ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗ ನಾಯಕರ ನಡುವೆ ಜಿದ್ದಾಜಿದ್ದಿ: ಮತದಾರರ ಒಲವು ಯಾರ ಕಡೆ..?

ಮೈಸೂರು, ಜನವರಿ 5: ಮೈಸೂರಿನ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಚಾಮರಾಜ ಕ್ಷೇತ್ರದತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಹಿಂದೆ ಶಂಕರಲಿಂಗೇಗೌಡರು ಪ್ರತಿನಿಧಿಸುತ್ತಿದ್ದ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿಯೇ ಉಳಿದಿತ್ತು. ಅವರ ನಿಧನದ ನಂತರ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿತ್ತಾದರೂ ಇದೀಗ ಮತ್ತೆ ಬಿಜೆಪಿಯ ಹಿಡಿತದಲ್ಲಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಯಾರ ಪಾಲಾಗುತ್ತದೆ ಎನ್ನುವುದು ಇದೀಗ ಕುತೂಹಲಕಾರಿಯಾಗಿದೆ. ಕಾರಣ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿದ್ದರೆ, ಜೆಡಿಎಸ್ ಕ್ಷೇತ್ರದಲ್ಲಿ ಖಾತೆ ತೆರೆಯಲು, ಕಾಂಗ್ರೆಸ್ ಅಸ್ಥಿತ್ವ ಮರುಸ್ಥಾಪನೆಗಾಗಿ ಹೋರಾಟ ನಡೆಸುತ್ತಿವೆ. ಒಟ್ಟಾರೆ ಮೂರು ಪಕ್ಷಗಳು ಕ್ಷೇತ್ರದಲ್ಲಿ ಪೈಪೋಟಿ ನೀಡಲು ಸಜ್ಜಾಗುತ್ತಿರುವುದರಿಂದ ಹೈವೊಲ್ಟೇಜ್ ಕ್ಷೇತ್ರವಾಗಲಿದೆ.

ಸದ್ಯ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಬೇಕೆಂದು ಹಲವರು ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದರೂ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಕಸಿದು ಕೊಳ್ಳಬೇಕಾದರೆ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಜೆಡಿಎಸ್ ನಾಯಕರು ಪ್ರಬಲ ಮತ್ತು ಅರ್ಹ ವ್ಯಕ್ತಿಗೆ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ಬಿಜೆಪಿಯ ನಾಗೇಂದ್ರ ಇರುವುದರಿಂದ ಬಿಜೆಪಿಯಿಂದ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಕ್ಷೇತ್ರದಲ್ಲಿ ಖಾತೆ ತೆರೆಯದ ಜೆಡಿಎಸ್

ಕ್ಷೇತ್ರದಲ್ಲಿ ಖಾತೆ ತೆರೆಯದ ಜೆಡಿಎಸ್

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಶೀತಲ ಸಮರ ಆರಂಭವಾಗಿದೆ. ಇಲ್ಲಿ ಬಣಗಳ ರಾಜಕೀಯ ಸದ್ದು ಮಾಡುತ್ತಿದ್ದು, ಆಕಾಂಕ್ಷಿಗಳು ಗಾಡ್ ಫಾದರ್‌ಗಳ ಮೊರೆಹೋಗಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದು ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಒಂದಷ್ಟು ಮತಪಡೆದಿದ್ದ ಹರೀಶ್ ಗೌಡ ಸದ್ಯ ಕಾಂಗ್ರೆಸ್ ನಲ್ಲಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಅವರಿಗೆ ಸ್ಪರ್ಧಿಯಾಗಿ ಮೂಲ ಕಾಂಗ್ರೆಸ್‌ನ ಮಾಜಿ ಮೇಯರ್, ಮಾಜಿ ಶಾಸಕರೂ ಆಗಿರುವ ವಾಸು ಇದ್ದಾರೆ. ಈ ಪೈಕಿ ಒಬ್ಬರು ಸಿದ್ದರಾಮಯ್ಯ ಅವರಿಗೆ ಆಪ್ತರಾದರೆ ಮತ್ತೊಬ್ಬರು ಡಿಕೆಶಿ ಬೆಂಬಲಿಗರಾಗಿದ್ದಾರೆ. ಇವರ ನಡುವೆ ಟಿಕೆಟ್ ಯಾರಿಗೆ ಸಿಗಬಹುದು ಎಂಬ ಕುತೂಹಲ ಕ್ಷೇತ್ರದಲ್ಲಿದೆ.

ಈ ಕ್ಷೇತ್ರದಲ್ಲಿ ಒಕ್ಕಲಿಗರು ನಿರ್ಣಾಯಕರಾಗಿದ್ದು, ಒಕ್ಕಲಿಗ ಸಮುದಾಯದ ನಾಯಕರು ಹೆಚ್ಚಾಗಿ ಗೆಲುವು ಸಾಧಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದ ದಿ.ಶಂಕರಲಿಂಗೇಗೌಡರು ಅತಿಹೆಚ್ಚು ಬಾರಿ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲ ಈ ಕ್ಷೇತ್ರದಲ್ಲಿ ಬಿಜೆಪಿ ಐದು ಬಾರಿ ಗೆಲವು ಕಂಡಿದೆ. ಉಳಿದಂತೆ ಆಗಿನ ಜನತಾ ಪಕ್ಷ ಹೆಚ್ಚಿನ ಬಾರಿ ಗೆದ್ದಿತ್ತು. ಜನತಾ ಪಕ್ಷ ಒಡೆದು ಹಂಚಿ ಹೋದ ಬಳಿಕ ಬಿಜೆಪಿಗೆ ಈ ಕ್ಷೇತ್ರ ವರದಾನವಾಗಿದೆ. ಜೆಡಿಎಸ್ ಇದುವರೆಗೆ ಖಾತೆ ತೆರೆದಿಲ್ಲ. ಈ ಸಲದ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಬಯಕೆಯೂ ಜೆಡಿಎಸ್‍ ನಲ್ಲಿದೆ.

ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಅಭ್ಯರ್ಥಿಗಳು ಯಾರ್ಯಾರು..?

ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಅಭ್ಯರ್ಥಿಗಳು ಯಾರ್ಯಾರು..?

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾವಂತರೇ ತುಂಬಿದ್ದು, ಒಕ್ಕಲಿಗರ ಭದ್ರಕೋಟೆಯೂ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಒಕ್ಕಲಿಗ ನಾಯಕರೇ ಆಯ್ಕೆಯಾಗಿ ಬಂದಿದ್ದಾರೆ. ಕ್ಷೇತ್ರ ಮೈಸೂರು ನಗರದ ಹೃದಯಭಾಗದಲ್ಲಿದ್ದು, ಕ್ಷೇತ್ರಕ್ಕೆ ಸುತ್ತುಹೊಡೆದರೆ ನೂರು ವರ್ಷ ಪೂರೈಸಿದ ವಿಶ್ವವಿದ್ಯಾಲಯ, ಕೆ.ಆರ್.ಆಸ್ಪತ್ರೆ, ಮಹಾರಾಣಿ ಕಾಲೇಜು ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದಲ್ಲಿವೆ. ಜೊತೆಗೆ ಶಿಕ್ಷಿತರ ಕ್ಷೇತ್ರವೆಂಬ ಹೆಗ್ಗಳಿಕೆಯೂ ಇದೆ. ಇದುವರೆಗೆ ನಡೆದಿರುವ ಹನ್ನೊಂದು ಚುನಾವಣೆಗಳಲ್ಲಿ ಐದು ಬಾರಿ ಬಿಜೆಪಿ, ಮೂರು ಬಾರಿ ಜನತಾಪಕ್ಷ, ಎರಡು ಬಾರಿ ಕಾಂಗ್ರೆಸ್ ಹಾಗೂ ಒಮ್ಮೆ ಎಸ್ಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಯಾರಿಗೆ ಒಲಿಯಲಿದೆ ಚಾಮರಾಜ ಕ್ಷೇತ್ರದ ಟಿಕೆಟ್‌

ಯಾರಿಗೆ ಒಲಿಯಲಿದೆ ಚಾಮರಾಜ ಕ್ಷೇತ್ರದ ಟಿಕೆಟ್‌

ಜೆಡಿಎಸ್ ಚಾಮರಾಜ ಕ್ಷೇತ್ರದಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಬೇರೆ ಪಕ್ಷಗಳಿಗಿಂತ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳು ಜೆಡಿಎಸ್ ನಲ್ಲಿದ್ದಾರೆ. ಸದ್ಯ ರಾಜಕೀಯ ಮಾಹಿತಿ ಪ್ರಕಾರ ನಗರ ಪಾಲಿಕೆ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ನಗರ ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ್ (ಅವ್ವ ಮಾದೇಶ), ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಆಕಾಂಕ್ಷಿಯಾಗಿದ್ದಾರೆ. ಆದರೆ ಕಳೆದ ಬಾರಿ ಅಂದರೆ 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ರಾಜಕೀಯದಿಂದ ದೂರ ಸರಿದಿದ್ದಾರೆ. ಹೀಗಾಗಿ ಮೂವರು ಪ್ರಬಲ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದರ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ.

ಮತದಾರರ ಒಲವು ಯಾರ ಕಡೆ..?

ಮತದಾರರ ಒಲವು ಯಾರ ಕಡೆ..?

ಚಾಮರಾಜ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಗಟ್ಟಿಯಾಗಿ ನೆಲೆಯೂರಿದ್ದು, ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಸಾಧಿಸಲು ಪಣತೊಟ್ಟಿವೆ. ಮೂರು ಪಕ್ಷಗಳಿಂದಲೂ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿದ್ದೇ ಆದರೆ ತೀವ್ರ ಪೈಪೋಟಿ ಏರ್ಪಡುವ ಎಲ್ಲ ಸಾಧ್ಯತೆಗಳಿವೆ. ಒಕ್ಕಲಿಗ ನಾಯಕರ ನಡುವೆ ಏರ್ಪಡುವ ಜಿದ್ದಾಜಿದ್ದಿಯಲ್ಲಿ ಗೆಲುವು ಯಾರಿಗೆ ಎನ್ನುವುದನ್ನು ನಿರ್ಧರಿಸುವವರು ಮತದಾರರು ಆಗಿರುವುದರಿಂದ ಅವರನ್ನು ಸೆಳೆಯಲು ತಂತ್ರಗಳು ಈಗಿನಿಂದಲೇ ಆರಂಭವಾಗಿದೆ. ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+