ಎಸ್‌ಎಡಿ ಜೊತೆ ಬಿಜೆಪಿ ಚುನಾವಣೋತ್ತರ ಮೈತ್ರಿಯಿಲ್ಲ: ಕೇಂದ್ರ ಸಚಿವ ಹರ್‌ದೀಪ್
ಚಂಡೀಗಢ, ಫೆಬ್ರವರಿ 06: ಪಂಜಾಬ್‌ನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಡುವೆ ಚುನಾವಣಾ ನಂತರದ ಮೈತ್ರಿ ಸಾಧ್ಯತೆಯನ್ನು ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಶನಿವಾರ ತಳ್ಳಿಹಾಕಿದ್ದಾರೆ. ಎರಡು ಪಕ್ಷಗಳ ಮೈತ್ರಿಯು "ಕೆಟ್ಟ ದಾಂಪತ್ಯ" ಎಂದು ಬಿಜೆಪಿಯ ಹಿರಿಯ ನಾಯಕ ಬಣ್ಣಿಸಿದ್ದಾರೆ.
ಇನ್ನು ಕೆಲವೇ ವಾರಗಳಲ್ಲಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಎಲ್ಲಾ ಪಕ್ಷಗಳು ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರವನ್ನು ಆರಂಭ ಮಾಡಿದೆ. ಬಿಜೆಪಿ ಹಾಗೂ ಎಸ್‌ಎಡಿ (ಸಂಯುಕ್ತ) ಈಗಾಗಲೇ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿದೆ. ಬಿಜೆಪಿಯೊಂದಿಗೆ ಕಾಂಗ್ರೆಸ್‌ನ ಮಾಜಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಕೂಡಾ ಮೈತ್ರಿಯನ್ನು ಮಾಡಿಕೊಂಡಿದೆ. ಆದರೆ ಹಳೆಯ ಮಿತ್ರ ಪಕ್ಷವಾದ ಅಕಾಲಿದಳದ ಜೊತೆ ಈ ಬಾರಿ ಮೈತ್ರಿ ಮಾಡಿಕೊಂಡಿಲ್ಲ.
ಈ ನಡುವೆ, "ಪಂಜಾಬ್‌ನಲ್ಲಿ ಕೇಸರಿ ಪಕ್ಷಕ್ಕೆ ತನ್ನ ನೆಲೆಯನ್ನು ವಿಸ್ತರಿಸಲು ಎಸ್‌ಎಡಿ ಅವಕಾಶ ನೀಡಲಿಲ್ಲ. ಎಸ್‌ಎಡಿ ಜೊತೆ ಚುನಾವಣೋತ್ತರ ಮೈತ್ರಿ ಇಲ್ಲ," ಎಂದು ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಇನ್ನು "ಬಿಜೆಪಿಯಿಂದ ಒಬ್ಬ ಸಿಖ್ ನಾಯಕ ಕೂಡಾ ಮುಂದೆ ಬರಲು ಅಕಾಲಿಗಳು ಅವಕಾಶ ನೀಡಲಿಲ್ಲ," ಎಂದು ದೂರಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ನಗರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್, ಪಕ್ಷದ ರಾಜ್ಯ ಘಟಕದ ಮುಖ್ಯ ವಕ್ತಾರ ಅನಿಲ್ ಸರೀನ್ ಉಪಸ್ಥಿತರಿದ್ದರು.
ಹಲವು ವರ್ಷಗಳ ಬಿಜೆಪಿ-ಎಸ್‌ಎಡಿ ಮೈತ್ರಿ
2020 ರಲ್ಲಿ ಕೇಂದ್ರದ ಮೂರು ವಿವಾದಾಸ್ಪದ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಎಸ್‌ಎಡಿ ಹಾಗೂ ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿದೆ. ವಿವಾದಾತ್ಮಕ ಕೃಷಿ ಕಾನೂನು ವಿಚಾರದಲ್ಲಿ ಕೇಂದ್ರದಲ್ಲಿ ಮತ್ತು ಪಂಜಾಬ್‌ನಲ್ಲಿ ಬಿಜೆಪಿಯೊಂದಿಗೆ ಸಂಬಂಧವನ್ನು ಮುರಿದುಕೊಂಡ ನಂತರ, ಶಿರೋಮಣಿ ಅಕಾಲಿ ದಳವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹಾಗೆಯೇ ತಮ್ಮ ಪಕ್ಷವು ರಾಜ್ಯದ ಎಲ್ಲಾ ಮೂರು ಪ್ರದೇಶಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ ಎಂದು ನಾಯಕರುಗಳು ಹೇಳಿಕೊಂಡಿದ್ದಾರೆ.
ಇನ್ನು ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಅಲಿಯಾಸ್ ಹನಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್ ಸಿಂಗ್ ಪುರಿ ಬಿಜೆಪಿಗೆ ಸೇಡಿನ ರಾಜಕೀಯದಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರು.
ಫೆಬ್ರವರಿ 20 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಎಸ್‌ಎಡಿ (ಸಂಯುಕ್ತ) ನೀಡಿದ ಭರವಸೆಗಳ ಕುರಿತು ಮಾತನಾಡಿದ ಸಚಿವರು, ಬಿಜೆಪಿ ಮೈತ್ರಿಕೂಟದ ಭರವಸೆ ಆರ್ಥಿಕತೆಯ ಪುನರುಜ್ಜೀವನಕ್ಕೆ ಸಂಬಂಧಿಸಿದೆ. ಬಿಜೆಪಿ ಭರವಸೆ ನೀಡಿದ್ದನ್ನು ಈಡೇರಿಸುತ್ತದೆ ಎಂದರು. ಬಿಜೆಪಿ ನೇತೃತ್ವದ ಮೈತ್ರಿಕೂಟವು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ, ಅದು ರಾಜ್ಯದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತದೆ ಎಂದು ತಿಳಿಸಿದರು.
2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications