ಮೇಲ್ಜಾತಿಗೆ ಮೀಸಲಾತಿ ಪ್ರಶ್ನಿಸಿ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ ಡಿಎಂಕೆ
ಚೆನ್ನೈ, ಜನವರಿ 18: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸಲು ಕೇಂದ್ರ ಸರಕಾರ ರೂಪಿಸಿದ ಕಾನೂನು ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದೆ. ಸಾಂವಿಧಾನಿಕ ತಿದ್ದುಪಡಿ ಮಸೂದೆ ತಂದು, ಈಗಾಗಲೇ ಲೋಕಸಭೆ- ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತು, ರಾಷ್ಟ್ರಪತಿಗಳ ಅಂಕಿತ ಬಿದ್ದು, ಕಾಯ್ದೆ ಜಾರಿಯಾಗಿದೆ.
ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರು ಮದ್ರಾಸ್ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಂದಹಾಗೆ ಸಂಸತ್ ನಲ್ಲಿ ಈ ಮಸೂದೆಯನ್ನು ಮಂಡಿಸಿದ್ದಾಗ ಡಿಎಂಕೆ ವಿರೋಧ ವ್ಯಕ್ತಪಡಿಸಿತ್ತು. ಕೇಂದ್ರ ಸರಕಾರದ ಈ ನಡೆಗೆ ತಮಿಳುನಾಡಿನ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಕೂಡ ವಿರೋಧ ವ್ಯಕ್ತಪಡಿಸಿದೆ. ಆ ಪಕ್ಷ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿತ್ತು.
ಆದರೆ, ಉಳಿದ ವಿರೋಧ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದ್ದರಿಂದ ಸುಲಭವಾಗಿ ಒಪ್ಪಿಗೆ ಸಿಕ್ಕಿತು.

ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಒದಗಿಸುವ ಈ ಕಾನೂನು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ.. ಇದರಿಂದ ವಿವಿಧ ಜಾತಿಗಳ ಜನರಿಗೆ ಅನ್ಯಾಯ ಆಗಲಿದೆ ಎಂದು ಡಿಎಂಕೆ ವಾದ ಮಂಡಿಸಿದೆ. ಸಂವಿಧಾನದ ಪ್ರಕಾರ ಕೂಡ, ಆರ್ಥಿಕವಾಗಿ ಹಿಂದುಳಿದವರು ಎಂಬುದು ಮೀಸಲಾತಿಗೆ ಮಾನದಂಡ ಅಲ್ಲ ಎಂದು ಹೇಳಿದೆ.
ಇದರ ಜತೆಗೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಯಾವ ಆಧಾರದಲ್ಲಿ ಕೇಂದ್ರ ಸರಕಾರವು 10 ಪರ್ಸೆಂಟ್ ಮೀಸಲಾತಿ ಎಂಬ ನಿರ್ಧಾರಕ್ಕೆ ಬಂದಿತು ಎಂದು ಉತ್ತರ ನೀಡಲು ಡಿಎಂಕೆ ಒತ್ತಾಯ ಮಾಡಿದೆ.












Click it and Unblock the Notifications