ತಮಿಳುನಾಡು: ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಬಾಲಕ
ವೆಲ್ಲೂರು, ಏ. 12: ರಾಜ್ಯದಲ್ಲಿ ಮಕ್ಕಳನ್ನು ಬಲಿತೆಗೆದುಕೊಂಡು ತೀವ್ರ ಟೀಕೆಗೆ ಗುರುಯಾಗಿದ್ದ ಕೊಳವೆ ಬಾವಿ ದುರಂತ ಪಕ್ಕದ ತಮಿಳುನಾಡಿನಲ್ಲಿ ಘಟಿಸಿದೆ.
ವೆಲ್ಲೂರು ಜಿಲ್ಲೆಯ ಆರ್ಕಾಡ್ ತಾಲೂಕು ಕೂರಂಬಾಡಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 2 ವರ್ಷದ ತಮಿಳು ಸೆಲ್ವನ್ ಕೊಳವೆ ಬಾವಿಯೊಳಗೆ ಬಿದ್ದಿದ್ದು ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಮನೆ ಮುಂದೆಯೇ ಇದ್ದ ಕೊಳವೆ ಬಾವಿಗೆ ಬಾಲಕ ಬಿದ್ದಿದ್ದಾನೆ. 300 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು 30 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದಾನೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಬಂಡೆಗಳು ಅಡ್ಡವಾಗಿವೆ.[ಬಾದಾಮಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ]

ಬಾಲಕನ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ತಾಯಿ ಗೀತಾ ಮಗುವಿನ ಜೊತೆ ವಾಸವಾಗಿದ್ದರು. ದುರ್ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಆಂಬುಲೆನ್ಸ್ ಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿವೆ. ವೆಲ್ಲೂರಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಯೂ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.[ಕೊಳವೆ ಬಾವಿ ದುರಂತ ತಡೆಯಲು ಖಡಕ್ ಮಾರ್ಗಸೂಚಿ]
ಕಳೆದ ಆಗಸ್ಟ್ ತಿಂಗಳಿನಲ್ಲಿ ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ತಿಮ್ಮಣ್ಣನನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ನಂತರ ಈ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆದು ಕೊಳವೆ ಬಾವಿಗಳನ್ನು ಜನರು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರು. ರಾಜ್ಯ ಸರ್ಕಾರ ಸಹ ಸ್ಪಷ್ಟ ಆದೇಶ ನೀಡಿತ್ತು.












Click it and Unblock the Notifications