ಬಂಡೀಪುರದಲ್ಲಿ ಕೊನೆಗೂ ಸೆರೆಸಿಕ್ಕ ಕಾಡಾನೆ
ಚಾಮರಾಜನಗರ, ಮೇ, 07: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ರೈತರಿಗೆ ಉಟಪಳ ಕೊಡುತ್ತಿದ್ದ ಆನೆಯನ್ನು ನಿರಂತರ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ (ಮೇ 07) ಬೆಳಗ್ಗೆ ಸೆರೆ ಹಿಡಿದಿದ್ದಾರೆ.
ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಹಿಂಭಾಗದ ಪ್ರದೇಶದಲ್ಲಿ ರಾಂಪುರ ಆನೆ ಶಿಬಿರದ ಪಾರ್ಥಸಾರಥಿ, ಗಣೇಶ ಹಾಗೂ ದುಬಾರೆ ಆನೆ ಶಿಬಿರದ 4 ಆನೆಗಳ ಸಹಾಯದಿಂದ 45 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸೆರೆ ಹಿಡಿಯಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅಭಯಾರಣ್ಯದ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಹಿರೀಕೆರೆ ಭಾಗದಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆಯವರು ಕಳೆದ ಏಪ್ರಿಲ್ 15ರಲ್ಲಿ ಕೂಂಬಿಂಗ್ ಆರಂಭಿಸಿದ್ದರು. ಬಳಿಕ, ಸೆರೆ ಕಾರ್ಯಾಚರಣೆ ನಿಲ್ಲಿಸಿದ್ದರು. ಅದಾದ ನಂತರ, ಕಳೆದ 10 ದಿನಗಳಿಂದ ಪುಂಡಾನೆ ಸೆರೆಗೆ ಮತ್ತೇ ಕಾರ್ಯಾಚರಣೆ ಆರಂಭಿಸಿ ಕೊನೆಗೂ ಯಶಸ್ಸು ಕಂಡಿದ್ದಾರೆ.
ಮಾರ್ಚ್ 10ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರಕ್ಕೆ ಭೇಟಿ ನೀಡಿದ್ದ ವೇಳೆ ಹಂಗಳ ಗ್ರಾಮದ ಮಾಧು ಹಾಗೂ ಇತರೆ ರೈತರು ಪುಂಡಾನೆ ಸೆರೆಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಆನೆ ಸೆರೆಗೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಕುರಿತು, ಬಂಡೀಪುರ ಸಿಎಫ್ಒ ಪ್ರಭಾಕರನ್ ಮಾಹಿತಿ ನೀಡಿದ್ದು, ಆನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆನೆಗೆ 40 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications