ಹಿಂದಿ ಬಳಕೆ ವಿರೋಧಿಸಿ ಪ್ರಧಾನಿಗೆ ಜಯಾ ಪತ್ರ
ನವದೆಹಲಿ, ಜೂ.20: ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸರ್ಕಾರದ ನಿರ್ಧಾರದಿಂದ ಹಿಂದಿ ಬಳಸದ ರಾಜ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಲಲಿತಾ ಅವರು ಶುಕ್ರವಾರ ಪತ್ರ ಬರೆದಿದ್ದಾರೆ.
ರಾಜಕೀಯ ನಾಯಕರು ಹಿಂದಿ ಭಾಷೆಯನ್ನು ಬಳಸಬೇಕು ಎಂಬ ಕೇಂದ್ರ ಗೃಹ ಸಚಿವಾಲಯದ ಆದೇಶಕ್ಕೆ ಈ ಕೂಡಲೇ ತಿದ್ದುಪಡಿ ತರಬೇಕು ಎಂದು ಜಯಾ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಹಿಂದಿ ಬದಲು ಇಂಗ್ಲಿಷ್ ಸಂವಹನ ಮಾಧ್ಯಮವಾಗಲಿ ಎಂದು ಹೇಳಿದ್ದಾರೆ.
ತಮಿಳುನಾಡಿನ ವಿಚಾರದಲ್ಲಿ ಹಿಂದಿಗೆ ಪ್ರಾಮುಖ್ಯತೆ ನೀಡುವುದು ಅತೀ ಸೂಕ್ಷ್ಮ ವಿಚಾರ. ತಮಿಳಿಗರಿಗೆ ತಮ್ಮ ಭಾಷೆಯ ಬಗ್ಗೆ ತುಂಬಾ ಗೌರವ ಮತ್ತು ಭಾವನಾತ್ಮಕ ಸಂಬಂಧ ಇದೆ ಎಂದು ತಮಿಳುನಾಡು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.[ಹಿಂದಿ ವಿರುದ್ಧ ಎಂಕೆ ಯುದ್ಧ, ಸಿದ್ದು ಏಕೆ ನಿಶ್ಶಬ್ದ?]
ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ನಾಯಕರು ಹಿಂದಿ ಭಾಷೆಯಲ್ಲಿ ಸಂವಹನ ನಡೆಸುವುದನ್ನು ಅಭ್ಯಸಿಸಬೇಕೆಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಕಾರವಾಗಿ ಪ್ರತಿಕ್ರಿಯಿಸಿದ್ದ ಡಿಎಂಕೆ ಮುಖಂಡ ಕರುಣಾನಿಧಿ, 'ಮೋದಿ ಸರ್ಕಾರ ಹಿಂದಿ ಭಾಷೆಯನ್ನು ಬೆಳೆಸುವುದರ ಜೊತೆಗೆ, ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಉದ್ದೇಶ ಹೊಂದಿದೆ. ಹಿಂದಿ ಭಾಷೆ ಬಳಸದ ಜನರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ' ಎಂದು ಟೀಕಿಸಿದ್ದರು. ಈ ಬಗ್ಗೆ ಗೃಹ ಸಚಿವಾಲಯ ನೀಡಿರುವ ಹೇಳಿಕೆ ಹಾಗೂ ಇನ್ನಿತರ ನಾಯಕ ಅಭಿಪ್ರಾಯ ಸಂಗ್ರಹ ಇಲ್ಲಿದೆ...

