• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಚ್ಚರಿಯ ಬೆಳವಣಿಗೆ: ರಾಜಕೀಯ ಸನ್ಯಾಸತ್ವ ಪ್ರಕಟಿಸಿದ ಶಶಿಕಲಾ

|

ಚೆನ್ನೈ, ಮಾರ್ಚ್ 3: ಕಳೆದ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಮತ್ತು ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿದ್ದ ವಿ.ಕೆ. ಶಶಿಕಲಾ ನಟರಾಜನ್ ಅವರು ರಾಜಕಾರಣ ಮತ್ತು ಸಾರ್ವಜನಿಕ ಜೀವನವನ್ನು ತ್ಯಜಿಸಿದ್ದಾರೆ. ತಮಿಳುನಾಡು ಚುನಾವಣೆಗೆ ಎರಡು ವಾರ ಬಾಕಿ ಇರುವಾಗಲೇ ಅವರು ಈ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಅವರ ನಾಯಕತ್ವ, ಸ್ಪರ್ಧೆ ಸೇರಿದಂತೆ ತೀವ್ರ ಕುತೂಹಲ ಮತ್ತು ಚರ್ಚೆಯ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬುಧವಾರ ಮುದ್ರಿತ ಪತ್ರದಲ್ಲಿ ಅವರು ತಮ್ಮ ರಾಜಕೀಯ ಸನ್ಯಾಸತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. 'ಜಯಾ (ಮಾಜಿ ಮುಖ್ಯಮಂತ್ರಿ ಡಿ. ಜಯಲಲಿತಾ) ಬದುಕಿದ್ದಾಗ ನಾನು ಎಂದಿಗೂ ಅಧಿಕಾರ ಅಥವಾ ಸ್ಥಾನಮಾನದ ಹಿಂದೆ ಹೋಗಿರಲಿಲ್ಲ. ಆಕೆ ನಿಧನರಾದ ಬಳಿಕವೂ ಅದನ್ನು ಮಾಡುವುದಿಲ್ಲ. ನಾನು ರಾಜಕಾರಣವನ್ನು ತ್ಯಜಿಸುತ್ತಿದ್ದೇನೆ. ಆದರೆ ಆಕೆಯ ಪಕ್ಷದ ಗೆಲುವಿಗೆ ಪ್ರಾರ್ಥಿಸುತ್ತೇನೆ. ಆಕೆಯ ಪಾರಂಪರ್ಯ ಮುಂದುವರಿಯಲಿ' ಎಂದು ಶಶಿಕಲಾ ಹೇಳಿದ್ದಾರೆ.

'ಜತೆಯಾಗಿ ಕೆಲಸ ಮಾಡುವಂತೆ ಮತ್ತು ಡಿಎಂಕೆಯನ್ನು ಸೋಲಿಸುವಂತೆ ಎಐಎಡಿಎಂಕೆಯ ಎಲ್ಲ ಬೆಂಬಲಿಗರಿಗೆ ನಾನು ಮನವಿ ಮಾಡುತ್ತೇನೆ. ಆಕೆಯ ಪರಂಪರೆಯನ್ನು ನಡೆಸಿಕೊಂಡು ಹೋಗುವಂತೆ ಕೆಲಸ ಮಾಡುವಂತೆ ಪಕ್ಷದ ನಾಯಕತ್ವಕ್ಕೆ ಮನವಿ ಮಾಡುತ್ತೇನೆ' ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ.

ಸುವರ್ಣ ಆಡಳಿತ ಬರಬೇಕು

ಸುವರ್ಣ ಆಡಳಿತ ಬರಬೇಕು

'ಅಮ್ಮಾ ಅವರ ತಂಡವು ಡಿಎಂಕೆಯನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಕೆಲಸ ಮಾಡಬೇಕು. ಅಮ್ಮಾ ಅವರ ಸುವರ್ಣ ಆಡಳಿತವು ಮತ್ತೆ ಬರುವಂತೆ ಮಾಡಬೇಕು' ಎಂದು ಶಶಿಕಲಾ ಅವರು ರಾಜಕೀಯ ನಿವೃತ್ತಿಯ ಪತ್ರದಲ್ಲಿ ಹೇಳಿದ್ದಾರೆ.

ಮನವೊಲಿಕೆಗೆ ಪ್ರಯತ್ನ

ಮನವೊಲಿಕೆಗೆ ಪ್ರಯತ್ನ

ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್, ಅವರು ತಮ್ಮ ನಿರ್ಧಾರವನ್ನು ಬದಲಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದು, ಮತ್ತೆ ಮತ್ತೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. 'ಅವರ ನಿರ್ಧಾರದಿಂದ ನನಗೆ ದುಃಖವಾಗಿದೆ. ಅವರು ಈ ನಿರ್ಧಾರದಿಂದ ಹೊರಬರುವಂತೆ ಮನವೊಲಿಕೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಪ್ರಯತ್ನ ಮುಂದುವರಿಸುತ್ತಲೇ ಇರುತ್ತೇನೆ. ಇದು ನನಗೆ ಹಿನ್ನಡೆಯಲ್ಲ. ನನ್ನ ನಾಯಕತ್ವದಲ್ಲಿ ಎಎಂಎಂಕೆ ಈ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಲಿದೆ' ಎಂದು ಅವರು ಹೇಳಿದ್ದಾರೆ.

ಕಾನೂನು ಹೋರಾಟ ನಡೆಸಿದ್ದರು

ಕಾನೂನು ಹೋರಾಟ ನಡೆಸಿದ್ದರು

ಶಶಿಕಲಾ ಅವರ ಹಠಾತ್ ನಿರ್ಧಾರ ಅಚ್ಚರಿ ಮೂಡಿಸಿದೆ. ಏಕೆಂದರೆ ಇತ್ತೀಚೆಗಷ್ಟೇ ಅವರು ಎಐಎಡಿಎಂಕೆಯಲ್ಲಿನ ತಮ್ಮ ಸ್ಥಾನವನ್ನು ಮರಳಿ ಪಡೆದುಕೊಳ್ಳಲು ಕಾನೂನು ಹೋರಾಟದ ಹೆಜ್ಜೆ ಇರಿಸಿದ್ದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಮರಳಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು.

ಶಶಿಕಲಾ ಉಚ್ಚಾಟನೆ

ಶಶಿಕಲಾ ಉಚ್ಚಾಟನೆ

2016ರ ಡಿಸೆಂಬರ್‌ನಲ್ಲಿ ಜಯಲಲಿತಾ ಮೃತಪಟ್ಟ ಬಳಿಕ ಶಶಿಕಲಾ ಪಕ್ಷದ ಮುಖ್ಯಸ್ಥೆಯ ಸ್ಥಾನದಲ್ಲಿ ಕುಳಿತಿದ್ದರು. ಆದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರಿಂದ, ತಮ್ಮ ಗೈರಿನಲ್ಲಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಮಾಡಿದ್ದರು. ಆದರೆ ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ಓ. ಪನ್ನೀರ್‌ಸೆಲ್ವಂ ಜತೆ ಇಪಿಎಸ್ ಕೈಜೋಡಿಸಿದ್ದರು. ಇಬ್ಬರೂ ಸೇರಿ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.

ಸೇರಿಸಿಕೊಳ್ಳೊಲ್ಲ ಎಂದಿದ್ದ ಇಪಿಎಸ್

ಸೇರಿಸಿಕೊಳ್ಳೊಲ್ಲ ಎಂದಿದ್ದ ಇಪಿಎಸ್

ಜೈಲಿನಿಂದ ಶಶಿಕಲಾ ಬಿಡುಗಡೆಯಾದ ನಂತರ ಪಕ್ಷದಲ್ಲಿ ಒಳಬೇಗುದಿ ಸ್ಫೋಟಗೊಂಡಿತ್ತು. ಶಶಿಕಲಾ ಅವರನ್ನು ಮರಳಿ ಪಕ್ಷದ ಮುಖ್ಯಸ್ಥರ ಹುದ್ದೆಗೆ ನೇಮಿಸುವ ವಿಚಾರದಲ್ಲಿ ಪರ-ವಿರೋಧದ ಚರ್ಚೆ ನಡೆದಿತ್ತು. ಶಶಿಕಲಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪನ್ನೀರ್‌ಸೆಲ್ವಂ ಘೋಷಿಸಿದ್ದರು. ಇದರ ವಿರುದ್ಧ ಶಶಿಕಲಾ ಕಾನೂನು ಸಮರಕ್ಕೆ ಮುಂದಾಗಿದ್ದರು.

English summary
Expelled AIADMK leader VK Sasikala announced her retirement from politics a few days ahead of Tamil Nadu Assembly Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X