ಭಯೋತ್ಪಾದಕನ ಮನೆಯಲ್ಲಿ ಕಾಣಿಸಿಕೊಂಡಿದ್ದೇಕೆ ಕೇಜ್ರಿವಾಲ್: ರಾಹುಲ್ ಗಾಂಧಿ
ಚಂಡೀಗಢ, ಫೆಬ್ರವರಿ 15: ಪಂಜಾಬ್ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಧುಮುಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬರ್ನಾಲಾದಲ್ಲಿ ನಡೆದ ಪ್ರಚಾರದಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಪಕ್ಷದ ನಾಯಕರು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದ್ದು, ರಾಷ್ಟ್ರೀಯತೆ ಬಗ್ಗೆ ವಿಶ್ವಾಸವಿಲ್ಲ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ಕಾಂಗ್ರೆಸ್ ನಾಯಕರು ಏನೇ ಆಗಿದ್ದರೂ, ಒಬ್ಬ ಭಯೋತ್ಪಾದಕನ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಜಾಡು ಚಿಹ್ನೆಯುಳ್ಳ(ಆಪ್ ಪಕ್ಷದ ಚಿಹ್ನೆ ಪೊರಕೆ) ಪಕ್ಷದ ನಾಯಕರು ಭಯೋತ್ಪಾದಕನ ಮನೆಯಲ್ಲಿ ಕಂಡು ಬಂದಿದ್ದಾರೆ, ಇದು ಸತ್ಯ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಅರವಿಂದ್ ಕೇಜ್ರಿವಾಲ್ ವಿರುದ್ಧ ಟೀಕಾಪ್ರಹಾರ:
2017ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಂಜಾಬ್‌ನ ಮೋಗಾದಲ್ಲಿ ಮಾಜಿ ಖಲಿಸ್ತಾನಿ ಭಯೋತ್ಪಾದಕರ ನಿವಾಸದಲ್ಲಿ ತಂಗಿದ್ದ ಕೇಜ್ರಿವಾಲ್‌ಗೆ ವಿರುದ್ಧ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು. ಪಂಜಾಬಿನಲ್ಲಿ ಸರ್ಕಾರ ರಚಿಸುವುದಕ್ಕೆ ಒಂದು ಅವಕಾಶವನ್ನು ಕೇಳುತ್ತಿರುವವರು ರಾಜ್ಯವನ್ನೇ ನಾಶಪಡಿಸುತ್ತಾರೆ, ಸುಟ್ಟು ಹಾಕುತ್ತಾರೆ ಎಂದು ದೂಷಿಸಿದ್ದಾರೆ.
ಪಂಜಾಬ್ ಗಡಿ ಮತ್ತು ಸೂಕ್ಷ್ಮ ರಾಜ್ಯವಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಪಂಜಾಬ್ ಅನ್ನು ಅರ್ಥಮಾಡಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರವೇ ಶಾಂತಿಯನ್ನು ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ. ಶಾಂತಿ ಹೋದರೆ ಏನೂ ಉಳಿಯುವುದಿಲ್ಲ ಎಂದು ನಮಗೆ ತಿಳಿದಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಜಿ ಸಿಎಂ ಅಮರೀಂದರ್ ಸಿಂಗ್ ವಿರುದ್ಧವೂ ದಾಳಿ:
ಕಳೆದ ವರ್ಷ ಬಿಜೆಪಿ ಮೇಲಿನ ವ್ಯಾಮೋಹದಿಂದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ತೆಗೆದುಹಾಕಲಾಯಿತು ಎಂದು ರಾಹುಲ್ ಗಾಂಧಿ ಹೇಳಿದರು. ರಾಜ್ಯದಲ್ಲಿ 70 ರಿಂದ 80 ಸ್ಥಾನಗಳನ್ನು ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡುವಂತೆ ಮನವಿ ಮಾಡಿಕೊಂಡರು.
ಮೋದಿ ವಿರುದ್ಧ ಮಾತನಾಡಿದ್ದ ರಾಹುಲ್ ಗಾಂಧಿ:
ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಭಾಷಣಗಳಲ್ಲಿ ದೇಶದ ನಿರುದ್ಯೋಗ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿದರು. ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಜಾರಿಯಿಂದ ಎರಡ್ಮೂರು ಬಿಲಿಯನೇರ್‌ಗಳು ಮಾತ್ರ ಲಾಭ ಪಡೆದುಕೊಂಡಿದ್ದಾರೆ ಎಂದು ದೂಷಿಸಿದರು. "ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಬಡತನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಡವರು, ರೈತರು, ಸಣ್ಣ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಪರ ಸರ್ಕಾರವನ್ನು ಚನ್ನಿ ಮುನ್ನೆಡೆಸುತ್ತಾರೆಯೇ ವಿನಃ ಕೋಟ್ಯಾಧಿಪತಿಗಳ ಸರ್ಕಾರವನ್ನಲ್ಲ," ಎಂದಿದ್ದರು.












Click it and Unblock the Notifications