ಜಯಲಲಿತಾ ನೀಡಿರುವ ಪತ್ರದಲ್ಲೇನಿದೆ?
1976ರ ಅಧಿಕೃತ ಭಾಷಾ ನೀತಿ ಪ್ರಕಾರ ಕೇಂದ್ರ ಸರ್ಕಾರ ಕಚೇರಿಗಳು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳ ಜತೆ ಸಂವಹನ ನಡೆಸಲು ಇಂಗ್ಲೀಷ್ ಭಾಷೆ ಬಳಸಬೇಕಾಗುತ್ತದೆ. 1963ರ ಅಧಿಕೃತ ಭಾಷಾ ಕಾಯಿದೆ ಸೆಕ್ಷನ್ 3(1) ಹಾಗೂ 1968ರಲ್ಲಿ ಆಗಿರುವ ತಿದ್ದುಪಡಿಗೆ ಅನ್ವಯವಾಗಿ ಇಂಗ್ಲೀಷ್ ಬಳಕೆ ಮಾಡಬಹುದಾಗಿದೆ.
ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸದ ರಾಜ್ಯಗಳಲ್ಲಿ ಈ ನಿಯಮ ಕಡ್ಡಾಯವಾಗಿದೆ. ಹೀಗಾಗಿ ಕೇಂದ್ರ ತನ್ನ ಸಂವಹನವನ್ನು ಇಂಗ್ಲೀಷ್ ನಲ್ಲೇ ಮುಂದುವರೆಸಲಿ, ಇಲ್ಲದಿದ್ದರೆ 1963 ರ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಜಯಲಲಿತಾ ಹೇಳಿದ್ದಾರೆ.

ತಮಿಳನ್ನು ಅಧಿಕೃತ ಭಾಷೆ ಎಂದು ಘೋಷಿಸಿ
ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ಭಾರತ ದೇಶದಲ್ಲಿ ವಿವಿಧ ಭಾಷೆಗಳಿರುವುದರಿಂದ ಸಂವಿಧಾನ ಮಾನ್ಯ 14 ಭಾಷೆಗಳನ್ನು ರಾಷ್ಟ್ರಭಾಷೆಯಾಗಿ ಪರಿಗಣಿಸಲಾಗಿದೆ.
ಆದರೆ, ಕೇಂದ್ರ ಸರ್ಕಾರ ಹಿಂದಿ, ಇಂಗ್ಲೀಷ್ ಬಳಸುತ್ತಾ ರಾಜ್ಯಗಳ ಜತೆ ಕಾರ್ಯನಿರ್ವಹಿಸುತ್ತದೆ. ವಿಶ್ವಮಾನ್ಯತೆ ಇರುವ ವಿಶ್ವದ ಪುರಾತನ ಭಾಷೆಗಳಲ್ಲಿ ಒಂದೆನಿಸಿರುವ ತಮಿಳನ್ನು ಭಾರತದ ಅಧಿಕೃತ ಭಾಷೆಯಾಗಿ ಘೋಷಿಸಿ ಎಂದು ಜೂ.3 ರಂದು ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನೀಡಿರುವ ಬೇಡಿಕೆ ಪಟ್ಟಿಯಲ್ಲಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ಸ್ಪಷ್ಟನೆ
ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನಿಸುತ್ತಿದೆಯೇ ಹೊರತು ಇತರ ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ.
'ಭಾರತದ ಅಧಿಕೃತ ಭಾಷೆ ಹಿಂದಿ ಆಗಿರುವುದರಿಂದ, ಆ ಭಾಷೆಗೆ ಉತ್ತೇಜನ ನೀಡುವುದು ನಮ್ಮ ಕರ್ತವ್ಯ. ಆದರೆ, ಪ್ರಾದೇಶಿಕ ಭಾಷೆಗಳನ್ನು ಬದಿಗೊತ್ತಿಹಿಂದಿ ಮಾತ್ರ ವಿಜೃಂಭಿಸುವಂತೆ ಮಾಡುವ ಯಾವುದೇ ಉದ್ದೇಶ ಕೇಂದ್ರ ಸರ್ಕಾರಕ್ಕಿಲ್ಲ' ಎಂದಿದ್ದಾರೆ.

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ವಿರೋಧ
ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸರ್ಕಾರದ ನಿರ್ಧಾರದಿಂದ ಹಿಂದಿ ಬಳಸದ ರಾಜ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಭಾಷೆ ಬಳಸುವಂತೆ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಚಿದಂಬರಂ ಅವರು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ಹಿಂದಿಯನ್ನು ಬಳಸದ ರಾಜ್ಯಗಳಿಗೆ ಹಿನ್ನಡೆಯಾಗಿಲಿದ್ದು, ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಚಿದಂಬರಂ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು
ಬೆಂಗಳೂರಿನಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಹಿಂದಿಯನ್ನು ಬಲವಂತವಾಗಿ ಹೇರುತ್ತಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ. ಹೀಗಾಗಿ ಹೆಚ್ಚು ಹಿಂದಿ ಬಳಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.