Male Mahadeshwara Hills: ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ವೇಳೆ ಕಾಡಾನೆ ದಾಳಿ, ಮಹಿಳೆ ಸಾವು
ಚಾಮರಾಜನಗರ, ಏಪ್ರಿಲ್ 10: ಪಾದಯಾತ್ರೆಯ ಮೂಲಕ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಜರುಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಲ್ಲೇಗಾಳ ಗ್ರಾಮದ ಲಕ್ಷ್ಮಿ(36) ಮೃತಪಟ್ಟ ದುರ್ದೈವಿ.
ಯುಗಾದಿ ಹಬ್ಬದ ದಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಿಂದ ಸುಮಾರು 20ಕ್ಕೂ ಹೆಚ್ಚು ಜನರು ಗೂಡ್ಸ್ ವಾಹನದಲ್ಲಿ ಮಲೆಮಾದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ತಾಳು ಬೆಟ್ಟದಲ್ಲಿ ಸುಮಾರು 15ಕ್ಕೂ ಹೆಚ್ಚು ಪಾದಯಾತ್ರೆಗಳು ಹೋಗುತ್ತಿರುವುದನ್ನು ಗಮನಿಸಿದ ಇವರು ಸಹ ಪಾದಯಾತ್ರೆಯ ಮೂಲಕ ಹೋಗುವುದಕ್ಕೆ ತೀರ್ಮಾನಿಸಿ ಅವರ ಜೊತೆಯಲ್ಲಿಯೇ ಪಾದಯಾತ್ರೆ ಹೊರಟಿದ್ದಾರೆ.

ಪಾದಯಾತ್ರೆಯ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಹಾಲಹಳ್ಳ ಸಮೀಪ ಲಕ್ಷ್ಮಿಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂತರ ಗಾಬರಿಕೊಂಡ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತ ಲಕ್ಷ್ಮಿ ಮೃತದೇಹವನ್ನು ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಈ ಸಂಬಂಧ ಮೃತರ ಸಹೋದರಿ ಪದ್ಮ, ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications