ಭಕ್ತನಿಗೆ ದರ್ಶನಕ್ಕೆ ಅವಕಾಶ ಕೊಡದ ಟಿಟಿಡಿಗೆ ಸಂಕಷ್ಟ: 45 ಲಕ್ಷ ರುಪಾಯಿ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಸೂಚನೆ
ಸೇಲಂ, ಸೆಪ್ಟೆಂಬರ್ 4: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದು ಇಂದಿಗೂ ಎಷ್ಟೋ ಜನರ ಕನಸು, ವರ್ಷಗಟ್ಟಲೆ ಕಾದು ಕಾಸು ಕೂಡಿಸಿ ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ಅಸಂಖ್ಯವಾಗಿದೆ. ದಿನಕ್ಕೆ ಲಕ್ಷಾಂತರ ಜನ ಭಕ್ತರು ದರ್ಶನಕ್ಕಾಗಿ ಬರುತ್ತಾರೆ.
ಹೀಗಾಗಿಯೇ, ಟಿಟಿಡಿ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ವಿಶೇಷ ದರ್ಶನ, ವಿವಿಧ ಸೇವೆಗನ್ನು ಮೊದಲೇ ಕಾಯ್ದಿರಿಸಲು ಅವಕಾಶ ನೀಡಿದೆ. ಆದರೆ ಭಕ್ತರೊಬ್ಬರು 16 ವರ್ಷಗಳ ಹಿಂದೆ ವಸ್ತ್ರಾಲಂಕಾರ ಸೇವೆಗಾಗಿ ಹಣ ಕಟ್ಟಿದ್ದು, ಇಂದಿಗೂ ಅವಕಾಶ ಸಿಗದೆ ನಿರಾಸೆ ಅನುಭವಿಸಿದ್ದಾರೆ. ಅದೇ ಈಗ ಟಿಟಿಡಿಗೆ ಮುಳುವಾಗಿದೆ.
ದೇವಸ್ಥಾನವೊಂದು ವಿಶೇಷ ಪೂಜೆಗಾಗಿ ಭಕ್ತರಿಂದ ಹಣ ಸಂಗ್ರಹಿಸಿ ನಿಗದಿತ ದಿನಾಂಕದಂದು ದರ್ಶನ/ಪೂಜಾ ಸೇವೆ ನೀಡಲು ನಿರಾಕರಿಸಿದರೆ ಅದು 'ಸೇವೆಯ ಕೊರತೆ' ಎಂದು ತಮಿಳುನಾಡಿನ ಸೇಲಂ ಜಿಲ್ಲೆಯ ಗ್ರಾಹಕ ನ್ಯಾಯಾಲಯ ಹೇಳಿದೆ.
ಪ್ರತಿಷ್ಠಿತ ವಸ್ತ್ರಾಲಂಕಾರ ಸೇವೆಯನ್ನು 16 ವರ್ಷಗಳ ಹಿಂದೆ ಕಾಯ್ದಿರಿಸಿದ ಭಕ್ತರಿಗೆ ಹೊಸ ದಿನಾಂಕವನ್ನು ಏರ್ಪಡಿಸುವಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಗೆ ನಿರ್ದೇಶಿಸಿದೆ ಅಥವಾ ಸೇವೆಯಲ್ಲಿನ ಕೊರತೆ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ 45 ಲಕ್ಷ ರುಪಾಯಿ ನೀಡುವಂತೆ ಆದೇಶಿಸಿದೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನ ದರ್ಶನ, ಸೇವೆಗೆ ಹಲವು ಆನ್‌ಲೈನ್ ಸೇವೆಗಳನ್ನು ಆರಂಭಿಸಿದೆ. ಇದರ ಪ್ರಯೋಜನವನ್ನು ಪಡೆದುಕೊಂಡಿದ್ದ ತಮಿಳುನಾಡಿನ ಭಕ್ತ ಕೆ. ಆರ್. ಹರಿ ಭಾಸ್ಕರ್ ಎನ್ನುವವರು 2006ರ ಜೂನ್ ತಿಂಗಳಿನಲ್ಲಿ 12,250 ರುಪಾಯಿ ಪಾವತಿಸಿ ವಸ್ತ್ರಾಲಂಕಾರ ಸೇವೆಯನ್ನು ಬುಕ್ ಮಾಡಿದ್ದರು. ಅಂದಿನಿಂದಲೂ ಹರಿಭಾಸ್ಕರ್ ಅವರಿಗೆ ವಸ್ತ್ರಾಲಂಕಾರ ಸೇವೆಗೆ ಟಿಟಿಡಿ ಅವಕಾಶವನ್ನೇ ಕೊಟ್ಟಿಲ್ಲ. ಸೇವೆಯ ದಿನಾಂಕವನ್ನು ಮುಂದೂಡುತ್ತಲೇ ಬಂದಿತ್ತು.

ಕೋವಿಡ್ ಕಾರಣದಿಂದ ವಸ್ತ್ರಾಲಂಕಾರ ಸೇವೆ ಮುಂದಕ್ಕೆ
2006ರಿಂದ 2020ರ ವರೆಗೂ ಅವಕಾಶ ಸಿಗಲಿಲ್ಲ, ಅಂತಿಮವಾಗಿ 2020ರ ಮಾರ್ಚ್‌ನಲ್ಲಿ ವಸ್ತ್ರಾಲಂಕಾರ ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಟಿಟಿಡಿ ಹೇಳಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ 80 ದಿನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಕೋವಿಡ್ ಸಾಂಕ್ರಾಮಿಕದ ಕಾರಣ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ನಡೆಯಲಿಲ್ಲ, ಹರಿಭಾಸ್ಕರ್ ಅವರ ವಸ್ತ್ರಾಲಂಕಾರ ಸೇವೆಯನ್ನು ಪುನಃ ಮುಂದೂಡಲಾಗಿದೆ ಎನ್ನುವ ಸಂದೇಶ ಟಿಟಿಡಿಯಿಂದ ಬಂದಿದೆ.

ಅವಕಾಶ ಕೊಡಲು ಟಿಟಿಡಿ ನಿರಾಕರಣೆ
ಭಕ್ತ ಹರಿಭಾಸ್ಕರ್ ಗೆ ಟಿಟಿಡಿ ಮತ್ತೊಮ್ಮೆ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸೇವೆ ಮುಂದೂಡಿದ್ದರ ಬಗ್ಗೆ ಮೊದಲೇ ಬೇಸರದಲ್ಲಿದ್ದ ಹರಿಭಾಸ್ಕರ್, ಟಿಟಿಡಿ ವರ್ತನೆಯಿಂದ ಆಕ್ರೋಶಗೊಂಡಿದ್ದಾರೆ.
ವಸ್ತ್ರಾಲಂಕಾರ ಸೇವೆಗೆ ಮತ್ತೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಆದರೆ ಹಣ ವಾಪಸ್ ನೀಡುವುದಾಗಿ ಟಿಟಿಡಿ ಹೇಳಿದೆ. 16 ವರ್ಷಗಳಿಂದ ದೇವರ ಸೇವೆಗಾಗಿ ಕಾದಿದ್ದ ಹರಿಭಾಸ್ಕರ್, ನ್ಯಾಯ ದೊರಕಿಸಿಕೊಡುವಂತೆ, ಸೇಲಂನ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಟಿಟಿಡಿ ವಿರುದ್ಧ ಗ್ರಾಹಕ ನ್ಯಾಯಾಲಯ ಅಸಮಾಧಾನ
ಆಗಸ್ಟ್ 18 ರಂದು, ಸೇಲಂ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಅಧ್ಯಕ್ಷ ಪಿ ಗಣೇಶರಾಮ್ ಮತ್ತು ಸದಸ್ಯ ಆರ್. ರಾಮೋಲಾ ಅವರನ್ನೊಳಗೊಂಡ ಪೀಠವು ವಸ್ತ್ರಾಲಂಕಾರ ಸೇವೆಗೆ ಹೊಸ ದಿನಾಂಕವನ್ನು ನಿಗದಿಪಡಿಸಲು ಟಿಟಿಡಿ ನಿರಾಕರಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಇದು ಸೇವೆಯಲ್ಲಿನ ಕೊರತೆಯ ಸ್ಪಷ್ಟ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ. ಒಂದು ವರ್ಷದ ಒಳಗಾಗಿ ವಸ್ತ್ರಾಲಂಕಾರ ಸೇವೆಗೆ ದಿನಾಂಕ ನಿಗದಿ ಮಾಡುವಂತೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

45 ಲಕ್ಷ ರುಪಾಯಿ ಪರಿಹಾರ ನೀಡಲು ಟಿಟಿಡಿಗೆ ಆದೇಶ
ವಸ್ತ್ರಾಲಂಕಾರ ಸೇವೆಗಾಗಿ ಟಿಟಿಡಿ ನಿಗದಿಪಡಿಸಿದ ಅಗತ್ಯಮೊತ್ತವನ್ನು ಪಾವತಿಸಿ ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ಭಕ್ತ ಹರಿಭಾಸ್ಕರ್ ಸೇವೆಗೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಟಿಟಿಡಿ ಹೊಸ ದಿನಾಂಕ ನಿಗದಿಪಡಿಸದ ಕಾರಣ ದೇವರ ಸೇವೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಅವರು ಮಾನಸಿಕವಾಗಿ ನೊಂದಿದ್ದಾರೆ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.
ಹರಿಭಾಸ್ಕರ್ ಅವರಿಗೆ ಒಂದು ವರ್ಷದೊಳಗೆ ವಸ್ತ್ರಾಲಂಕಾರ ಸೇವೆಗೆ ಅವಕಾಶ ಮಾಡಿಕೊಡಬೇಕು ಅಥವಾ ಭಕ್ತರಿಗೆ ಸೇವೆಯಲ್ಲಿನ ಕೊರತೆ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ 45 ಲಕ್ಷ ರುಪಾಯಿಗಳನ್ನು ನೀಡಬೇಕು ಎಂದು ಹೇಳಿದೆ. ಇನ್ನೆರಡು ತಿಂಗಳ ಒಳಗಾಗಿ ಶೇಕಡ 6 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಹರಿಭಾಸ್ಕರ್‌ಗೆ 12,250 ರುಪಾಯಿಗಳನ್ನು ಮರುಪಾವತಿ ಮಾಡುವಂತೆ ಆದೇಶ ನೀಡಿದೆ.












Click it and Unblock the Notifications