ಹೈನುಗಾರಿಕೆ ಕ್ಷೇತ್ರದಲ್ಲಿ ಫೇಮಸ್ ಆದ ಮುರ್ರಾ: ದಾಖಲೆ ಸೃಷ್ಟಿಸಿದ ಎಮ್ಮೆ
ಕೈತಾಲ್, ಮಾರ್ಚ್ 2: ಒಂದು ಎಮ್ಮೆ ದಿನಕ್ಕೆ ಸರಿಸುಮಾರು 10 ರಿಂದ 15 ಲೀಟರ್ ಹಾಲು ಕೊಡುವುದು ನಾವು ಕೇಳಿದ್ದೇವೆ. ತಳಿಯ ಮೇಲೂ ಅತೀ ಹೆಚ್ಚು ಹಾಲು ಕೊಡುವ ಎಮ್ಮೆಗಳಿವೆ. ಹೆಚ್ಚಾನು ಹೆಚ್ಚು ಅಂದರೆ ನಿತ್ಯ 15 ಲೀಟರ್ ಹಾಲು ಕೊಡಬಹುದು. ಆದರೆ ಮುರ್ರಾ ತಳಿಯ ಎಮ್ಮೆ ಬಗ್ಗೆ ಕೇಳಿದ್ರೆ ನೀವು ಆಶ್ಚರ್ಯ ಪಡುತ್ತೀರ.
ಹರಿಯಾಣದಲ್ಲಿ ಕೈತಾಲ್‌ನ ಬುಧಖೇಡ ನಿವಾಸಿ ನರೇಶ್ ಎಂಬುವವರ ಮುರ್ರಾ ತಳಿಯ ಎಮ್ಮೆ ಸದ್ಯ ಭಾರಿ ವೈರಲ್ ಆಗಿದೆ. ಸುತ್ತಮುತ್ತ ಹಳ್ಳಿಗಳಲ್ಲಿ ಈ ಎಮ್ಮೆಯ ಬಗ್ಗೆನೇ ಚರ್ಚೆ ನಡೆಯುತ್ತಿದೆ. ಯಾಕೆಂದರೆ ಇದು ದೇಶದಲ್ಲೇ ಹೆಸರಾದ ಎಮ್ಮೆಯಾಗಿದೆ. ಈ ಎಮ್ಮೆ 33.8 ಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ. ದೇಶದ ಯಾವುದೇ ಎಮ್ಮೆ ಈ ಎಮ್ಮೆಯಷ್ಟು ಹಾಲು ನೀಡುವುದಿಲ್ಲ. 'ಸುಲ್ತಾನ್' ಎಂದು ಕರೆಯಲ್ಪಡುವ ಬಲವಾದ ಈ ಎಮ್ಮೆ ದಿನಕ್ಕೆ 33.8 ಲೀಟರ್ ಹಾಲನ್ನು ಕೊಡುತ್ತದೆ. ಹೀಗಾಗಿ ಈ ಎಮ್ಮೆಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಕೋಟಿ ರೂಪಾಯಿ ಕೊಡ್ತೀವಿ ಅಂದ್ರು ಎಮ್ಮೆ ಮಾಲೀಕ ನರೇಶ್ ಆ ಎಮ್ಮೆಯನ್ನು ಮಾರಲು ರೆಡಿ ಇಲ್ಲ. ಅತಿ ಹೆಚ್ಚು ಹಾಲು ನೀಡುವ ಈ ಎಮ್ಮೆ ಬಗ್ಗೆ ಮತ್ತಷ್ಟು ತಿಳಿಯೋಣ.
ಇದೀಗ 33.8 ಲೀಟರ್ ಹಾಲು ನೀಡಿ ದಾಖಲೆ ನಿರ್ಮಿಸಿರುವ ಮುರ್ರಾ ತಳಿಯ ಎಮ್ಮೆ ಭಾರೀ ಚರ್ಚೆಯಲ್ಲಿದೆ. ಹರಿಯಾಣದ ಈ ಎಮ್ಮೆಯ ಹೆಸರು 'ರೇಷ್ಮಾ'. ಇದರ ಹಾಲು ಕರೆಯಲು ಇಬ್ಬರು ಜನರು ಬೇಕು. ಅದರ ಕೊಬ್ಬಿನ ಗುಣಮಟ್ಟ 10 ರಿಂದ 9.31 ಆಗಿದೆ. 'ರೇಷ್ಮಾ' ಈಗ ಇಡೀ ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಎಮ್ಮೆ ಎನಿಸಿಕೊಂಡಿದೆ.

ಮೂರು ಬಾರಿ ಪರಿಶೀಲಿಸಿದ ವೈದ್ಯರ ತಂಡ
'ರೇಷ್ಮಾ' ಮೊದಲು ಜನಿಸಿದಾಗ 19-20 ಲೀಟರ್ ಹಾಲು ನೀಡುತ್ತಿತ್ತು ಎಂದು ನರೇಶ್ ಹೇಳುತ್ತಾರೆ. ಎರಡನೇ ಬಾರಿ 30 ಲೀಟರ್ ಹಾಗೂ ಈಗ ಮೂರನೇ ಬಾರಿ 33.8 ಲೀಟರ್ ಹಾಲು ನೀಡುತ್ತಿದೆ. ಆಶ್ಚರ್ಯವೆಂದರೆ ಈ ಎಮ್ಮೆ ಹಾಲುಕರೆಯುತ್ತಿರುವುದನ್ನು ಹಲವು ವೈದ್ಯರ ತಂಡ 7 ಬಾರಿ ನೋಡಿ ತೃಪ್ತರಾದರು. ನಂತರ ಇದು ಭಾರತದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಎಮ್ಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮಾರಾಟ ಮಾಡಲು ಬಯಸದ ಮಾಲೀಕ
ಈ ಎಮ್ಮೆಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಬಿಬಿ) 33.8 ಲೀಟರ್ ಹಾಲು ನೀಡುವ ದಾಖಲೆಯ ಪ್ರಮಾಣಪತ್ರದೊಂದಿಗೆ ಸುಧಾರಿತ ತಳಿ ಸ್ಥಾನಮಾನವನ್ನು ನೀಡಿದೆ. ಅಧಿಕಾರಿಗಳು ಅದರ ಹಾಲಿನ ಕೊಬ್ಬಿನ ಗುಣಮಟ್ಟವನ್ನು 10 ರಲ್ಲಿ 9.31 ಎಂದು ಹೇಳಿದ್ದಾರೆ. ಹೀಗಾಗಿ ಈ ತಳಿಯ ಪೋಷಣೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದಲ್ಲಿ ಡೈರಿ ರೈತರ ಸಂಘ ಆಯೋಜಿಸಿದ್ದ 3ನೇ ಡಿಎಫ್‌ಎ ಇಂಟರ್‌ನ್ಯಾಶನಲ್ ಡೈರಿ ಮತ್ತು ಅಗ್ರಿ ಎಕ್ಸ್‌ಪೋ ಮಿಲ್ಕಿಂಗ್ ಶಿಬಿರದಲ್ಲಿ 'ರೇಷ್ಮಾ' ಮಾಲೀಕರನ್ನು ಸನ್ಮಾನಿಸಲಾಯಿತು. ಅಲ್ಲಿಂದ ಮುಂದೆ ‘ರೇಷ್ಮಾ' ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಲ್ಲಿ ಹೆಚ್ಚಾಗಿದೆ.
ಈ ಎಮ್ಮೆಯನ್ನು 1.40 ಲಕ್ಷಕ್ಕೆ ಖರೀದಿಸಿರುವುದಾಗಿ ನರೇಶ್ ಕುಮಾರ್ ತಿಳಿಸಿದ್ದಾರೆ. ಅದರ ನಂತರ ಅದನ್ನು ಅವರು ಚೆನ್ನಾಗಿ ನೋಡಿಕೊಂಡರು. ಅದನ್ನು ಮಗುವಿನಂತೆ ಪೋಷಣೆ ಮಾಡಿದ್ದಾರೆ. ಬಳಿಕ 'ಸುಲ್ತಾನ್' ಎಂದು ಕರೆಯಲ್ಪಡುವ ಈ 'ರೇಷ್ಮಾ' ಎಮ್ಮೆ ದೇಶಾದ್ಯಂತ ಖ್ಯಾತಿಯನ್ನು ಪಡೆದಿದೆ. ಹೀಗಾಗಿ ಅದನ್ನು ಅವರು ಯಾವುದೇ ಬೆಲೆಗೆ ಮಾರಾಟ ಮಾಡಲು ಬಯಸುವುದಿಲ್ಲ ಎನ್ನುತ್ತಾರೆ.

ಮುರ‌್ರಾ ಎಮ್ಮೆಯ ಪೋಷಣೆ
ಮುರ‌್ರಾ ಆಹಾರ ಮುರ‌್ರಾ ಎಮ್ಮೆಗೆ ಕಡಲೆ ಚಿನ್ನಿ, ಶೇಂಗಾ ಹಿಂಡಿ, ಗೋಧಿ ತೌಡು ಮಿಶ್ರಿತ ಆಹಾರವನ್ನು ರಾತ್ರಿ ವೇಳೆಯಲ್ಲಿ ನನೆಯಲು ಇಟ್ಟು ಬೆಳಗ್ಗೆ ತಿನ್ನಲು ಕೊಡುತ್ತಾರೆ. ಹಸಿ ಮೇವು ಹಾಗೂ ಒಣ ಮೇವು ಮಿಶ್ರಣ ಮಾಡಿದ ಮೇವು ಹಾಕಲಾಗುತ್ತದೆ. ಈ ಎಮ್ಮೆಗೆ ಅಗತ್ಯವಾದ ಹಸಿ ಮೇವಿಗಾಗಿ ತಮ್ಮದೇ ಪ್ರದೇಶದಲ್ಲಿ ಹುಲ್ಲು ಬೆಳೆಸಿದ್ದಾರೆ. ಬೇಸಿಗೆ ಸಮಯದಲ್ಲಿ ಬಿಳಿ ಜೋಳದ ಮೇವು ಅನ್ನು ಯಂತ್ರಗಳಿಂದ ಸಣ್ಣಗೆ ಕತ್ತರಿಸಿ ಸಂಗ್ರಹ ಮಾಡಿತ್ತಾರೆ. ಅದರ ಜತೆ ಹಸಿ ಮೇವು ಕತ್ತರಿಸಿ ಮಿಶ್ರಣ ಮಾಡಿ ದಿನಾಲೂ ಎಮ್ಮೆಗೆ ಹಾಕುತ್ತಾರೆ. ಈ ಎಮ್ಮೆಗೆ ದಿನಾಲೂ ಬೆಳಗ್ಗೆ ಒಮ್ಮೆ ಹಾಗೂ ಸಾಯಂಕಾಲ ಒಮ್ಮೆ ಮೂರುವರೆ ಕೆಜಿ ಸಿದ್ಧಪಡಿಸಿದ ಆಹಾರ ಕೊಡುತ್ತಾರೆ. ಎಮ್ಮೆಗೆ ಪ್ರತಿ 4-5 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತದೆ. ಅವುಗಳ ಮೈ ನುಣುಪಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಎಮ್ಮೆಯ ಶೆಡ್‌ನಲ್ಲಿ ಶುಚಿತ್ವ ಕಾಪಾಡಲು ಪ್ರತಿ 4-5 ದಿನಗಳಿಗೊಮ್ಮೆ ಫಿನಾಯಿಲ್ ಸಿಂಪಡಿಸುತ್ತಾರೆ.

ಅದ್ಭುತ ತಳಿಗೆ ಭಾರೀ ಬೇಡಿಕೆ
ಮುರ‌್ರಾ ಎಮ್ಮೆಗಳು ಕರು ಹಾಕಿದ ಎಂಟು ತಿಂಗಳುಗಳವರೆಗೆ ಹಾಲು ಕೊಡುತ್ತವೆ. ಮುರ‌್ರಾ ಎಮ್ಮೆ... ಹೈನುಗಾರಿಕೆ ಕ್ಷೇತ್ರದಲ್ಲಿ ಈಗ ಎಲ್ಲೆಡೆ ಕೇಳಿ ಬರುತ್ತಿರುವ ತಳಿಯ ಹೆಸರಿದು. ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬಂದು ಮಿಂಚುತ್ತಿರುವ ಅದ್ಭುತ ತಳಿ. ಕಾರಣ ಅವುಗಳ ಹಾಲು ನೀಡುವ ಕ್ಷಮತೆ. ಈ ಎಮ್ಮೆಗಳು ದಿನಕ್ಕೆ ಸರಾಸರಿ 15 ಲೀ. ಹಾಲು ನೀಡುವ ಈ ಎಮ್ಮೆಗಳು, ಬಹಳ ಗಟ್ಟಿಮುಟ್ಟು. ಈ ಹಾಲಿನ ದರವೂ ತುಟ್ಟಿ. ಲೀ.ಗೆ 50 ರೂಪಾಯಿ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ಹೀಗಿರುವಾಗ ಈ ಎಮ್ಮೆ ಸಾಕಿದವರು ಈಗ ಲಕ್ಷ ಲಕ್ಷ ಎಣಿಸುತ್ತಿದ್ದಾರೆ.












Click it and Unblock the Notifications