತೊಂದು. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿದ್ದರೂ ರಜನಿ ಬಿಜೆಪಿ ಸೇರಲಿರುವ ಅಥವಾ ಹೊಸ ಪಕ್ಷ ಸ್ಥಾಪಿಸಲಿರುವ ಗಾಳಿಸುದ್ದಿಗೆ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ತಾಕತ್ತಿದೆ. [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿಕಾಂತ್?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sasikala Natarajan has threatened to launch new and different kind of protest on Sunday as Tamil Nadu governor Vidyasagar Rao is delaying to invite Sasikala to form government. In view of this tight security is arranged around Raj Bhavan.
Please Wait while comments are loading...