ಕೊಳ್ಳೇಗಾಲದಲ್ಲಿ ಭಾರೀ ಪೈಪೋಟಿ: ಎನ್.ಮಹೇಶ್‌ಗೆ ಟಿಕೆಟ್ ನೀಡುತ್ತಾ ಬಿಜೆಪಿ ಹೈಕಮಾಂಡ್?
ಚಾಮರಾಜನಗರ, ಡಿಸೆಂಬರ್29: ಹಲವು ವರ್ಷಗಳ ಕಾಲ ಬಹುಜನ ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿ ಕರ್ನಾಟಕದಲ್ಲಿ ಖಾತೆ ತೆರೆಯುವುದರೊಂದಿಗೆ ಮೊದಲ ಬಾರಿಗೆ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದ ಬಿಎಸ್‌ಪಿಗೆ ವಿದಾಯ ಹೇಳಿ ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಎನ್.ಮಹೇಶ್ ಅವರಿಗೆ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಗುತ್ತಾ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಮೇಲ್ನೋಟಕ್ಕೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಎನ್.ಮಹೇಶ್ ಅವರು ಕಾಣಿಸುತ್ತಿದ್ದರೂ ಪಕ್ಷಕ್ಕಾಗಿ ದುಡಿದು ಒಂದು ಬಾರಿ ಬಿಜೆಪಿಯಿಂದ ಗೆಲುವು ಪಡೆದು ಶಾಸಕರಾಗಿದ್ದ ಜಿ.ಎನ್.ನಂಜುಂಡಸ್ವಾಮಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಪುಟ್ಟಸ್ವಾಮಿ, ಕನಕಳ್ಳಿ ರಾಚಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಕಲಾಬಾಯಿ ಎಂಬುವರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಇವರೆಲ್ಲರ ನಡುವೆಯೂ ಎನ್.ಮಹೇಶ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಖಚಿತ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಬಿಎಸ್‌ಪಿ ಪಕ್ಷದ ಬೆಂಬಲ ಪಡೆದಿತ್ತು. ಅದರಂತೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಅದಾಗಲೇ ಬಿಎಸ್‌ಪಿ ಪಕ್ಷದಲ್ಲಿ ಗುರುತಿಸಿಕೊಂಡು ಹತ್ತು ಹಲವು ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದ ಎನ್.ಮಹೇಶ್ ಅವರು ಸ್ಪರ್ಧಿಸಿದ್ದರು. ಅವರಿಗೆ ಜೆಡಿಎಸ್ ಕೂಡ ಬೆಂಬಲ ನೀಡಿತ್ತು. ಆದರೆ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎನ್.ನಂಜುಂಡಸ್ವಾಮಿ ಅವರು ಭಾರೀ ಪೈಪೋಟಿ ನೀಡಿದ್ದರಲ್ಲದೆ ಸುಮಾರು 32ಸಾವಿರದಷ್ಟು ಮತಗಳನ್ನು ಪಡೆದಿದ್ದರು.

ಯಾರಿಗೆ ಟಿಕೆಟ್ ನೀಡುತ್ತೆ ಬಿಜೆಪಿ ಹೈಕಮಾಂಡ್..?
ಈ ಬಾರಿ ಪ್ರಬಲ ನಾಯಕರು ಒಂದೇ ಪಕ್ಷದಲ್ಲಿ ಇರುವುದರಿಂದ ಒಬ್ಬರನೊಬ್ಬರು ಸಹಕಾರ ನೀಡಿದರೆ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡುವ ಅಭ್ಯರ್ಥಿ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ. ಆದರೆ ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಅಷ್ಟೇ ಮುಖ್ಯವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯಬೇಕಾದರೆ ಬಿಜೆಪಿ ನಾಯಕರು ಗೆಲ್ಲುವ ಅಭ್ಯರ್ಥಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
ಸದ್ಯ ಎನ್.ಮಹೇಶ್ ಅವರು ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವುದರಿಂದ ಮತ್ತು ಸಮ್ಮಿಶ್ರ ಸರ್ಕಾರದ ಪತನದ ವೇಳೆ ಹಾಗೂ ನಂತರದ ದಿನಗಳಲ್ಲಿ ಬಿಜೆಪಿಗೆ ಬೆಂಬಲವಾಗಿ ನಿಂತಿರುವುದರಿಂದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಕೃಪಾಶೀರ್ವಾದ ಅವರ ಮೇಲಿದೆ. ಹೀಗಾಗಿ ಅವರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಅವಕಾಶ ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ. ಜಿ.ಎನ್.ನಂಜುಂಡಸ್ವಾಮಿ ಅವರು 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ದರು ಅದಾದ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಸದ್ಯ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ರಾಜಕೀಯ ಲೆಕ್ಕಾಚಾರ ಹೇಗಿರಲಿದೆ? ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ? ನಂತರದ ಬೆಳವಣಿಗೆ ಹೇಗಿದೆ? ಎಂಬ ಕುತೂಹಲ ಬಿಜೆಪಿಯೊಳಗಿದೆ.

ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರು ಟಿಕೆಟ್‌ಗಾಗಿ ಹಾತೊರೆಯುತ್ತಿರುವುದು ಕಾಣಿಸುತ್ತಿದೆ. ಇದು ಕಾಂಗ್ರೆಸ್ ನ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ತಲೆನೋವು ತಂದೊಡ್ಡಿದರೂ ಅಚ್ಚರಿಪಡಬೇಕಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಶಕ್ತಿ ಇಮ್ಮಡಿಯಾಗಿದೆ. ಹೀಗಾಗಿ ಅವರ ಎದುರು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ಆಕಾಂಕ್ಷಿಗಳಾಗಿರುವ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಎಸ್. ಜಯಣ್ಣ ಮತ್ತು ಎಸ್.ಬಾಲರಾಜ್ ಅವರು ಘಟಾನುಘಟಿಗಳಾಗಿದ್ದು ಈ ಮೂವರಲ್ಲಿ ಯಾರು ಕಾಂಗ್ರೆಸ್ ಅಭ್ಯರ್ಥಿಯಾಗಬಹುದು ಎನ್ನುವುದು ಕುತೂಹಲಕಾರಿಯಾಗಿದೆ.

ಟಿಕೆಟ್‌ಗಾಗಿ ಭಾರೀ ಪೈಪೋಟಿ
ಈ ಮೂವರ ಪೈಕಿ 2013ರಲ್ಲಿ ಕಾಂಗ್ರೆಸ್‌ನಿಂದ ಎಸ್.ಜಯಣ್ಣ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಎಸ್.ಬಾಲರಾಜ್ ಕ್ಷೇತ್ರದಲ್ಲಿ ಚಿರ ಪರಿಚಿತರಗಿದ್ದು ಕಾಂಗ್ರೆಸ್‌ನಲ್ಲಿ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಹೀಗಾಗಿ ಟಿಕೆಟ್ ತಮಗೆ ಸಿಗಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿಕೆಟ್‌ಗಾಗಿ ಅರ್ಜಿ ಕೂಡ ಸಲ್ಲಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಘಟಾನುಘಟಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಾಗಿ ಕಾಣಿಸುತ್ತಿರುವುದರಿಂದ ಯಾರ ಮೇಲೆ ಹೈಕಮಾಂಡ್ ಕೃಪೆ ತೋರುತ್ತದೆ ಎಂಬುದೇ ನಿಗೂಢವಾಗಿದೆ.

ಬಿಜೆಪಿ ಸೋಲಿಸಲು ಬಿಎಸ್‌ಪಿ ತಂತ್ರವೇನು..?
ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಎನ್.ಮಹೇಶ್ ಶ್ರಮವಿದೆ. ಅವರ ನೆರಳಿನಲ್ಲಿ ಬಹಳಷ್ಟು ನಾಯಕರು ಬೆಳೆದಿದ್ದಾರೆ. ಕೆಲವರು ಮಹೇಶ್ ಅವರೊಂದಿಗೆ ಬಿಜೆಪಿಯತ್ತ ಮುಖ ಮಾಡಿದರೆ ಮತ್ತೊಂದಷ್ಟು ಮಂದಿ ಬಿಎಸ್‌ಪಿಯಲ್ಲಿಯೇ ಗುರುತಿಸಿಕೊಂಡು 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿದ್ದಾರೆ. ಆ ಪೈಕಿ ನಾಗರಾಜ್(ಕಮಲ) ಕೂಡ ಒಬ್ಬರು.
ಇವರು 2015 ರಲ್ಲಿ ಬಿಜೆಪಿಯಲ್ಲಿದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ತದ ನಂತರ ಬಿಎ್‌ಪಿ ಸೇರಿ ಸದ್ಯ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಇವರು ಕೂಡ ಬಿಎಸ್‌ಪಿ ಪಕ್ಷದಿಂದ ಪ್ರಬಲ ಅಭ್ಯರ್ಥಿಯಾಗಿದ್ದಾರೆ, ಇದೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹೈಕೋರ್ಟ್ ವಕೀಲ ಎಚ್.ಮೋಹನ್ ಕುಮಾರ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ತೋರಿದ್ದಾರೆ. ಒಟ್ಟಾರೆ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್‌ಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೂರು ಪಕ್ಷಗಳಿಂದ ಯಾರು ಅಭ್ಯರ್ಥಿಗಳು ಎನ್ನುವುದರ ಮೇಲೆ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಆರಂಭವಾಗಲಿದೆ.u












Click it and Unblock the Notifications