ಗೋಪಾಲಸ್ವಾಮಿ ಬೆಟ್ಟದ ಕಡೆಕೋಟಿಯಲ್ಲಿ ಕಾಡಾನೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಚಾಮರಾಜನಗರ, ಜನವರಿ 11: ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಹಾಗೂ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಭಿಮನ್ಯು ಆನೆ ಮತ್ತು ಇತರ ಆನೆಗಳ ಸಹಾಯದಿಂದ ಸೆರೆ ಹಿಡಿದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
ಕಡೆಕೋಟಿ ಪ್ರದೇಶದಲ್ಲಿ ರೈತರ ಬೆಳೆ ನಾಶ ಮಾಡುವುದರ ಜೊತೆಗೆ ಜನರ ಮೇಲೆ ದಾಳಿ ಮಾಡಲು ಮುಂದಾಗುತ್ತಿದ್ದ, ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ರೈತರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ 2022 ಡಿಸೆಂಬರ್ 21ರಂದು ಮೇಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಡಿಸೆಂಬರ್ 30 ರಂದು ಕಾಡಾನೆ ಸೆರೆಗೆ ಅನುಮತಿ ಪಡೆಯಲಾಗಿತ್ತು. ಆನೆಯ ಚಲನ-ವಲನ ಪರಿಶೀಲಿಸಿ ಜನವರಿ 8 ರಂದು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗಿತ್ತು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಾಕಾನೆಗಳಾದ ಕೂಂಬಿಂಗ್ ಆಪರೇಷನ್ ಸ್ಪೆಷಲಿಸ್ಟ್ ಅಭಿಮನ್ಯು ಮಹೇಂದ್ರ, ಗಣೇಶ ಮತ್ತು ಭೀಮ ಆನೆಗಳನ್ನು ನಿಯೋಜನೆ ಮಾಡಿಕೊಂಡು ನುರಿತ ಪಶು ವೈಧ್ಯಾಧಿಕಾರಿಗಳಾದ ಡಾ.ಮಿರ್ಜಾವಾಸಿಂ, ಡಾ.ರಮೇಶ್ ಹಾಗೂ ಡಾ. ಮುಜೀಬ್ ರೆಹಮಾನ್ ಹಾಗೂ ಸಹಾಯಕರನ್ನು ಬಳಸಿಕೊಂಡು ಕಾರ್ಯಚರಣೆ ಕೈಗೊಳ್ಳಲಾಗಿತ್ತು.
ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸತತ ಪರಿಶ್ರಮದಿಂದ ರೇಡಿಯೋ ಕಾಲರ್ ಅಳವಡಿಸಿದ್ದ ಕಾಡಾನೆಯನ್ನು ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ರೇಡಿಯೋ ಕಾಲರ್ ಅಳವಡಿಸಿರುವ ಪುಂಡಾನೆಯನ್ನು ಬಂಡೀಪುರ ವಿಭಾಗ ವ್ಯಾಪ್ತಿಯ ಐನೂರು ಮಾರಿಗುಡಿ ವಲಯದ ರಾಂಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಅಭಿಮನ್ಯು ಹಾಗೂ ಇತರ ಆನೆಗಳು, ಕಾಡಾನೆಯನ್ನು ತಪ್ಪಿಸಿಕೊಳ್ಳದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಕಾಡಾನೆ ಸೆರೆಯಾಗಿದೆ. ಪುಂಡಾನೆಯ ಕಾಟದಿಂದ ಹೈರಾಣಾಗಿದ್ದ ರೈತರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications