ಪಂಜಾಬ್ ಶಾಸಕರಿಗೆ ಕೇವಲ ಒಂದು ಪಿಂಚಣಿ: ಸಿಎಂ ಘೋಷಣೆ
ಚಂಡೀಗಢ, ಮಾರ್ಚ್ 25: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಾ ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ಕಡಿತಗೊಳಿಸಿದ್ದಾರೆ. ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ.
ಶಾಸಕರು ಮತ್ತು ಮಾಜಿ ಶಾಸಕರು ಎಷ್ಟು ಬಾರಿ ಗೆದ್ದರೂ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಘೋಷಿಸಿದ್ದಾರೆ. ಇನ್ನು ಶಾಸಕರ ಕುಟುಂಬಗಳಿಗೆ ನೀಡುವ ಭತ್ಯೆಯಲ್ಲಿಯೂ ಕಡಿತಗೊಳಿಸಲಾಗುವುದು ಎಂದು ಸಿಎಂ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಹಲವು ಶಾಸಕರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಪ್ರತಿ ಅವಧಿಗೆ ಬಹು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟು ಬಾರಿ ಆಯ್ಕೆಯಾದರೂ ಒಂದೇ ಪಿಂಚಣಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.

ಪಿಂಚಣಿ ಹೆಸರಲ್ಲಿ ಶಾಸಕರಿಗೆ ಲಕ್ಷಾಂತರ ಹಣ..!
"ರಾಜಕೀಯ ವಲಯದ ರಾಜಕಾರಣಿಗಳು ತಮ್ಮ ಸೇವೆ ಮಾಡುವ ಹೆಸರಿನಲ್ಲಿ ಜನರಿಂದ ಮತ ಕೇಳಲು ಕೈ ಜೋಡಿಸಿ ಜನರ ಬಳಿಗೆ ಹೋಗುತ್ತಾರೆ. ಆದರೆ ಮೂರು, ಐದು ಅಥವಾ ಆರು ಅವಧಿಗೆ ಶಾಸಕರಾಗಿ ಆಯ್ಕೆಯಾದವರು ಪಿಂಚಣಿ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ಪಡೆಯುತ್ತಿದ್ದಾರೆ. ಅದನ್ನು ನಾವು ಆಲೋಚನೆ ಮಾಡಿದರೆಯೇ ನಮಗೆ ಆಘಾತವಾಗುತ್ತದೆ. ಅವರು ವಿಧಾನ ಸಭೆಗೂ ಬರುವುದಿಲ್ಲ," ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿವರಿಸಿದರು.
"ಶಾಸಕರು ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದ ನೆಪದಲ್ಲಿ 3.50 ಲಕ್ಷದಿಂದ 5.25 ಲಕ್ಷದವರೆಗೆ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಈ ರಾಜಕಾರಣಿಗಳಲ್ಲಿ ಕೆಲವರು ಸಂಸತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಪಿಂಚಣಿಯನ್ನೂ ಪಡೆಯುತ್ತಾರೆ," ಎಂದರು.
Koo AppToday we have taken another big decision. Changes will be made in the pension formula of MLAs in Punjab. Now MLAs will get only one pension. Thousands of crores of rupees spent on the pension of MLAs will now be used for the betterment of the people of Punjab. - Bhagwant Mann (@bhagwantmann) 25 Mar 2022
"ಒಬ್ಬ ಶಾಸಕರಿಗೆ ಒಂದು ಪಿಂಚಣಿ" ಬೇಡಿಕೆ
"ಒಬ್ಬ ಶಾಸಕರಿಗೆ ಒಂದು ಪಿಂಚಣಿ" ಎಂಬ ಬೇಡಿಕೆಯನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಕಳೆದ ವಿಧಾನಸಭೆಯಲ್ಲಿ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಕೂಡ ಮಾಡಿತ್ತು. ಒಂದು ಅಧಿಕಾರವಧಿಯಲ್ಲಿ ಶಾಸಕರು ಸುಮಾರು 75,150 ಪಿಂಚಣಿ ರೂಪದಲ್ಲಿ ಪಡೆಯುತ್ತಾರೆ. ಶಾಸಕರು ಸೇವೆ ಸಲ್ಲಿಸುವ ಪ್ರತಿ ಅವಧಿಯ ಬಳಿಕ ಪಂಜಾಬ್‌ನ ಶಾಸಕರಿಗೆ ಪಿಂಚಣಿ ಮೊತ್ತದ ಹೆಚ್ಚುವರಿ 66 ಪ್ರತಿಶತವನ್ನು ನೀಡಲಾಗುತ್ತದೆ.
ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಐದು ಬಾರಿ ಶಾಸಕರಾಗಿರುವ ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಾಲ್ ಅವರು ತಿಂಗಳಿಗೆ ರೂ 3,23,145 ಪಿಂಚಣಿ ಪಡೆಯುತ್ತಾರೆ. (ಒಂದು ಅವಧಿಗೆ ರೂ 75,150 ಮತ್ತು ಪ್ರತಿ ಅವಧಿಯ ನಂತರ ಶೇ 66ಹೆಚ್ಚಳ). ಅದೇ ರೀತಿ, ಕಾಂಗ್ರೆಸ್ ನಾಯಕ ಲಾಲ್ ಸಿಂಗ್ ಮತ್ತು ಮಾಜಿ ಸಚಿವ ಸರ್ವಾನ್ ಸಿಂಗ್ ಫಿಲ್ಲೌರ್ ತಿಂಗಳಿಗೆ 3.23 ಲಕ್ಷ ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯುತ್ತಾರೆ.
Recommended Video
ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬುಧವಾರ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದ್ದಾರೆ. ಈ ಸಹಾಯವಾಣಿಯು ಲಂಚ ಕೇಳುವ ಅಥವಾ ಇತರ ದುಷ್ಕೃತ್ಯಗಳಲ್ಲಿ ತೊಡಗಿರುವ ಅಧಿಕಾರಿಗಳ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆ 9501200200 ಅನ್ನು ಆರಂಭ ಮಾಡಿದ್ದಾರೆ. ಇದನ್ನು "ಭ್ರಷ್ಟಾಚಾರ ವಿರೋಧಿ ಕ್ರಮ" ಎಂದು ಕರೆದಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications