ಸೋಮಣ್ಣಗೆ ಸೋಲುಣಿಸಿದ ಪುಟ್ಟರಂಗಶೆಟ್ಟಿಗೆ ಸಿದ್ದರಾಮಯ್ಯನ ಸಂಪುಟದಲ್ಲಿ ಸಿಗುತ್ತಾ ಸಚಿವ ಸ್ಥಾನ?, ಮೂಲಗಳು ಹೇಳುವುದೇನು?
ಚಾಮರಾಜನಗರ, ಮೇ, 18: ಬಿಜೆಪಿ ಪ್ರಭಾವಿ ಮುಖಂಡ, ಲಿಂಗಾಯತ ಸಮುದಾಯದ ನಾಯಕ ವಿ.ಸೋಮಣ್ಣ ಅವರನ್ನು ಸೋಲಿಸಿ ಚಾಮರಾಜನಗರದಲ್ಲಿ ಸತತ ನಾಲ್ಕನೇ ಬಾರಿ ಶಾಸಕರಾಗಿರುವ ಸಿ.ಪುಟ್ಟರಂಗಶೆಟ್ಟಿಗೆ ಮಂತ್ರಿ ಪಟ್ಟ ಒಲಿಯಲಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ.
ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಚಾಮರಾಜನಗರದ ಮೂವರು ಕಾಂಗ್ರೆಸ್ ಶಾಸಕರಲ್ಲಿ 68ರ ಹರೆಯದ ಪುಟ್ಟರಂಗಶೆಟ್ಟಿ ಹಿರಿಯ ಶಾಸಕರಾಗಿದ್ದು, ಇವರು ಉಪ್ಪಾರ ಜಾತಿಯ ರಾಜ್ಯದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಸಂಪುಟದಲ್ಲಿ ಇವರು ಸ್ಥಾನ ಗಿಟ್ಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪುಟ್ಟರಂಗಶೆಟ್ಟಿ ಕಾಂಗ್ರೆಸ್‌ನಲ್ಲಿ ಗಮನ ಸೆಳೆದಿದ್ದು ಹೇಗೆ?
ಸಿ.ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರಾಗಿದ್ದು, ಇವರು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಈಗಲೂ ನನಗೇ ಸಿದ್ದರಾಮಯ್ಯನೇ ಸಿಎಂ ಎನ್ನುವ ಮೂಲಕ ಗಮನ ಸೆಳೆದಿದ್ದರು. ಕ್ಷೇತ್ರ ಹುಡುಕಾಟದ ವೇಳೆ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ ಎಂದು ಆಹ್ವಾನ ಕೊಟ್ಟಿದ್ದರು.
ಅಲ್ಲದೆ ಸಿದ್ದರಾಮಯ್ಯ ಆಪ್ತ ಬಳಗದ ಶಾಸಕರಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಿದ್ದರಾಮಯ್ಯ ಮಣೆ ಹಾಕುವುದು ನಿಶ್ಚಿತ ಅಂತಾ ಹೇಳಲಾಗುತ್ತಿದೆ. ಚಾಮರಾಜನಗರಕ್ಕೆ ಪ್ರಾತಿನಿಧ್ಯ ಕೊಡಬೇಕಾಗಿರುವುದರಿಂದ ಜೊತೆಗೆ, ಹಿಂದುಳಿದ ವರ್ಗ ಉಪ್ಪಾರ ಸಮುದಾಯಕ್ಕೂ ಆದ್ಯತೆ ಕೊಡಬೇಕಿರುವುದರಿಂದ ಪುಟ್ಟರಂಗಶೆಟ್ಟಿಗೆ ಮಂತ್ರಿ ಭಾಗ್ಯ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ.
ಸೋಲಿಲ್ಲದ ಸರದಾರನ ಪಟ್ಟ
ಹಳೇ ಮೈಸೂರು ಭಾಗದಲ್ಲಿ ಚಾಮರಾಜನಗರ ಕಳೆದ 4 ಸಾಲಿನಿಂದ ಕಾಂಗ್ರೆಸ್ ಭದ್ರಕೋಟೆ ಆಗಿದ್ದು, ಕ್ಷೇತ್ರದಲ್ಲಿ ಸತತವಾಗಿ 4 ಬಾರಿ ಗೆದ್ದ ಮೊದಲ ಶಾಸಕರಾಗಿದ್ದಾರೆ. ಈ ಮೂಲಕ ಸೋಲಿಲ್ಲದ ಸರದಾರ ಅಂತಲೂ ಕರೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸಿ.ಪುಟ್ಟರಂಗಶೆಟ್ಟಿ ಅವರು ವಿ.ಸೋಮಣ್ಣ ಅವರನ್ನು ಸೋಲಿಸಿ ಎರಡನೇ ಬಾರಿ ಸಚಿವರಾಗುವ ಉತ್ಸಾಹದಲ್ಲಿದ್ದಾರೆ.
ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ
ಇನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಚಾಮರಾಜನಗರದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಇತ್ತೀಚೆಗಷ್ಟೇ ಕಾರ್ಯಕರ್ತರ ಕೃತಜ್ಞತಾ ಸಭೆ ನಡೆಸಿದ್ದರು. ಭಾಷಣದ ವೇಳೆ ತಮ್ಮ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ ಎಂದು ಆರೋಪಿಸಿದ ಸೋಮಣ್ಣ, ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೀರಿ ಎಂದು ಕಿಡಿಕಾರಿದ್ದರು.
"ಕೆಲ ಲೋಫರ್ ನನ್ ಮಕ್ಕಳು ಈ ಪಾಪದ ಕೆಲಸ ಮಾಡಿದ್ದಾರೆ. 7-8 ಮಂದಿಯಿಂದ ಈ ಸೋಲುಂಟಾಯಿತು, ನನ್ನ ಸಮಾಜದವರೇ ನನಗೆ ಕೈ ಕೊಟ್ಟರು. ಯಾರ್ಯಾರೋ ಬೋರ್ಡ್ ಅಧ್ಯಕ್ಷರು ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು" ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿದ್ದರು.
"ಈಗ ಅವರು ಒಳೇಟು ಕೊಟ್ಟರು, ಇವರು ಒಳೇಟು ಕೊಟ್ಟರು, ಕ್ರಮ ಕೈಗೊಳ್ಳಿ ಎನ್ನುತ್ತಿದ್ದೀರಿ. ಈ ಕೆಲಸವನ್ನು 6 ತಿಂಗಳ ಹಿಂದೆ ಮಾಡಬೇಕಿತ್ತು. ಆಗ ಮಾಡಲಿಲ್ಲ- ಈಗ ಮಾಡಿ ಎನ್ನುತ್ತಿದ್ದೀರಿ. ನಾನು ನಿಮ್ಮನ್ನು ನಂಬಿಕೊಂಡಿದ್ದೆ ತಪ್ಪಾಯಿತು. ಮಾದೇಶ್ವರನ ಅಣೆ, ನನ್ನ ಮಕ್ಕಳಾಣೆ ನಾನಾಗಿ ಇಲ್ಲಿಗೆ ಬರಲಿಲ್ಲ. ಹೈಕಮಾಂಡ್ ಹೇಳಿದ್ದರಿಂದ ಚಿನ್ನ ದಂತಹ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಇಲ್ಲಿಗೆ ಬಂದೆ," ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಮಾತು ಮುಂದುವರಿಸಿದ ಅವರು, ಪಕ್ಷ ತಾಯಿಗೆ ಸಮಾನ ಪಕ್ಷ ದೊಳಗಿದ್ದು ದ್ರೋಹ ಬಗೆಯುವುದು ಎಷ್ಟರಮಟ್ಟಿಗೆ ಸರಿ? ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಅವರಿಗೆ ನೈತಿಕತೆ ಇದ್ದರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಒದ್ದು ಓಡಿಸಿ ಎಂದು ಆಗ್ರಹಿಸಿದ್ದರು. ಕೆಲವರು ಮನಸ್ಸು ಬಿಚ್ಚಿ ಮುಕ್ತ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ದೊಡ್ಡ ಸ್ಥಾನಕ್ಕೆ ಸೋಮಣ್ಣ ಹೋಗುತ್ತಾರೆ ಎಂದಿದ್ದೆ ಮುಳುವಾಯಿತು ಎಂದು ಪಕ್ಷದ ಕೆಲ ಮುಖಂಡರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.












Click it and Unblock the Notifications