ಮಳೆಗೆ ತತ್ತರಿಸಿರುವ ಚೆನ್ನೈ ಜನತೆಗೆ ವಾಯುಸೇನೆ ಆಸರೆ
ಚೆನ್ನೈ, ನ.17: ರಣಬಿಸಿಲಿನಲ್ಲಿ ಬೇಯುತ್ತಿದ್ದ ಚೆನ್ನೈ ಜನತೆ ಈಗ ಮಳೆಯ ಆರ್ಭಟಕ್ಕೆ ತತ್ತರಿಸಿದ್ದಾರೆ. ತಮಿಳುನಾಡಿನ ಜಯಲಲಿತಾ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರದಿಂದ ವಿಪತ್ತು ರಕ್ಷಣಾ ಪಡೆ, ವಾಯುಸೇನೆ ದಳಗಳನ್ನು ಜನತೆಯ ರಕ್ಷಣೆಗೆ ಕಳಿಸಲಾಗಿದೆ.
ಚಂಡ ಮಾರುತದ 'ರೋನು' ಅಬ್ಬರದ ನಂತರ ನಿರಂತರ ಮಳೆಗೆ ತಮಿಳುನಾಡು ಸಿಲುಕಿದೆ. ಐಎಎಫ್ ವಕ್ತಾರ ವಿಂಗ್ ಕಮಾಂಡರ್ ರೊಶೆಲ್ ಡಿಸಿಲ್ವಾ ಅವರು ಒನ್ ಇಂಡಿಯಾ ಪ್ರತಿನಿಧಿ ಜೊತೆ ಮಂಗಳವಾರ ಮಾತನಾಡಿ ರಕ್ಷಣಾ ಕಾರ್ಯಾಚರಣೆ ವಿವರಗಳನ್ನು ಹೇಳಿದರು. [ಚಂಡಮಾರುತ 'ರೋನು', ಎಲ್ಲೆಲ್ಲಿ ಅಬ್ಬರಿಸುತ್ತಿದೆ?]
ಈಗಾಗಲೇ 12 ಮಕ್ಕಳು, 6 ಮಹಿಳೆಯರು ಸೇರಿದಂತೆ 22 ಜನರನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಸಂಪೂರ್ಣಾವಾಗಿ ಜಲಾವೃತವಾಗಿರುವ ತಾಂಬರಮ್ ನಿಂದ ಮದುಚುರಿ ಅಶೋಕ್ ನಗರಗಳಿಂದ ಸಂತ್ರಸ್ತರನ್ನು ರಕ್ಷಿಸಲಾಗಿದೆ.
ಸುಮಾರು 100 ಲೀಟರ್ ಕುಡಿಯುವ ನೀರು, 150ಕ್ಕೂ ಅಧಿಕ ಆಹಾರ ಪ್ಯಾಕೇಟ್ ಗಳನ್ನು ಹೆಲಿಕಾಪ್ಟರ್ ಮೂಲಕ ತಲುಪಿಸಲಾಗಿದೆ. ಗುಜರಾತ್ ನಲ್ಲಿ ಜೂನ್ ತಿಂಗಳಿನಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಲ್ಲಿ ಕೈಗೊಂಡ ರಕ್ಷಣಾ ಕ್ರಮಗಳನ್ನು ಇಲ್ಲೂ ಅನುಸರಿಸಲಾಗುತ್ತಿದೆ.

ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತ
ಚೆನ್ನೈನ ಬಾಹುತೇಕ ರಸ್ತೆ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಬಸ್, ರೈಲು ಮಾರ್ಗಗಳು ರದ್ದಾಗಿದೆ. ಬಸ್ ನಿಲ್ದಾಣಗಳು ಜಲಾವೃತವಾಗಿವೆ. ಸಬ್ಅರ್ಬನ್ ರೈಲು ಹಳಿಗಳು ನೀರಿನಲ್ಲಿ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಜಲಾವೃತಗೊಂಡ ಪ್ರದೇಶಗಳನ್ನು ತಲುಪಲು ರಕ್ಷಣಾ ತಂಡ ಬೋಟ್ಗಳನ್ನು ಬಳಸುತ್ತಿದೆ.

ದಕ್ಷಿಣ ಒಳನಾಡಿನಲ್ಲಿ ಇನ್ನೂ ಎರಡು ದಿನ ಮಳೆ
ಬಂಗಾಳಕೊಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಉತ್ತರ ತಮಿಳುನಾಡು, ಆಂಧ್ರಪ್ರದೇಶದತ್ತ ಸಾಗುತ್ತಿರುವುದರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ.

ಕರ್ನಾಟಕಕ್ಕೂ ಮಳೆಯ ತೊಂದರೆ ತಪ್ಪಿದ್ದಲ್ಲ
ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಚಾಮರಾಜನಗರ, ಕೋಲಾರ, ಬೆಂಗಳೂರು, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಸಾಧಾರಾಣ ಹಾಗೂ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ
ಮಳೆಯಿಂದಾಗಿ ಬೆಳೆ ನಾಶವಾಗಿರುವುದರಿಂದ ತರಕಾರಿ ಬೆಲೆ ತೀವ್ರ ಏರಿಕೆ ಕಂಡಿದೆ. ಟೊಮ್ಯಾಟೊ ಬೆಲೆ ಕಿಲೋಗೆ 100 ರೂ. ಏರಿದ್ದರೆ, ಬೆಂಡೆಕಾಯಿ ಬೆಲೆ ಕೂಡ ಸುಮಾರು ಶೇ.50 ಏರಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ, ಹಲವೆಡೆ ಭೂಕುಸಿತದ ಪರಿಣಾಮ ಸಾವನ್ನಪ್ಪಿರುವವರ ಸಂಖ್ಯೆ 70 ದಾಟಿದೆ.

ಚೆನ್ನೈ ಕಾರ್ಪೊರೇಷನ್ ನಿರ್ಲಕ್ಷ್ಯ
ಚೆನ್ನೈ, ರಾಮನಾಥ ಪುರಂ, ಹೊಸೂರು, ಕೃಷ್ಣಗಿರಿ, ತಿರುವಣ್ಣಾಮಲೈ, ವೆಲ್ಲೂರು, ಕಡಲೂರ್ ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ಚೆನ್ನೈನ ಬಹುತೇಕ ಭಾಗದಲ್ಲಿ ಜನರ ದೂರುಗಳನ್ನು ಆಲಿಸಲು ಕಾರ್ಪೊರೇಷನ್ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
|
ಮಳೆಗೆ ತತ್ತರಿಸಿರುವ ಚೆನ್ನೈ ಜನತೆಗೆ ಹೆಲ್ಪ್ ಲೈನ್
ಮಳೆಗೆ ತತ್ತರಿಸಿರುವ ಚೆನ್ನೈ ಜನತೆಗೆ ಸಹಾಯವಾಣಿ ಇಲ್ಲಿದೆ ರೇಡಿಯೋಸಿಟಿ ಟ್ವೀಟ್.












Click it and Unblock the Notifications