ಬಾಲ್ಯವಿವಾಹ: ಪರಸ್ಪರ ಮಾತನಾಡಿದ್ದಕ್ಕೆ ಮದುವೆ ಮಾಡಿಸಿದ ಮಂದಿ
ಡಿಸೆಂಬರ್ 16: ಬಲವಂತವಾಗಿ ಬಾಲ್ಯವಿವಾಹ ಏರ್ಪಡಿಸಿದ್ದ ಆರು ಮಂದಿಯನ್ನು ತಮಿಳುನಾಡು ಪೊಲೀಸರು ತಂಜಾವೂರು ಗ್ರಾಮದಲ್ಲಿ ಬಂಧಿಸಿದ್ದಾರೆ. ಅಪ್ರಾಪ್ತ ಹುಡುಗ ಮತ್ತು ಹುಡುಗಿಯನ್ನು ಗ್ರಾಮಸ್ಥರ ಗುಂಪು ಪ್ರೇಮಿಗಳೆಂದು ಕಂಡುಹಿಡಿದು ಮದುವೆಯಾಗಲು ಒತ್ತಾಯಿಸಲಾಯಿತು. ತಂಜಾವೂರು ಜಿಲ್ಲೆಯ ತಿರುವೋಣಂ ಬಳಿ ಈ ಘಟನೆ ನಡೆದಿದೆ. ಮಂಗಳವಾರ ಮುಂಜಾನೆ ಇಬ್ಬರೂ ಪರಸ್ಪರ ಮಾತನಾಡುತ್ತಿರುವುದನ್ನ ಕಂಡ ಜನ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
ಹುಡುಗನಿಗೆ 17 ಮತ್ತು ಹುಡುಗಿಗೆ 16 ವರ್ಷ. ಇವರಿಬ್ಬರೂ 12 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಒಂದೇ ಶಾಲೆಗೆ ಪ್ರತಿನಿತ್ಯ ಹೋಗಿ ಬರುತ್ತಾರೆ. ಸೋಮವಾರ ರಾತ್ರಿ ಗೆಳೆಯನ ಜತೆ ಹುಡುಗಿ ಮನೆಗೆ ಹೋಗಿದ್ದಳು. ವರದಿಗಳ ಪ್ರಕಾರ, 12.30 ರ ಸುಮಾರಿಗೆ ಅವರು ಒಟ್ಟಿಗೆ ಮಾತನಾಡುತ್ತಿರುವುದನ್ನು ಕೆಲವು ಗ್ರಾಮಸ್ಥರು ಗಮನಿಸಿದ್ದಾರೆ. ಇವರಿಬ್ಬರು ಪ್ರೇಮಿಗಳೆಂದು ತಿಳಿದ ಗ್ರಾಮಸ್ಥರು ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಗ್ರಾಮಸ್ಥರು ಪೋಷಕರನ್ನು ಒತ್ತಾಯಿಸಿ ಮದುವೆ ಮಾಡಿಸಿದ್ದಾರೆ.
ಗ್ರಾಮಸ್ಥರ ಒತ್ತಡಕ್ಕೆ ಮಣಿದ ಪೋಷಕರು ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಬಾಲ್ಯ ವಿವಾಹ ನೆರವೇರಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ತಿರುವೋಣಂ ಪಂಚಾಯತ್ ಯೂನಿಯನ್ ಕಲ್ಯಾಣ ಅಧಿಕಾರಿ ಕಮಲಾದೇವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಸಿ ಅಪ್ರಾಪ್ತರಿಗೆ ಬಲವಂತವಾಗಿ ಮದುವೆ ಮಾಡಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರನ್ನು ರಾಜಾ (51) ಅಯ್ಯಾವು (55) ರಾಮನ್ (62) ಗೋಪು (38) ನಾಡಿಮುತ್ತು (40) ಮತ್ತು ಕಣ್ಣಿಯನ್ (50) ಎಂದು ಗುರುತಿಸಲಾಗಿದೆ. ಬಾಲಕನನ್ನು ತಂಜಾವೂರಿನ ಬಾಲಾಪರಾಧಾಲಯಕ್ಕೆ ಕಳುಹಿಸಲಾಗಿದ್ದು, ಬಾಲಕಿಯನ್ನು ಸರ್ಕಾರಿ ಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 147 (ಗಲಭೆಗೆ ಶಿಕ್ಷೆ), 341 (ತಪ್ಪು ತಡೆಗೆ ಶಿಕ್ಷೆ) ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಭಾರತದಲ್ಲಿ ಯುವತಿಯರ ಮದುವೆಗೆ ಕನಿಷ್ಠ ವಯೋಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಜಯಾ ಜೇಟ್ಲಿ ನೇತೃತ್ವದಲ್ಲಿ ನೀತಿ ಆಯೋಗದ ಕಾರ್ಯಪಡೆ ನಿಗದಿತ ವಯಸ್ಸಿಗಿಂತಲೂ ಮೊದಲು ಮದುವೆ ಆಗುವುದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದೆ. ತಾಯಿ ಮತ್ತು ಮಗುವಿನ ವಯಸ್ಸಿನ ಅಂತರ ಹಾಗೂ ಮರಣ ಪ್ರಮಾಣ ಹೀಗೆ ಎಲ್ಲ ಅಂಶಗಳ ಬಗ್ಗೆ ಕಾರ್ಯಪಡೆಯು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿದೆ.

ನೀತಿ ಆಯೋಗದ ಕಾರ್ಯಪಡೆಯು ಸಲ್ಲಿಸಿದ ಶಿಫಾರಸ್ಸಿನಲ್ಲಿ ಯುವತಿಯರ ಮದುವೆ ವಯಸ್ಸನ್ನು ಏಕೆ ಹೆಚ್ಚಿಸಬೇಕು ಎಂಬ ಬಗೆಗೆ ಹಲವು ವಿಷಯಗಳನ್ನು ಉಲ್ಲೇಖಿಸಿದೆ. ಈ ಪೈಕಿ ಮೊದಲ ಬಾರಿ ಮಹಿಳೆಯು ತಮ್ಮ ಎಷ್ಟನೇ ವಯಸ್ಸಿನಲ್ಲಿ ಗರ್ಭ ಧರಿಸುವುದು ಸೂಕ್ತ ಎಂಬುದನ್ನು ತಿಳಿಸಿದೆ. ಮದುವೆಯ ನಂತರ ಮಹಿಳೆಯು ಕನಿಷ್ಠ 21 ವರ್ಷ ಅಥವಾ ಅದರ ನಂತರದಲ್ಲಿ ಗರ್ಭ ಧರಿಸುವುದು ಆರೋಗ್ಯಕರ ಬೆಳವಣಿಗೆ ಆಗಲಿದೆ ಎಂದು ಆಯೋಗದ ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಯುವತಿಯರ ಮದುವೆ ವಯಸ್ಸನ್ನು ಹೆಚ್ಚಿಸುವುದು ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲೂ ಸೂಕ್ತ ನಿರ್ಧಾರವಾಗಲಿದೆ. ಇದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತೆ ಆಗುತ್ತದೆ. ಆ ಕುಟುಂಬದ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದರ ಜೊತೆಗೆ ಸಮಾಜ ಹಾಗೂ ಮಕ್ಕಳ ಮೇಲೆಯೂ ಪ್ರಭಾವ ಬೀರಲಿದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.












Click it and Unblock the Notifications