ಮೋದಿ ಗೋವು ರಕ್ಷಿಸುತ್ತಾರಾ, ದೇಶ ರಕ್ಷಿಸುತ್ತಾರಾ? ಎಐಎಡಿಎಂಕೆ ಪ್ರಶ್ನೆ
ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾನೂನಿನ ಬಗ್ಗೆ ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಮಂತ್ರಿ ಮಂಡಲ ಮೌನವಾಗಿದ್ದರೂ, ಕಾನೂನನ್ನು ತನ್ನ ಮುಖವಾಣಿಯಲ್ಲಿ ಟೀಕಿಸಿರುವ ಎಐಎಡಿಎಂಕೆ.
ಚೆನ್ನೈ, ಜೂನ್ 1: ಪ್ರಧಾನಿ ಮೋದಿಯವರು ದೇಶವನ್ನು ರಕ್ಷಿಸಲು ನಿಂತಿದ್ದಾರಾ ಅಥವಾ ಗೋವುಗಳನ್ನು ರಕ್ಷಿಸಲು ನಿಂತಿದ್ದಾರಾ ? ಇಂಥದ್ದೊಂದು ಪ್ರಶ್ನೆಯನ್ನು ಎಐಎಡಿಎಂಕೆಯ ಮುಖವಾಣಿಯಾದ ಡಾ. ನಮಧು ಎಂಜಿಆರ್ ನಲ್ಲಿ ಪ್ರಶ್ನಿಸಲಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ್ದ ಗೋ ಹತ್ಯೆ ನಿಷೇಧದ ಕಾನೂನಿಗೆ ಸಂಬಂಧಿಸಿದಂತೆ ಈ ವಾರ ಬಿಡುಗಡೆಗೊಂಡಿರುವ ಮುಖವಾಣಿಯ ಸಂಚಿಕೆಯಲ್ಲಿ ಮೋದಿ ಸರ್ಕಾರವನ್ನು ಈ ರೀತಿಯಾಗಿ ಛೇಡಿಸಿದೆ.

ಆದರೆ, ಕೇಂದ್ರ ಸರ್ಕಾರದ ಕಾನೂನು ಜಾರಿಗೊಂಡ ದಿನದಿಂದಲೂ ಬಿಜೆಪಿಯ ವಿರೋಧ ಪಕ್ಷಗಳು ಎಲ್ಲಿಲ್ಲಿ ಅಧಿಕಾರದಲ್ಲಿವೆಯೋ ಅಲ್ಲೆಲ್ಲಾ ಗೋ ಹತ್ಯೆ ನಿಷೇಧ ಕಾನೂನಿನ ವಿರುದ್ಧ ಸಾಕಷ್ಟು ಪ್ರತಿಭಟನೆಗಳಾಗಿವೆ. ಆಯಾ ರಾಜ್ಯ ಸರ್ಕಾರಗಳು ನೇರವಾಗಿ ವಾಗ್ದಾಳಿ ನಡೆಸಿವೆ.
ಇಷ್ಟೆಲ್ಲಾ ಆಗಿದ್ದರೂ, ತಮಿಳುನಾಡಿನ ಮುಖ್ಯಮಂತ್ರಿ ಪಳನಿ ಸ್ವಾಮಿಯಾಗಲೀ, ಅವರ ಮಂತ್ರಿ ಮಂಡಲದ ಯಾವುದೇ ಸಚಿವರಾಗಲೀ ಒಂದೇ ಒಂದು ನಕಾರಾತ್ಮಕ ಮಾತನ್ನೂ ಆಡಿಲ್ಲ.
ಆದರೆ, ಎಐಎಡಿಎಂಕೆಯ ಮುಖವಾಣಿಯಲ್ಲಿ ಮಾತ್ರ ಮೋದಿ ಸರ್ಕಾರದ ನಡೆಯನ್ನು ಟೀಕಿಸಲಾಗಿದೆ.












Click it and Unblock the Notifications