ಚುನಾವಣೆಗೂ ಮುನ್ನ ಎಎಪಿಗೆ ಆಘಾತ, ರಾಜೀನಾಮೆ ನೀಡಿದ ಹಾಲಿ ಶಾಸಕಿ
ಚಂದೀಗಢ, ನವೆಂಬರ್ 10: 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ ಸಿದ್ಧತೆ ಜೋರಾಗಿ ನಡೆಸಿದೆ. ಈ ನಡುವೆ ಎಎಪಿ ಹಾಲಿ ಶಾಸಕಿಯೊಬ್ಬರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ.
ಭಟಿಂಡಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕಿ ರುಪಿಂದರ್ ಕೌರ್ ರೂಬಿ ಅವರು ಪಕ್ಷದ ಸದಸ್ಯತ್ವ ತೊರೆಯಲು ಮುಂದಾಗಿರುವುದಾಗಿ ಘೋಷಿಸಿ, ಮಂಗಳವಾರದಂದು ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ, ಪಕ್ಷದ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ , ಭಗವಂತ್ ಮಾನ್ ಅವರನ್ನು ಸಂಬೋಧಿಸಿ ತಮ್ಮ ರಾಜೀನಾಮೆ ಬಗ್ಗೆ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದ ತೊರೆಯುತ್ತಿದ್ದೇನೆ ಎಂದು ಈ ಮೂಲಕ ನಿಮಗೆ ತಿಳಿಸಲು ಬಯಸುತ್ತೇನೆ. ದಯವಿಟ್ಟು ನನ್ನ ರಾಜೀನಾಮೆ ಪತ್ರವನ್ನು ಸ್ವೀಕರಿಸಿ, ಸಮ್ಮತಿಸಿ ಎಂದು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತ ಗಳಿಸಿತ್ತು. ಶಿರೋಮಣಿ ಅಕಾಲಿ ದಳ-ಭಾರತೀಯ ಜನತಾ ಪಕ್ಷದ ಮೈತ್ರಿ ಸರ್ಕಾರವನ್ನು ಕೆಳಗಿಳಿಸಿ, ದಶಕದ ಬಳಿಕ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪೈಪೋಟಿ ನೀಡಿದ್ದ ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನ ಗಳಿಸಿತ್ತು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ 20 ಸ್ಥಾನ ಪಡೆದುಕೊಂಡಿತ್ತು. ಶಿರೋಮಣಿ ಅಕಾಲಿ ದಳಕ್ಕೆ 15 ಕ್ಷೇತ್ರದಲ್ಲಿ ಮಾತ್ರ ಗೆಲುವು ಲಭಿಸಿದ್ದರೆ, ಬಿಜೆಪಿ 3 ಸ್ಥಾನ ಗೆದ್ದುಕೊಂಡಿತ್ತು.
2022ರಲ್ಲಿ ಪಂಚರಾಜ್ಯ ಚುನಾವಣೆ:
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಯು ನಡೆಯಲಿದೆ. ಈ ಪಂಚ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ರಾಜ್ಯಗಳು ಬಿಜೆಪಿ ಆಡಳಿತ ಇರುವ ರಾಜ್ಯವಾದರೆ, ಪಂಜಾಬ್ ಮಾತ್ರ ಕಾಂಗ್ರೆಸ್ ಆಡಳಿತವಿರುವ ರಾಜ್ಯವಾಗಿದೆ.
2022 ರ ವಿಧಾನಸಭೆ ಚುನಾವಣೆ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಸರಿಸುಮಾರು ವರ್ಷಗಳ ಕಾಲ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರವನ್ನು ಪಂಜಾಬ್ ರಾಜ್ಯದವರು ವಹಿಸಿಕೊಂಡಿದ್ದಾರೆ. ಪಂಜಾಬ್‌ನಿಂದ ಅದೆಷ್ಟೋ ಕುಟುಂಬವು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲು ದೆಹಲಿಯತ್ತ ದೌಡಾಯಿಸಿದೆ. ಈ ನಡುವೆ ಪಂಜಾಬ್ ಸರ್ಕಾರವು ರೈತರಿಗೆ ಬೆಂಬಲ ಸೂಚಿಸಿದೆ. ಈ ನಡುವೆ ಕೇಂದ್ರದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಶಿರೋಮಣಿ ಅಕಾಳಿ ದಳವು ಮೈತ್ರಿ ಕೂಟದಿಂದ ಹೊರ ಬಂದಿದೆ.
ಎಬಿಪಿ-ಸಿವೋಟರ್ ಸಮೀಕ್ಷೆ:
ರೈತ ಪ್ರತಿಭಟನೆ ಹಾಗೂ ಇತರೆ ರಾಜಕೀಯ ಸಮೀಕರಣದ ಬಳಿಕ ಪಂಜಾಬ್‌ನ ರಾಜಕೀಯ ಚಿತ್ರಣ ಬದಲಾಗುತ್ತಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ ಇದೀಗ ಅಧಿಕಾರ ಚುಕ್ಕಾಣಿಯ ಸನಿಹದಲ್ಲಿ ಬಂದು ನಿಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
117 ಕ್ಷೇತ್ರಗಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಎಎಪಿ 25 ರಿಂದ 55ಕ್ಕೆ ಏರಲಿದೆ. ಕಾಂಗ್ರೆಸ್ 77 ರಿಂದ 42ಕ್ಕೆ ಕುಸಿಯಲಿದೆ. ಹಾಗೂ ಶಿರೋಮಣಿ ಅಕಾಲಿದಳ 15 ರಿಂದ 20ಕ್ಕೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ.
ಮತ ಪ್ರಮಾಣವನ್ನು ಹೋಲಿಸಿದಾಗ ಕಾಂಗ್ರೆಸ್ ಶೇ.9.7ರಷ್ಟು ಮತವನ್ನು ಕಳೆದುಕೊಂಡು 28.8 ಮತ ಗಳಿಕೆ ಮಾಡಬಹುದು. ಶಿರೋಮಣಿ ಅಕಾಲಿದಳ ಶೇ.21.8 ಹಾಗೂ ಎಎಪಿ ಶೇ.35.1 ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.
ಇನ್ನೊಂದೆಡೆ ಬಿಜೆಪಿ ಸೀಟುಗಳಲ್ಲಿ ಶೂನ್ಯ ಗಳಿಕೆಯಾದರೂ ಶಿರೋಮಣಿ ಅಕಾಲಿದಳ ಮೈತ್ರಿಕೂಟದಿಂದ ಹೊರಬಂದಿರುವುದಕ್ಕೆ ಶೇ.5.4 ರಿಂದ ಶೇ.7.3ಕ್ಕೆ ಮತ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.