ಧನಗೆರೆ ಗ್ರಾಮದಲ್ಲಿ ವಿಷಸೇವಿಸಿದ ಯುವತಿ ಸುತ್ತ ಸಂಶಯದ ಹುತ್ತ!
ಚಾಮರಾಜನಗರ, ಡಿಸೆಂಬರ್ 05: ಯುವತಿಯೊಬ್ಬಳು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯೊಂದು ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದಲ್ಲಿ ನಡೆದಿದ್ದು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಇದೀಗ ಹೇಳುತ್ತಿರುವ ಹೇಳಿಕೆಗಳು ಸಂಶಯವನ್ನು ಹುಟ್ಟು ಹಾಕಿದೆ.
ಧನಗೆರೆ ಗ್ರಾಮದ ಮಾದಯ್ಯನವರ ಪುತ್ರಿ ಮಾನಸ (22) ಎಂಬಾಕೆಯೇ ವಿಷ ಸೇವಿಸಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನತದೃಷ್ಟೆ. ಈ ಹಿಂದೆ ಲ್ಯಾಬ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಅಲ್ಲಿಂದ ಆಕೆಯನ್ನು ಕೆಲಸದಿಂದ ಬಿಡಿಸಲಾಗಿತ್ತು. ಇದೀಗ ಈಕೆ ವಿಷ ಸೇವಿಸಿದ್ದು, ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆದರೆ ಯುವತಿ ಮಾತ್ರ ವಿಷ ಸೇವನೆಗೆ ತನ್ನ ಗೆಳತಿ ಶ್ವೇತಾ ಕಾರಣ ಎನ್ನುತ್ತಿದ್ದಾಳೆ. ಆಕೆ ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ "ನಾನು ಏಕೆ ವಿಷ ತೆಗೆದುಕೊಂಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾವುದೇ ತೊಂದರೆ ಇಲ್ಲ. ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಅಷ್ಟು ಮಾತ್ರ ಗೊತ್ತು.

ನಾನು ಮತ್ತು ನನ್ನ ಸ್ನೇಹಿತೆ ಶ್ವೇತಾ ಬೆಂಗಳೂರಿನಲ್ಲಿ ಒಟ್ಟಿಗೆ ತರಬೇತಿ ಪಡೆಯುತ್ತಿದ್ದೆವು. ಅವಳು ನಮ್ಮ ಮನೆಗೆ ಬಂದು ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ. ವಿಷ ತಂದಿದ್ದೇನೆ. ನೀನು ಮೊದಲು ಕುಡಿ, ನಂತರ ನಾನು ಕುಡಿಯುತ್ತೇನೆ ಎಂದು ಹೇಳಿ ನನಗೆ ವಿಷ ಕುಡಿಸಲು ಬಂದಳು.
ನಾನು ಬೇಡವೆಂದರೂ ಬಲವಂತವಾಗಿ ನನ್ನ ಕುತ್ತಿಗೆ ಹಿಡಿದು ಜ್ಯೂಸ್ ನ ಜೊತೆಯಲ್ಲಿ ಬೆರೆಸಿದ್ದ ವಿಷವನ್ನು ಕುಡಿಸಿದಳು. ತಾನು ಮಾತ್ರ ಕುಡಿಯದೆ ನನ್ನನ್ನು ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ, ನನ್ನ ಪಕ್ಕದಲ್ಲೇ ಕೂತ್ತಿದ್ದು, ನಂತರ ಇಲ್ಲಿಂದ ಮಾಯವಾಗಿದ್ದಾಳೆ. ಆಸ್ಪತ್ರೆಯ ಆವರಣದಲ್ಲೇ ಇದ್ದಾಳೆ" ಎಂದು ವೈದ್ಯರಿಗೆ ತಿಳಿಸಿದ್ದಾಳೆ.
ಈ ಸಂಬಂಧ ಯುವತಿ ಮಾನಸಳ ತಾಯಿಯನ್ನು ಕರೆದು ಶ್ವೇತಾಎನ್ನುವ ಇವಳ ಗೆಳತಿ ಎಲ್ಲಿದ್ದಾಳೆ ಕರೆತನ್ನಿ ಎಂದು ವೈದ್ಯರು ಹೇಳಿದಾಗ ಅವಳ ಗೆಳತಿ ಶ್ವೇತಾ ಸತ್ತು ಹೋಗಿರುವ ವಿಷಯ ಬೆಳಕಿಗೆ ಬಂದಿದೆ. ಇದರಿಂದ ವೈದ್ಯರು ಪೀಕಲಾಟದಲ್ಲಿ ಸಿಲುಕಿದ್ದಾರೆ. ಯುವತಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು ಹೀಗಾಗಿ ಈ ರೀತಿ ವರ್ತಿಸುತ್ತಿರಬೇಕೆಂದು ಹೇಳಲಾಗಿದೆ.
ಸದ್ಯ ಯುವತಿಯ ಆರೋಗ್ಯ ಸುಧಾರಿಸಿದ ಬಳಿಕ ನಿಮಾನ್ಸ್ ನಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸೆ ನೀಡುವಂತೆ ಪೋಷಕರಿಗೆ ಸಲಹೆ ನೀಡಲಾಗಿದೆ.












Click it and Unblock the Notifications