ಸರ್ಜಿಕಲ್ ದಾಳಿಗೆ ಅತಿಯಾದ ಪ್ರಚಾರ: ನಿವೃತ್ತ ಸೇನಾಧಿಕಾರಿ ಕಿಡಿ
ಚಂಡೀಗಢ, ಡಿಸೆಂಬರ್ 8: ಸರ್ಜಿಕಲ್ ದಾಳಿಯ ಯಶಸ್ಸಿನ ಬಳಿಕ ಆರಂಭದಲ್ಲಿ ಸಂಭ್ರಮಿಸುವುದು ಸಹಜ. ಆದರೆ, ಅದರ ಸುತ್ತಲೂ ನಿರಂತರ ಮಾಡುತ್ತಿರುವ ವಿಪರೀತ ಪ್ರಚಾರ ಅಸಹಜವಾದುದು ಎಂದು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಸರ್ಜಿಕಲ್ ದಾಳಿ ಬಗ್ಗೆ ಅತಿಯಾದ ಪ್ರಚಾರ ನೀಡಲಾಗಿದೆ ಎಂದು ನನಗೆ ಅನಿಸುತ್ತದೆ. ಸೇನಾ ಕಾರ್ಯಾಚರಣೆ ಅತಿ ಮುಖ್ಯವಾಗಿದ್ದು ಮತ್ತು ನಾವು ಅದನ್ನು ಮಾಡಲೇಬೇಕಿತ್ತು. ಅದನ್ನು ಈಗ ಅತಿಯಾಗಿ ರಾಜಕೀಯಕರಣಗೊಳಿಸಲಾಗಿದೆ. ಅದು ಸರಿಯೋ ಅಥವಾ ತಪ್ಪೋ, ಅದನ್ನು ರಾಜಕಾರಣಿಗಳನ್ನೇ ಕೇಳಬೇಕು' ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡಾ ದಾಳಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ.
ಚಂಡೀಗಢದಲ್ಲಿ ಸೇನಾ ಸಾಹಿತ್ಯ ಉತ್ಸವದ (ಎಂಎಲ್ ಎಫ್) ವೇಳೆ 'ಗಡಿಯಾಚೆಗಿನ ಕಾರ್ಯಾಚರಣೆಗಳ ಪಾತ್ರ ಮತ್ತು ಸರ್ಜಿಕಲ್ ದಾಳಿಗಳು' ವಿಚಾರದ ಬಗ್ಗೆ ಹೂಡಾ ಮಾಡನಾಡಿದರು.
ಸೇನಾ ಪಡೆಗಳ ಪರಂಪರೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಎಂಎಲ್ಎಫ್ ಅನ್ನು ಆಯೋಜಿಸಲಾಗಿತ್ತಿದ್ದು, ಪ್ರಸಕ್ತ ವರ್ಷ ಇದು ಎರಡನೆಯ ಉತ್ಸವವಾಗಿದೆ.

ನೇರ ಪ್ರಸಾರ ವೀಕ್ಷಿಸಿದ್ದರು
ಸರ್ಜಿಕಲ್ ದಾಳಿಯ ವೇಳೆ ಉತ್ತರ ಸೇನಾ ಕಮಾಂಡರ್ ಆಗಿದ್ದ ಹೂಡಾ, ದಾಳಿಯ ನೇರಪ್ರಸಾರದ ವಿಡಿಯೋವನ್ನು ವೀಕ್ಷಿಸಿದ್ದರು.
ಉರಿ ದಾಳಿಯಲ್ಲಿ ಭಾರತದ 19 ಸೈನಿಕರನ್ನು ಹತ್ಯೆ ಮಾಡಿದಕ್ಕೆ ಪ್ರತೀಕಾರವಾಗಿ ಎರಡು ವಾರದ ಒಳಗೆ ಭಾರತೀಯ ಸೇನೆಯ ದಾಳಿಯ ಯೋಜನೆಗೆ ಹೂಡಾ ಅನುಮತಿ ನೀಡಿದ್ದರು.
ನಾವು ಸರ್ಜಿಕಲ್ ದಾಳಿಯನ್ನು ರಹಸ್ಯವಾಗಿ ನಡೆಸಿದ್ದೆವು. ಶತ್ರುಗಳನ್ನು ನೈತಿಕವಾಗಿಯೂ ಸದೆಬಡಿಯುವ ಗುರಿಯೊಂದಿಗೆ ಈ ಕಾರ್ಯತಂತ್ರ ರೂಪಿಸಲಾಗಿತ್ತು ಎಂದು ವಿವರಿಸಿದರು.

ಅತಿಯಾದ ಪ್ರಚಾರ ಬೇಡವಾಗಿತ್ತು
ಇಂತಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದಾಗ ಸಂಭ್ರಮಿಸುವುದು ಸರ್ವೇಸಾಮಾನ್ಯ. ಆದರೆ, ಸೇನಾ ಕಾರ್ಯಾಚರಣೆಯ ಸುತ್ತಲೂ ನಿರಂತರವಾಗಿ ಪ್ರಚಾರವನ್ನು ನಡೆಸುತ್ತಿರುವುದು ಅಪೇಕ್ಷಣೀಯವಲ್ಲ ಎಂದು ಅಭಿಪ್ರಾಯಪಟ್ಟರು.
|
ಪರಿಣಾಮ ಯೋಚಿಸಿ ಮಾಡಿ
1981ರಲ್ಲಿ ಇಸ್ರೇಲ್ ಪಡೆಗಳು ಇರಾಕ್‌ನ ಪರಮಾಣು ಸ್ಥಳಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದರಿಂದ ಉಂಟಾಗಿದ್ದ ಭಾರಿ ಅನಾಹುತಗಳನ್ನು ನೆನಪಿಸಿದ ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್ ಎಸ್ ಬ್ರಾರ್, ಭವಿಷ್ಯದಲ್ಲಿ ಇಂತಹ ಯಾವುದೇ ಕಾರ್ಯಾಚರಣೆ ನಡೆಸುವ ಮುನ್ನ ಶತ್ರುಗಳ ವಿರುದ್ಧದ ದೀರ್ಘಾವಧಿ ಪರಿಣಾಮದ ಬಗ್ಗೆಯೂ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಹೊಣೆ ಹೊತ್ತುಕೊಳ್ಳುತ್ತಿದ್ದರೇ?
ರಾಜಕಾರಣಿಗಳು ಈ ವಿಚಾರದಲ್ಲಿ ಸಾಹಸಿಗಳಾಗಬಾರದು ಎಂದು ಎಚ್ಚರಿಕೆ ನೀಡಿದ ಬ್ರಾರ್, ದಾಳಿಯ ವೇಳೆ ಸೇನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ್ದರೆ ಅವರು ಹೊಣೆಗಾರಿಕೆ ತೆಗೆದುಕೊಳ್ಳುತ್ತಿದ್ದರೇ ಎಂದು ಪ್ರಶ್ನಿಸಿದರು.












Click it and Unblock the Notifications