ಚಂಡಮಾರುತ 'ರೋನು', ಎಲ್ಲೆಲ್ಲಿ ಅಬ್ಬರಿಸುತ್ತಿದೆ?
ಚೆನ್ನೈ, ನ.09: ತಮಿಳುನಾಡಿನಲ್ಲಿ ದೀಪಾವಳಿ ಹಬ್ಬ ಆಚರಣೆಗೆ ಮಳೆರಾಯ ಸೋಮವಾರದಿಂದಲೇ ಅಡ್ಡಗಾಲು ಹಾಕಿದ್ದಾನೆ. 'ರೋನು' ಚಂಡಮಾರುತದ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಸುಮಾರು 8 ಜಿಲ್ಲೆಗಳಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ನೆರೆಯ ಕರ್ನಾಟಕದ ಗಡಿಭಾಗದಲ್ಲೂ ಮಳೆ ತನ್ನ ಪ್ರಭಾವ ತೋರುತ್ತಿದೆ.
ಇದೀಗ ಬಂದ ಮಾಹಿತಿ: ರೋನು ಚಂಡಮಾರುತದ ಭೀತಿ ಬೇಡ, ಆರಂಭದಲ್ಲೇ ಬಲಹೀನಗೊಂಡಿದ್ದು, ಭಾರಿ ತೊಂದರೆ ತಪ್ಪಿದೆ. ಅದರೆ, ತಮಿಳುನಾಡು, ಆಂಧ್ರ, ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. [ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]
ಭಾರಿ ಪ್ರಮಾಣದ ಮಳೆಯಿಂದಾಗಿ ತಮಿಳುನಾಡಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಹಲವೆಡೆ ಭಾರಿ ಮಳೆಯಾಗುತ್ತಿದ್ದರೆ, ಕೆಲವೆಡೆ ತಂಪಾದ ಮೇಲ್ಮೈಗಾಳಿ ಬೀಸುತ್ತಿದ್ದು, ಆಗಾಗ್ಗೆ ತುಂತುರು ಹನಿ ಬೀಳುತ್ತಿದೆ. ತಮಿಳುನಾಡಿನ ಪಟಾಕಿ ಮಾರಾಟಗಾರರಿಗೆ ಆತಂಕ ಉಂಟಾಗಿದೆ, ಹಬ್ಬದ ಸಂಭ್ರಮಾಚರಣೆಗೆ ಸಿದ್ಧರಾಗಿದ್ದವರಿಗೆ ನಿರಾಶೆ ಮೂಡಿದೆ.[ಈ ಜಿಲ್ಲೆಗಳಲ್ಲಿ ಮೂರು ದಿನ ಬಟ್ಟೆ ಒಣಗುವುದಿಲ್ಲ]
ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ 50 ಕಿ.ಮೀ.ವರೆಗೂ ಬಲವಾದ ಮೇಲ್ಮೈ ಶೀತಗಾಳಿ ಬೀಸಲಿದೆ. ಸುಮಾರು 100 ಮಿಲಿಮೀಟರ್ ವರೆಗೂ ಅಧಿಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಭಾರಿ ಮಳೆಯಾಗುವ ಸಂಭವವಿದ್ದು, ಪಟಾಕಿ ಮಾರಾಟಗಾರರು, ಪಟಾಕಿ ಸಿಡಿಸುವವರ ಉತ್ಸಾಹಕ್ಕೆ ತಣ್ಣೀರು ಎರಚಲಿದೆ.

ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಹೈ ಅಲರ್ಟ್
ಸಮುದ್ರದಲ್ಲಿ ಅಲೆಗಳು ಜೋರಾಗಿರುವುದರಿಂದ ಕರಾವಳಿ ಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಂಟು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
ವಿಳ್ಳುಪುರಂ, ತಿರುವಣ್ಣಾಮಲೈ, ಕಡಲೂರ್, ವೆಲ್ಲೂರು,ಕೃಷ್ಣಗಿರಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ತಮಿಳುನಾಡು, ರಾಯಲೆಸೀಮಾ, ಆಂಧ್ರಪ್ರದೇಶದ ದಕ್ಷಿಣ ಕರಾವಳಿ, ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶ, ಕೇರಳದ ಕೆಲಭಾಗದಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ.

ಯಾವ ಚಂಡಮಾರುತದ ಭೀತಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಹಲವೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಸಮಸ್ಯೆ ನೀಡುತ್ತಿರುವ ಛಪಲಾ, ಇತ್ತೀಚೆಗೆ ಕಾಣಿಸಿಕೊಂಡ ಮೇಘ್ ಜೊತೆಗೆ ಈಗ ರೋನು ಸಮಸ್ಯೆ ತಂದೊಡ್ಡಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತೀರ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಮಳೆ
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಭಾರಿ ಮಳೆ ತಣ್ಣೀರೆರಚಿದೆ. ಶಿವಕಾಶಿ, ಹೊಸೂರು ಸೇರಿದಂತೆ ಹಲವೆಡೆ ಪಟಾಕಿ ಮಾರಾಟ ಡಲ್ ಹೊಡೆಯುವ ಭೀತಿ ಎದುರಾಗಿದೆ. ಶಾಲೆ, ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಪಾಂಡಿಚೇರಿ, ಆಂಧ್ರಪ್ರದೇಶ ತೀರ ಪ್ರದೇಶಗಳಲ್ಲೂ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ಉಪಗ್ರಹದಿಂದ ಬಂದ ಚಿತ್ರ
ಅತ್ತ ಅರಬ್ಬೀಸಮುದ್ರ, ಇತ್ತ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳಾದ ಮೇಘ್, ಛಪಲಾ ಹಾಗೂ ರೋನು ತಕ್ಕಮಟ್ಟಿನ ಅಬ್ಬರ ಶುರು ಮಾಡಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳದ ಕರಾವಳಿಯಲ್ಲಿ ಭಾರಿ ಮಳೆಗೆ ಕಾರಣವಾಗಿದೆ.

ಯಾವ ಭಾಗಕ್ಕೆ ಸಮಸ್ಯೆ ಎದುರಾಗಲಿದೆ
ಯಾವ ಯಾವ ಭಾಗಕ್ಕೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ನೇರಳೆ ಬಣ್ಣದ ಹಚ್ಚು ನೋಡಿ ತಿಳಿಯಿರಿ












Click it and Unblock the Notifications