
ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು; ಮೋದಿ ಘೋಷಣೆ
ನವದೆಹಲಿ, ಸೆ. 25: ಚಂಡೀಗಢ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ "ಮನ್ ಕಿ ಬಾತ್" ನಲ್ಲಿ ಘೋಷಿಸಿದರು.
ಈ ಕ್ರಮವನ್ನು ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿಯ ಕ್ರಮ ಎಂದು ಹೇಳಲಾಗುತ್ತಿದೆ.
ಚಂಡೀಗಢ ವೈರಲ್ ವಿಡಿಯೋ ಕೇಸ್; ಸ್ನಾನ ಮಾಡುವ ವಿಡಿಯೋ ಕೇಳುತ್ತಿದ್ದ ಸೇನಾ ಸಿಬ್ಬಂದಿ!
"ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವವಾಗಿ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಈಗ ಹುತಾತ್ಮ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಪ್ರಮಾಣವಚನವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಸಾಂಕೇತಿಕ ಗೌರವ ಸಲ್ಲಿಸುವ ಮೂಲಕ ತೆಗೆದುಕೊಂಡಿದ್ದರು. ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಭಗವಂತ್ ಮಾನ್ ಅವರ ಪ್ರಮಾಣವಚನ ಸಮಾರಂಭವನ್ನು ಎಎಪಿ ಆಯೋಜಿಸಿತ್ತು. ಪ್ರಮಾಣವಚನ ಸ್ಥಳವು "ಬಸಂತಿ (ಹಳದಿ)" ಬಣ್ಣದಲ್ಲಿ ಮುಳುಗಿತ್ತು.
ಕ್ರಾಂತಿಯ ಸಂಕೇತವಾಗಿ ಭಗತ್ ಸಿಂಗ್ ಅವರು ಬಸಂತಿ ಪೇಟಗಳನ್ನು ಧರಿಸುತ್ತಿದ್ದರು. ಭಗವಂತ್ ಮಾನ್ ಅವರ ಟ್ರೇಡ್‌ಮಾರ್ಕ್ ಹಳದಿ ಪೇಟ. ಹೀಗಾಗಿ ಅವರ ಪ್ರಮಾಣಕ್ಕೆ "ಬಸಂತಿ ಪೇಟ ಮತ್ತು ದುಪಟ್ಟಾ" ಧರಿಸಲು ಜನರಿಗೆ ನೀಡಿದ ಕರೆಗೆ ಪ್ರತಿಯಾಗಿ ಹಳ್ಳಿಯೇ ಹಳದಿ ಬಣ್ಣದಲ್ಲಿ ಮುಳುಗಿತ್ತು.
ಭಗತ್ ಸಿಂಗ್ ಹುತಾತ್ಮರಾದ ದಿನವಾದ ಮಾರ್ಚ್ 23 ರಂದು ಪ್ರತಿ ವರ್ಷ ಸಾರ್ವಜನಿಕ ರಜೆ ಎಂದು ಘೋಷಿಸಲಾಗುವುದು ಎಂದು ಭಗವಂತ್ ಮಾನ್ ಕೆಲವೇ ದಿನಗಳಲ್ಲಿ ಘೋಷಿಸಿದ್ದರು.

ಈ ಮೊದಲು ಕೂಡ ಇದೇ ಪ್ರಸ್ತಾಪ ಮಾಡಿದ್ದ ಬಿಜೆಪಿ ಸರ್ಕಾರ
ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಮಾಡಿರುವುದು ಇದೇ ಮೊದಲಲ್ಲ. ಬಿಜೆಪಿ ನೇತೃತ್ವದ ಹರಿಯಾಣ ವಿಧಾನಸಭೆಯು 2016ರ ಏಪ್ರಿಲ್‌ನಲ್ಲಿ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿತ್ತು. ಮನವಿಯೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ರಾಜ್ಯ ಸರ್ಕಾರ ಹೇಳಿತ್ತು.
ಬಿಜೆಪಿ ರಾಜ್ಯ ಸರ್ಕಾರದ ಅಂದಿನ ಈ ಕ್ರಮವು ಪಕ್ಕದ ಪಂಜಾಬ್‌ನಲ್ಲಿ ಆಗಿನ ಆಡಳಿತ ಕಾಂಗ್ರೆಸ್ ವಿರುದ್ಧದ ಪವರ್‌ಪ್ಲೇ ಎಂದು ಗ್ರಹಿಸಲಾಗಿತ್ತು. ಮುಂದಿನ ವರ್ಷ, ಅಂದರೆ 2017 ರಲ್ಲಿ, ಹರಿಯಾಣದ ಬಿಜೆಪಿ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರನ್ನು ಇಡಲು ಬಯಸುವುದಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿತ್ತು.

