ಪುನೀತ್ ರಾಜ್‌ಕುಮಾರ್ ಬಳಿಕ ಚಾಮರಾಜನಗರ ರಾಯಭಾರಿ ಯಾರು? ಜಿಲ್ಲಾಡಳಿತದ ನಿಲುವೇನು?
ಚಾಮರಾಜನಗರ, ಆಗಸ್ಟ್, 08: ಚಾಮರಾಜನಗರ ಪ್ರವಾಸೋದ್ಯಮ ಉತ್ತೇಜಿಸಲು ಚೆಲುವ ಚಾಮರಾಜನಗರ ಎಂದು ಬ್ರಾಂಡ್ ಮಾಡಿದ್ದ ಯೋಜನೆಗೆ ಇದೀಗ ಮರುಜೀವ ಸಿಗುತ್ತಿದ್ದು, ಮತ್ತೇ ರೀ ಲಾಂಚ್ ಆಗುತ್ತಿದೆ. ಹಾಗಾದರೆ ಇದಕ್ಕೆ ನಟ ಡಾ.ಪುನೀತ್ ರಾಜ್‌ಕುಮಾರ್ ಬಳಿಕ ಇದೀಗ ರಾಯಬಾರಿಯಾಗಿ ಯಾರನ್ನು ನೇಮಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ ಎಂದು ಇಲ್ಲಿ ತಿಳಿಯಿರಿ.
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಆಗಸ್ಟ್ 10ರಂದು ನಡೆಯಲಿರುವ ಭರಚುಕ್ಕಿ ಜಲಪಾತೋತ್ಸವ ದಿನದಂದೇ ಚೆಲುವ ಚಾಮರಾಜನಗರ ಎಂಬ ಬ್ರಾಂಡ್‌ನ ಲೋಗೋ ಮತ್ತು ಭರಚುಕ್ಕಿ ಜಲಪಾತದ ಲೋಗೋ ಬಿಡುಗಡೆ ಮಾಡಲಾಗುತ್ತಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿಸಬೇಕು ಎಂಬುದು ಇದರ ಉದ್ದೇಶ ಆಗಿದೆ.

ಚಾಮರಾಜನಗರ ರಾಯಭಾರಿಯಾಗಿದ್ದ ಪುನೀತ್ ರಾಜ್ ಕುಮಾರ್: ಚೆಲುವ ಚಾಮರಾಜನಗರ ಮೂಲಕ ಚಾಮರಾಜನಗರವನ್ನು ಬ್ರಾಂಡ್ ಮಾಡಬೇಕು ಎಂದು ಹೊರಟಾಗ ಗಡಿಜಿಲ್ಲೆಯವರೇ ನಟ ಪುನೀತ್ ರಾಜ್‌ಕುಮಾರ್ ಅವರನ್ನು ರಾಯಭಾರಿಯಾಗಿ ಮಾಡಲಾಗಿತ್ತು. ಅಪ್ಪು ಕೂಡ ಸಂತೋಷದಿಂದಲೇ ಒಪ್ಪಿ ಚೆಲುವ ಚಾಮರಾಜನಗರ-ಹುಲಿಗಳ ನಾಡು ಎಂಬ ವೀಡಿಯೋಗೆ ಸಂದೇಶವನ್ನು ಕೊಟ್ಟು ಎಲ್ಲರೂ ಚಾಮರಾಜನಗರಕ್ಕೆ ಬಂದು ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಿ ಎಂದು ಕರೆ ಕೊಟ್ಟಿದ್ದರು.
ಅದರೆ, ಅಪ್ಪು ನಿಧನರಾದ ಬಳಿಕ ಬ್ರಾಂಡ್ ಚಾಮರಾಜನಗರ ಕೂಡ ಹಳ್ಳ ಹಿಡಿದಿದ್ದು, ಇದೀಗ ಮತ್ತೆ ರೀ ಲಾಂಚ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇನ್ನು ಸೂಕ್ತ ರಾಯಭಾರಿಗಾಗಿ ಜಿಲ್ಲಾಡಳಿತ ಹುಡುಕಾಟ ಮುಂದುವರೆಸಿದೆ.
ರಾಯಭಾರಿಗೆ ಹುಡುಕಾಟ: ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು, ಮೈಸೂರು ದೂರದ ಊರಿನಿಂದ ಬಂದವರು ಒಂದು ದಿನ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವಂತಹ, ಸಾಹಸ ಕ್ರೀಡೆ, ದೇಗುಲ ದರ್ಶನ, ಪ್ರಕೃತಿ ದರ್ಶನ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ತಟಸ್ಥ ನಿಲುವಿನ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ, ಚಾಮರಾಜನಗರ ಜಿಲ್ಲೆಯವರೇ ಆದವರನ್ನು ಹುಡುಕಾಟ ನಡೆಸುತ್ತಿದ್ದು, ಇನ್ನು ಇದು 15 ದಿನಗಳಲ್ಲಿ ಅಂತಿಮ ಆಗಲಿದೆ ಎಂದು ತಿಳಿಸಿದರು.
ಅಪ್ಪು ಹೇಳಿದ್ದೇನು ಗೊತ್ತಾ?: ಈ ಹಿಂದೆ ಚಾಮರಾಜನಗರ ರಾಯಭಾರಿಯಾಗಿ ಮಾತನಾಡಿದ್ದ ಪುನೀತ್ ರಾಜ್‌ಕುಮಾರ್ ಅವರು, "ಚಾಮರಾಜನಗರ ಜಿಲ್ಲೆಯೊಂದಿಗೆ ನಮ್ಮದು ಭಾವನಾತ್ಮಕ ಸಂಬಂಧವಾಗಿದೆ. ನಮ್ಮ ತಂದೆ ಅವರು ಹುಟ್ಟಿ ಬೆಳೆದ ಜಿಲ್ಲೆ ಚಾಮರಾಜನಗರ. ಇಲ್ಲಿನ ಅಭಿವೃದ್ಧಿ ರಾಯಭಾರಿಯಾಗಿ ಕೆಲಸ ಮಾಡುವುದು ನಿಜಕ್ಕೂ ನನ್ನ ಸೌಭಾಗ್ಯ. ರಾಜ್ಯದ ಎಲ್ಲ ಜಿಲ್ಲೆಗಳು ಅಭಿವೃದ್ಧಿಯಾಗಿ ರಾಜ್ಯ ಪೂರ್ಣ ಅಭಿವೃದ್ಧಿಯಾಗಬೇಕಿದೆ," ಎಂದಿದ್ದರು.
"ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಚಾಮರಾಜನಗರ ಜಿಲ್ಲೆ ಜೀವಂತ ಸಂಸ್ಕೃತಿಗೆ ಹೆಸರಾಗಿದೆ. ಸಿದ್ಧ ಪುರುಷರ ನಾಡು ಹಾಗೂ ಜಾನಪದ ಕಲೆಗಳ ತವರೂರು ಎಂದೇ ಪ್ರಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ. ಇದು ಆರಂಭದ ಹೆಜ್ಜೆ," ಎಂದು ಹೇಳಿದ್ದರು.
ಬಳಿಕ ಮಾತನಾಡಿದ್ದ ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್, "ಚಾಮರಾಜನಗರ ಜಿಲ್ಲೆ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುವಂತೆ ಸಮಗ್ರ ಅಭಿವೃದ್ದಿಯೊಂದಿಗೆ ಜಿಲ್ಲೆಯನ್ನು ಚಂದಗಾಣಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪುನೀತ್ ರಾಜ್‌ಕುಮಾರ್ ಅಭಿವೃದ್ಧಿ ರಾಯಭಾರಿಯಾಗಿ ಸೇವೆ ಸಲ್ಲಿಸುವುದರಿಂದ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಇತರೆ ಕ್ಷೇತ್ರಗಳ ಪ್ರಗತಿಯಾಗಿ ಜಿಲ್ಲೆಯ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಾಗಲಿದೆ," ಎಂದು ಹೇಳಿದ್ದರು.












Click it and Unblock the Notifications