ಲೂಧಿಯಾನ ಸ್ಫೋಟ: ನ್ಯಾಯಾಧೀಶರು, ವಕೀಲರನ್ನು ಬೆದರಿಸುವ ಹುನ್ನಾರ!
ಚಂಡೀಗಢ, ಡಿಸೆಂಬರ್ 25: ಪಂಜಾಬ್ ಲೂಧಿಯಾನ ಕೋರ್ಟ್ ಆವರಣದಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದ ಹಿಂದಿರುವ ಶಂಕಿತ ವ್ಯಕ್ತಿಯು ಮಾಜಿ ಪೊಲೀಸ್ ಆಗಿದ್ದು, ಈತನೇ ಡ್ರಗ್ಸ್ ಕೇಸ್ ಅನ್ನು ಎದುರಿಸುತ್ತಿದ್ದನು ಎಂದು ತಿಳಿದು ಬಂದಿದೆ. ಕೋರ್ಟ್ ಆವರಣದಲ್ಲಿ ನ್ಯಾಯಾಧೀಶರು ಮತ್ತು ವಕೀಲರನ್ನು ಭಯ ಬೀಳಿಸುವ ಉದ್ದೇಶದಿಂದ ಕೃತ್ಯವನ್ನು ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಲೂಧಿಯಾನ ಕೋರ್ಟ್ ಆವರಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಶಂಕಿತ ಗಗನ್ ದೀಪ್ ಸಿಂಗ್ ಮೃತಪಟ್ಟಿದ್ದಾನೆ. ಈತ ಹೆಡ್ ಕಾನ್ಸ್ ಟೆಬಲ್ ಆಗಿದ್ದು, ಮಾದಕ ವಸ್ತು ಕಳ್ಳಸಾಗಾಣಿಕೆ ಪ್ರಕರಣದಲ್ಲಿ 2019ರಲ್ಲಿ ಅಮಾನತುಗೊಂಡಿದ್ದನು. ಅಲ್ಲದೇ ಎರಡು ವರ್ಷಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಿದ್ದ ಗಗನ್ ದೀಪ್ ಸಿಂಗ್, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು.
ಮಾದಕ ವಸ್ತು ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಗನ್ ದೀಪ್ ಸಿಂಗ್ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರು ಮತ್ತು ವಕೀಲರನ್ನು ಬೆಚ್ಚಿ ಬೀಳಿಸುವುದಕ್ಕೆ ಯೋಜನೆ ಹಾಕಿಕೊಂಡಿದ್ದನು ಎಂದು ಪಂಜಾಬ್ ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.

ಸುಧಾರಿತ ಸ್ಫೋಟಕ ಸಾಧಕ ಜೋಡಣೆ ವೇಳೆ ಸ್ಫೋಟ
"ಮಾಜಿ ಹೆಡ್ ಕಾನ್ಸ್‌ಟೆಬಲ್ ನ್ಯಾಯಾಲಯದ ಸ್ನಾನಗೃಹದಲ್ಲಿ ಬಾಂಬ್ ಅನ್ನು ಅಳವಡಿಸುತ್ತಿದ್ದ ಸಂದರ್ಭದಲ್ಲಿ ಅದು ಸ್ಫೋಟಗೊಂಡಿದೆ. ಆದರೆ, ಆರೋಪಿ ಗಗನ್ ದೀಪ್ ಸಿಂಗ್ ಸುಧಾರಿತ ಸ್ಫೋಟಕ ಸಾಧನ ಅಥವಾ ಐಇಡಿ ತಯಾರಿಸಲು ವಸ್ತುಗಳನ್ನು ಎಲ್ಲಿಂದ ಪಡೆದರು ಎಂಬುದು ಇನ್ನೂ ತಿಳಿದಿಲ್ಲ," ಎಂದು ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಇನ್ನು, ಸ್ಫೋಟದ ಸಂದರ್ಭದಲ್ಲಿ ಬಾತ್ ರೂಮ್ ನಲ್ಲಿದ್ದ ನೀರಿನ ಪೈಪ್ ಒಡೆದು ಹೋಗಿದೆ.

ಆರೋಪಿ ಗಗನ್ ದೀಪ್ ಸಿಂಗ್ ಆಪ್ತರನ್ನು ವಶಕ್ಕೆ ಪಡೆದ ಪೊಲೀಸರು
ಲೂಧಿಯಾನ ಕೋರ್ಟ್ ಸ್ನಾನಗೃಹದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಗನ್ ದೀಪ್ ಸಿಂಗ್ ಅವರ ಇಬ್ಬರು ಸ್ನೇಹಿತರು ಹಾಗೂ ಸಹೋದರನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಜೊತೆ ಆರೋಪಿಯ ಮನೆ ಪರಿಶೀಲನೆ ನಡೆಸಿರುವ ಪೊಲೀಸರು ಲ್ಯಾಪ್‌ಟಾಪ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಗಗನ್ ದೀಪ್ ಸಿಂಗ್ ಗೆ ಮಾಫಿಯಾ ಜೊತೆ ನಂಟು
ಕಳೆದ 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. "ಇದು ಅತ್ಯಂತ ಶಕ್ತಿಶಾಲಿ ಸ್ಫೋಟವಾಗಿದ್ದು, ಸ್ಥಳದಲ್ಲಿ ನಮಗೆ ಹಲವು ಪುರಾವೆಗಳು ಸಿಕ್ಕಿವೆ. ಆರಂಭಿಕ ಪರಿಶೀಲನೆಯಲ್ಲಿ ವಜಾಗೊಂಡ ಪೊಲೀಸ್ ಪೇದೆಯು ಸ್ಫೋಟ ನಡೆಸಿರುವ ಬಗ್ಗೆ ತಿಳಿದು ಬಂದಿದೆ. ಆರೋಪಿಯು ಖಲಿಸ್ತಾನಿ ಮತ್ತು ಮಾಫಿಯಾ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿದ್ದರು," ಎಂಬುದು ಗೊತ್ತಾಗಿದೆ. "ಸದ್ಯಕ್ಕೆ ಸ್ಫೋಟದ ಹಿಂದೆ ಪಾಕಿಸ್ತಾನದ ಪಾತ್ರವಿದೆ ಎಂದು ನಾವು ನಿರ್ಣಾಯಕವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಈ ಬಗ್ಗೆ ಅನುಮಾನವಿದೆ. ಈ ದೃಷ್ಟಿಕೋನದಲ್ಲಿ ತನಿಖೆ ನಡೆಸುವ ಬಗ್ಗೆ ಇನ್ನೂ ತೀರ್ಮಾನಿಸಬೇಕಿದೆ" ಎಂದು ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಹೇಳಿದ್ದಾರೆ.

ಗಗನ್ ದೀಪ್ ಮೃತದೇಹ ಗುರುತಿಸಿದ ಕುಟುಂಬ ಸದಸ್ಯರು
ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಆರೋಪಿ ಗಗನ್ ದೀಪ್ ಸಿಂಗ್ ಸಿಮ್ ಕಾರ್ಡ್ ಹಾಗೂ ವೈಯರ್ ಲೆಸ್ ಡೋಂಗಲ್ ಮೂಲಕ ಮೃತದೇಹವನ್ನು ಪತ್ತೆ ಮಾಡುವುದಕ್ಕೆ ಸುಲಭವಾಯಿತು. ಈ ಮೃತದೇಹವು ಆರೋಪಿಯದ್ದೇ ಎಂದು ಕುಟುಂಬ ಸದಸ್ಯರು ಕೂಡ ಗುರುತಿಸಿ ದೃಢಪಡಿಸಿದ್ದಾರೆ.
ಲೂಧಿಯಾನ ಸ್ಫೋಟದಲ್ಲಿ ಪಾಕಿಸ್ತಾನಿ ಏಜೆನ್ಸಿಗಳು ಅಥವಾ ಖಲಿಸ್ತಾನಿ ಗುಂಪುಗಳು ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಬದಲಿಗೆ ಆರೋಪಿಯು ಮಾಜಿ ಸಚಿವ ಬಿಕ್ರಮ್ ಮಜಿಥಿಯಾ ಹೆಸರಿಸಲಾದ ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.












Click it and Unblock the Notifications