ಮಾಜಿ ಸಿಎಂ ಮಂಗಲ್ ಸೇನ್ ಹೆಸರಿಡಲು ಬಿಜೆಪಿಯ ಆಸಕ್ತಿ; ಕಾಂಗ್ರೆಸ್
ಸಿಪಿಎಂ ಶಾಸಕ ರಿತಬ್ರತಾ ಬ್ಯಾನರ್ಜಿ ಅವರು ಚಂಡೀಗಢ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ ವಿವಾದವಿದೆ ಎಂದು ಹೇಳಿದ್ದರು.
"ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡಲಾಗುವುದು ಎಂದು ಪಂಜಾಬ್ ಸರ್ಕಾರ ಒಪ್ಪಿಕೊಂಡಿದೆ. ಆದರೆ ಹರಿಯಾಣ ಸರ್ಕಾರ, ಹರಿಯಾಣ ಮುಖ್ಯಮಂತ್ರಿ 'ಇಲ್ಲ' ಎಂದು ಹೇಳಿದರು. ಅವರು ವಿಮಾನ ನಿಲ್ದಾಣಕ್ಕೆ ಮಂಗಲ್ ಸೇನ್ ಹೆಸರಿಡಲು ಬಯಸುತ್ತಾರೆ" ಎಂದು ಆರೋಪಿಸಿದ್ದರು.
ಪಕ್ಷದ ಹರಿಯಾಣದ ಮಾಜಿ ಮುಖ್ಯಮಂತ್ರಿ ಮಂಗಲ್ ಸೇನ್ ಅವರ ಹೆಸರನ್ನು ಬಿಜೆಪಿ ಹೆಸರಿಸಲು ಬಯಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದೆ. ಆದರೆ ಬಿಜೆಪಿ ಆರೋಪವನ್ನು ತಳ್ಳಿಹಾಕಿದ್ದು, ತಾವು ಹಾಗೆ ಹೇಳಿಲ್ಲ ಎಂದು ಹೇಳಿದೆ.

ಭಗತ್ ಸಿಂಗ್ ಹೆಸರಲ್ಲಿ ಆಪ್, ಬಿಜೆಪಿ ಜಟಾಪಟಿ
ಹುತಾತ್ಮ ಭಗತ್ ಸಿಂಗ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಪಂಜಾಬ್, ಹರ್ಯಾಣದಲ್ಲಿ ಯುವಜನತೆ ಭಗತ್ ಸಿಂಗ್ ಹೆಸರು ಕೇಳಿದರೇ ರೋಮಾಂಚನಗೊಳ್ಳುತ್ತಾರೆ. ಈ ಅಭಿಮಾನವನ್ನು ಮತಗಳನ್ನಾಗಿ ತಿರುಗಿಸುವಲ್ಲಿ ಆಪ್ ಮತ್ತು ಬಿಜೆಪಿ ಹಲವು ಪ್ರಯತ್ನಗಳನ್ನು ಮಾಡುತ್ತಿವೆ.
ಸೆ.28 ರಂದು ಶಹೀದ್ ಭಗತ್ ಸಿಂಗ್ ಜನ್ಮದಿನವಿದೆ. ಇದರ ಬೆನ್ನಲ್ಲೆ ಪ್ರಧಾನಿ ಮೋದಿ ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವ ನಿರ್ಧಾರ ಘೋಷಿಸಿದ್ದಾರೆ.
485 ಕೋಟಿ ರೂಪಾಯಿ ವೆಚ್ಚದ ವಿಮಾನ ನಿಲ್ದಾಣ ಯೋಜನೆಯು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಮತ್ತು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಜಂಟಿ ಉದ್ಯಮವಾಗಿದೆ.

ಭಗತ್ ಸಿಂಗ್ ಹೆಸರು ಘೋಷಿಸಲು ಪತ್ರ; ಪಂಜಾಬ್ ಸಿಎಂ
ಘೋಷಣೆ ಬೆನ್ನಲ್ಲೇ ಮಾತನಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, "ಹರ್ಯಾಣದ ನಾಗರಿಕ ವಿಮಾನಯಾನ ಸಚಿವ ದುಶ್ಯಂತ್ ಚೌತಾಲಾ ಮತ್ತು ನಾನು ಸೆ.28 ರಂದು ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದ ಮೊದಲು ಮೊಹಾಲಿ-ಚಂಡೀಗಢ ವಿಮಾನ ನಿಲ್ದಾಣವನ್ನು ಹೆಸರಿಸುವಂತೆ ವಾಯುಯಾನ ಸಚಿವಾಲಯಕ್ಕೆ ಪತ್ರವೊಂದನ್ನು ಕಳುಹಿಸಿದ್ದೇವೆ. 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿಯವರು ಮರುನಾಮಕರಣವನ್ನು ಘೋಷಿಸಿದರು, ಅವರಿಗೆ ಧನ್ಯವಾದಗಳು" ಎಂದಿದ್ದಾರೆ.